-ಲಾಕರ್ ಕೀಯನ್ನ ಮನೆಯಲ್ಲೇ ಇಟ್ಟಿದ್ದ ಮಾಲೀಕ
ಚಿಕ್ಕಮಗಳೂರು: ಮಗಳ ಮದುವೆ ಮುಗಿಸಿ ಬರುವಷ್ಟರಲ್ಲಿ ಮನೆಯಲ್ಲಿದ್ದ ಸುಮಾರು 2 ಕೆ.ಜಿ ಗೂ ಅಧಿಕ ಚಿನ್ನಾಭರಣ ಹಾಗೂ 10 ಕೆ.ಜಿಗೂ ಅಧಿಕ ಬೆಳ್ಳಿ ವಸ್ತುಗಳು ಕಳ್ಳತನವಾಗಿರೋ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ನಗರದ ಎಂ.ಜಿ.ರಸ್ತೆಯ ಸ್ವರ್ಣಾಂಜಲಿ ಜ್ಯುವೆಲರಿ ಶಾಪ್ ಮಾಲೀಕ ಸುರೇಶ್ ಮನೆಯಲ್ಲಿ ಕಳ್ಳವಾಗಿದ್ದು, ಕೊರೊನಾ ಕಾರಣದಿಂದ ವ್ಯಾಪಾರದಲ್ಲಿ ನಷ್ಟವಾಗಿ ಅಂಗಡಿಯಲ್ಲಿದ್ದ ಚಿನ್ನವನ್ನು ಸುರೇಶ್ ಮನೆಗೆ ತಂದಿಟ್ಟಿದ್ದರು. ಅಕ್ಟೋಬರ್ 27 ರಂದು ಹಾಸನದಲ್ಲಿ ಮಗಳ ಮದುವೆ ಇತ್ತು. ಕುಟುಂಬಸ್ಥರೆಲ್ಲಾ ಮದುವೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿದ್ದ ಚಿನ್ನ-ಬೆಳ್ಳಿಯನ್ನು ಕಳ್ಳತನ ಮಾಡಲಾಗಿದೆ.
Advertisement
Advertisement
ಮನೆಯ ಮುಂಭಾಗದಿಂದ ಸಿಸಿಟಿವಿಯಲ್ಲಿ ಅಳವಡಿಸಿರುವುದರಿಂದ ಮನೆಯ ಹಿಂಭಾಗದ ರಾಜಕಾಲುವೆಯ ಕಡೆಯಿಂದ ಮನೆಯಿಂದ ಮನೆಗೆ ಹತ್ತಿ ರಮೇಶ್ ಅವರ ಬಾಲ್ಕನಿಗೆ ಕಳ್ಳರು ಎಂಟ್ರಿ ಕೊಟ್ಟಿದ್ದು, ಮನೆಯ ಮೇಲಿನ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ಬಂದವರು ಲಾಕರ್ ನಲ್ಲಿದ್ದ ಚಿನ್ನ-ಬೆಳ್ಳಿಯನ್ನು ದೋಚಿದ್ದಾರೆ. ಸುರೇಶ್ ಅವರು ಕೂಡ ಅಂಗಡಿಯಲ್ಲಿದ್ದ ಚಿನ್ನವನ್ನ ತಂದು ಮನೆಯಲ್ಲಿ ಲಾಕರ್ ನಲ್ಲಿಟ್ಟು ಲಾಕರ್ ಕೀಯನ್ನು ಮನೆಯ ಡ್ರಾದಲ್ಲಿ ಇಟ್ಟಿದ್ದರು. ಕಳ್ಳರಿಗೆ ಲಾಕರ್ ಒಡೆಯುವ ಪ್ರಮೇಯ ಇಲ್ಲದೇ, ಡ್ರಾದಿಂದ ಕೀ ತೆಗೆದು ಲಾಕರ್ ನಲ್ಲಿದ್ದ ವಸ್ತುಗಳನ್ನು ದೋಚಿದ್ದಾರೆ.
Advertisement
Advertisement
ಕಳ್ಳತನ ಬಳಿಕ ಮತ್ತೆ ಬಂದ ದಾರಿಯಲ್ಲೇ ಕಳ್ಳರು ಹಿಂದಿರುಗಿದ್ದು, ಸಿಸಿಟಿವಿಯಲ್ಲೂ ಕೂಡ ಕಳ್ಳರ ಸುಳಿವು ಸಿಕ್ಕಿಲ್ಲ. ಕಳ್ಳರು ದೋಚಿರೋ ಚಿನ್ನ-ಬೆಳ್ಳಿ ಸುಮಾರು ಎರಡೂವರೆ ಕೋಟಿ ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. ಸುಮಾರು ಎರಡರಿಂದ ಮೂರು ಕೆಜಿಯಷ್ಟು ಚಿನ್ನ ಹಾಗೂ ಅಂದಾಜು 10 ಕೆ.ಜಿ ಗೂ ಅಧಿಕ ಬೆಳ್ಳಿಯನ್ನ ಕಳ್ಳತನ ಮಾಡಿದ್ದಾರೆ. ಎರಡರ ಮೌಲ್ಯ ಅಂದಾಜು ಎರಡೂವರೆ ಕೋಟಿಗೂ ಅಧಿಕ ಎಂಬ ಮಾಹಿತಿ ಲಭಿಸಿದೆ.
ಒಂದು ಮಾಹಿತಿ ಪ್ರಕಾರ ಚಿನ್ನವನ್ನು ಕದ್ದ ಕಳ್ಳರು ಬೆಳ್ಳಿಯ ಸಾಮಾನುಗಳನ್ನು ಹೊತ್ತೊಯ್ಯಲಾಗದೆ ಅಲ್ಲೇ ಬಿಟ್ಟು ಹೋಗಿದ್ದಾರೆಂದು ಹೇಳಲಾಗುತ್ತಿದೆ. ಮನೆ ಮಾಲೀಕ ಸುರೇಶ್ ಅಜ್ಜನ ಕಾಲದಿಂದಲೂ ಗೋಲ್ಡ್ ಮರ್ಚೆಂಟ್. ಹಾಗಾಗಿ ಅಂಗಡಿಯಲ್ಲಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಮನೆಯಲ್ಲೇ ತಂದು ಇಟ್ಟುಕೊಂಡಿದ್ದರು. ಸ್ವರ್ಣಾಂಜಲಿ ಜ್ಯುವೆಲರಿ ಶಾಪ್ ಬಾಗಿಲು ಹಾಕಿದ ಮೇಲೆ ಆ ಜಾಗದಲ್ಲಿ ಈಗ ಎಲೆಕ್ಟ್ರಾನಿಕ್ಸ್ ಅಂಗಡಿಯ ಮಳಿಗೆ ಇದೆ. ಒಂದೂವರೆ ತಿಂಗಳ ಹಿಂದಷ್ಟೆ ಹೊಸ ಮನೆಗೆ ಬಂದಿದ್ದ ಸುರೇಶ್ ಕುಟುಂಬ ಅಂಗಡಿಯಲ್ಲಿದ್ದ ಚಿನ್ನವನ್ನು ಮನೆಯಲ್ಲಿ ಜೋಪಾನ ಮಾಡಿಟ್ಟಿದ್ದರು. ಆದರೆ ಮದುವೆ ಮುಗಿಸಿಕೊಂಡು ಬಂದು ಮನೆ ಸ್ಥಿತಿ ಕಂಡ ಸುರೇಶ್ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಕೇವಲ ಸುರೇಶ್ ಕುಟುಂಬಕಷ್ಟೇ ಅಲ್ಲದೆ ಈ ಪ್ರಕರಣದಿಂದ ಇಡೀ ಚಿಕ್ಕಮಗಳೂರು ಜಿಲ್ಲೆಗೆ ಶಾಕ್ ಆಗಿದೆ.
ನಿನ್ನೆ ರಾತ್ರಿ ನಗರದ ಕಲ್ಯಾಣ ನಗರದಲ್ಲಿ ಮತ್ತೊಂದು ಮನೆ ಕಳ್ಳತನವಾಗಿದೆ. ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೋ ವಿಜಯ ಎಂಬುವರ ಮನೆ ಕೂಡ ಕಳ್ಳತನವಾಗಿದೆ. ಅವರ ಮನೆಯಲ್ಲೂ ಕೂಡ ಸುಮಾರು ಎರಡು ಲಕ್ಷ ಮೌಲ್ಯದ ಚಿನ್ನಾಭರಣವನ್ನ ದೋಚಿದ್ದಾರೆ. ಹತ್ತೇ ದಿನದಲ್ಲಿ ಜಿಲ್ಲಾ ಕೇಂದ್ರದಲ್ಲಿ ನಡೆದ ಈ ಎರಡು ಕಳ್ಳತನ ಪ್ರಕರಣಗಳು ಇಡೀ ನಗರದ ಜನರನ್ನು ಭಯ ವಾತಾವರಣಕ್ಕೆ ದೂಡಿದೆ. ಜಿಲ್ಲೆಯ ಜನ ಕೂಡ ಪೊಲೀಸರ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಿ ನಗರದ ಜನ ನೆಮ್ಮದಿಯಿಂದ ಇರಲು ಅನುವು ಮಾಡಿಕೊಡಬೇಕೆಂದು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.