– ವರನಿಂದ ಲಕ್ಷ ಲಕ್ಷ ಪಡೆದಿದ್ದ ಬ್ರೋಕರ್
ಜೈಪುರ: ಮದುವೆಯಾದ ನಾಲ್ಕನೇ ದಿನಕ್ಕೆ ವಧು ಹೇಳಿದ ಸತ್ಯ ಕೇಳಿ ಪತಿ ತಲೆ ಮೇಲೆ ಕೈ ಹೊತ್ತು ಕುಳಿತಿರುವ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ. ವರ ವಧುವಿನ ಪೋಷಕರಿಗೆ 3.5 ಲಕ್ಷ ರೂಪಾಯಿ ನೀಡಿದ್ದನು.
20 ದಿನಗಳ ಹಿಂದೆ ವರ ಉಮ್ಮೇದ್ ಸಿಂಗ್ ಮನೆಗೆ ಬಂದ ಗಂಗಾ ಸಿಂಗ್ ಮತ್ತು ನಗೌರ ಗ್ರಾಮದ ಕೆಲವರು ಮದುವೆ ಮಾಡೋದಾಗಿ ಹೇಳಿದ್ದರು. ಹಾಗೆ ಕನ್ಯೆ ನೋಡುವ ಶಾಸ್ತ್ರಕ್ಕೆ ಹೋಗೋಣ ಅಂತ ಪುಸಲಾಯಿಸಿದ್ದರು. ಅದೇ ರೀತಿ ಉಮ್ಮೇದ್ ಸಿಂಗ್ ಸೋದರರು ಮತ್ತು ಸಂಬಂಧಿ ಜೊತೆ ಹೋಗಿ ಯುವತಿಯನ್ನ ನೋಡಿಕೊಂಡು ಬಂದಿದ್ದನು. ಸಂಪ್ರದಾಯದಂತೆ 500 ರೂಪಾಯಿ ನೀಡಿ ಮುಖ ನೋಡುವ ಶಾಸ್ತ್ರವ ನಡೆದಿತ್ತು.
Advertisement
Advertisement
ಲಕ್ಷ ಲಕ್ಷ ಹಣ ಕಿತ್ಕೊಂಡ್ರು: ಮದುವೆ ಮುನ್ನ ವಧುವಿನ ತಂದೆ ಆರ್ಥಿಕ ಸಂಕಷ್ಟದಲ್ಲಿದ್ದಾನೆ ಎಂದು ಉಮ್ಮೇದ್ ಬಳಿಯಿಂದ ಗಂಗಾಸಿಂಗ್ 3.5 ಲಕ್ಷ ರೂ. ಪಡೆದುಕೊಂಡಿದ್ದನು. ಡಿಸೆಂಬರ್ ಏಳರಂದು ಕುಟುಂಬಸ್ಥರ ಜೊತೆ ಉಮ್ಮೇದ್ ಸಿಂಗ್ ಯುವತಿಯನ್ನ ನೋಡಲು ಹೋದಾಗಲೂ ಗಂಗಾ ಸಿಂಗ್ ಕುಂಟು ನೆಪಗಳನ್ನ ಕೇಳಿ ಎರಡು ಲಕ್ಷ ರೂ. ಪಡೆದಿದ್ದನು. ಮದುವೆ ನಡೆಯುತ್ತಿರುವ ಬಗ್ಗೆ ಯಾರಿಗೂ ಹೇಳಬೇಡಿ ಎಂದು ಎರಡೂ ಕುಟುಂಬಗಳಿಗೆ ಗಂಗಾ ಸಿಂಗ್ ಹೇಳಿದ್ದನು.
Advertisement
Advertisement
ಡಿಸೆಂಬರ್ 11ರಂದು ಕುದುರೆ ಏರಿ ಉಮ್ಮೇದ್ ಸಿಂಗ್ ವಧುವಿನ ಮನೆಯತ್ತ ಹೊರಟಿದ್ದನು. ಈ ವೇಳೆ ವಧುವಿನ ಮನೆಯಲ್ಲಿ ಸಾವಾಗಿದೆ, ಹಾಗಾಗಿ ಎಲ್ಲರೂ ನೇರವಾಗಿ ಮಾಂಗಲೋಧ ಗ್ರಾಮಕ್ಕೆ ಬನ್ನಿ ಅಂತ ಹೇಳಿ ಉಮ್ಮೇದ್ ನಿಂದ 1.5 ಲಕ್ಷ ರೂ. ಕಿತ್ತುಕೊಂಡಿದ್ದನು.
ವಧು ಬದಲಾವಣೆ: ಮದುವೆ ಮನೆಯಲ್ಲಿ ತೋರಿಸಿದ ಯುವತಿ ಇವಳು ಅಲ್ಲ ಎಂದು ಕುಟುಂಬಸ್ಥರಿಗೆ ತಿಳಿದಿದೆ. ಆದ್ರೂ ಉಮ್ಮೇದ್ ಸಿಂಗ್ ಬದಲಿಯಾಗಿದ್ದ ಕಾಂತಾ ಹೆಸರಿನ ಮಹಿಳೆಯನ್ನ ಮದುವೆ ಆಗಿದ್ದಾನೆ. ಮದುವೆಯಾದ ಎರಡು ದಿನದ ಬಳಿಕ ಶಾಸ್ತ್ರದ ಪ್ರಕಾರ ವಧುವನ್ನ ತವರಿಗೆ ಕರೆದುಕೊಂಡು ಹೋಗಲು ಗಂಗಾಸಿಂಗ್ ಬಂದಿದ್ದನು. ತವರಿಗೆ ಹೋಗುವ ಮುನ್ನ ಪತ್ನಿಗೆ ಉಮ್ಮೇದ್ ಸಿಂಗ್ ಹೊರ ಮೊಬೈಲ್ ಗಿಫ್ಟ್ ನೀಡಿದ್ದನು.
ನಾಲ್ಕನೇ ದಿನಕ್ಕೆ ಬಂತು ಕರೆ: ಮದುವೆಯಾದ ನಾಲ್ಕನೇ ದಿನಕ್ಕೆ ಪತಿಗೆ ಫೋನ್ ಮಾಡಿದ ಕಾಂತಾ, ಗಂಗಾಸಿಂಗ್ ನಿಮಗೆ ಮೋಸ ಮಾಡಿದ್ದಾನೆ. ಈಗ ನನ್ನನ್ನು ಮಾರ್ಗ ಮಧ್ಯೆಯೇ ಬಿಟ್ಟು ಹೋಗಿದ್ದಾನೆ. ಮದುವೆ ಮನೆಯಲ್ಲಿ ಅಡುಗೆ ಕೆಲಸಕ್ಕೆ ಬಂದಿದ್ದ ನನಗೆ ಬೆದರಿಕೆ ಹಾಕಿ ವಧುವಿನ ಸ್ಥಾನದಲ್ಲಿ ಕೂರಿಸಿದರು. ನಾನು ಏಳು ದಿನದ ಅಡುಗೆ ಕೆಲಸಕ್ಕೆ ದಿನಕ್ಕೆ ಸಾವಿರ ರೂಪಾಯಿಯಂತೆ ನಗೌರಗೆ ಗಂಗಾಸಿಂಗ್ ನನ್ನ ಕರೆ ತಂದಿದ್ದನು. ಅವರ ಬೆದರಿಕೆಯಿಂದ ನಾನು ನಿಮ್ಮನ್ನ ಮದುವೆಯಾಗಿದ್ದೇನೆ ಎಂದು ಹೇಳಿದ್ದಾಳೆ.
ಈ ವಿಷಯ ತಿಳಿದ ಉಮ್ಮೇದ್ ಸಿಂಗ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗಂಗಾ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾನೆ. ಪೊಲೀಸರು ಗಂಗಾ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 420, 406ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.