– ಮದುವೆ ಮಾಡಿಕೋ ಎಂದಿದ್ದೆ ತಪ್ಪಾಯ್ತು
– 3 ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು
ಲಕ್ನೋ: 19 ವರ್ಷದ ಯುವತಿಯನ್ನು ತಾಯಿ ಮತ್ತು ಆಕೆಯ ಪ್ರಿಯಕರ ಸೇರಿಕೊಂಡು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಉಸ್ಮಾ ಮೃತ ಯುವತಿ. ಆರೋಪಿ ತಾಯಿ ಮುಕೇಶಾ ಮತ್ತು ಪ್ರಿಯಕರ ಕೌಶರ್ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ಆರೋಪಿ ತಾಯಿ ಎಲ್ಲರನ್ನು ದಾರಿ ತಪ್ಪಿಸಲು ಒಂದು ಸುಳ್ಳಿನ ಕಥೆಯನ್ನು ಹೇಳಿದ್ದಳು. ಆದರೆ ಪೊಲೀಸರು ಕೇವಲ ಮೂರು ಗಂಟೆಗಳಲ್ಲಿ ಪ್ರಕರಣವನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Advertisement
Advertisement
ಎನಿದು ಪ್ರಕರಣ?
ಸುಭಾಷ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಸ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂವರು ಹಲ್ಲೆಕೋರರು ಮನೆಗೆ ನುಗ್ಗಿ ಉಸ್ಮಾ ಮತ್ತು ತಾಯಿ ಮುಕೇಶಾಳ ಮೇಲೆ ಮುಂಜಾನೆ ಹಲ್ಲೆ ಮಾಡಿದ್ದಾರೆ. ದಾಳಿಯಲ್ಲಿ ಉಸ್ಮಾ ಸಾವನ್ನಪ್ಪಿದ್ದರೆ, ಮುಕೇಶಾ ಗಾಯಗೊಂಡಿದ್ದಳು. ಘಟನೆಯ ಸಮಯದಲ್ಲಿ ಉಳಿದವರೆಲ್ಲರೂ ಮಲಗಿದ್ದರು. ಮುಕೇಶಾ ಕೂಗಿಕೊಂಡಾಗ ಎಲ್ಲರಿಗೆ ಎಚ್ಚರಿಯಾಗಿದ್ದು, ಅಷ್ಟರಲ್ಲಿ ಹಲ್ಲೆಕೋರರು ಮನೆ ಬಿಟ್ಟು ಹೋಗಿದ್ದರು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.
Advertisement
Advertisement
ತನಿಖೆಯ ಸಮಯದಲ್ಲಿ ಮೃತ ಉಷ್ಮಾ ಸ್ಥಳಿಯ ನಿವಾಸಿ ಕೌಶರ್ ನನ್ನು ಪ್ರೀತಿಸುತ್ತಿದ್ದಳು ಎಂದು ಪೊಲೀಸರಿಗೆ ತಿಳಿದಿದೆ. ಆದರೆ ಆರೋಪಿ ಕೌಶರ್ ಮಗಳನ್ನು ಪ್ರೀತಿಸುತ್ತಿದ್ದರೂ ಆಕೆಯ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಇತ್ತೀಚೆಗೆ ಹುಡುಗಿ ಮದುವೆ ಮಾಡಿಕೊಳ್ಳುವಂತೆ ಕೌಶರ್ ಗೆ ಒತ್ತಡ ಹಾಕುತ್ತಿದ್ದಳು. ಇದರಿಂದ ಕೋಪಗೊಂಡ ಕೌಶರ್ ಮುಂಜಾನೆ ಉಸ್ಮಾ ಮನೆಗೆ ಬಂದು ಇತರರು ಮಲಗಿದ್ದಾಗ ತಾಯಿ ಮತ್ತು ಮಗಳು ಇಬ್ಬರನ್ನು ರೋಮಿಗೆ ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಶೈಲೇಶ್ ಪಾಂಡೆ ಹೇಳಿದ್ದಾರೆ.
ಉಸ್ಮಾಳನ್ನು ಮತ್ತೊಂದು ಕೋಣೆಗೆ ಕರೆದುಕೊಂಡು ಹೋದ ನಂತರ ಕೌಶರ್ ಮತ್ತು ಮುಕೇಶಾ ದುಪಟ್ಟಾದಿಂದ ಉಸ್ಮಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಆರೋಪಿ ಮುಕೇಶಾ ಚಾಕುವಿನಿಂದ ಗಾಯಗೊಳಿಸುವಂತೆ ಕೌಶರ್ ನನ್ನು ಕೇಳಿಕೊಂಡಿದ್ದಾಳೆ. ಇದರಿಂದ ಎಲ್ಲರಿಗೂ ಸುಳ್ಳು ಕಥೆಯನ್ನು ಹೇಳಿ ದಾರಿ ತಪ್ಪಿಸಬಹುದು ಎಂದು ಆರೋಪಿ ಮುಕೇಶಾ ತಿಳಿದುಕೊಂಡಿದ್ದಳು. ಅದರಂತೆಯೇ ಕೌಶರ್ ಮನೆಯಿಂದ ಹೊರ ಹೋಗುತ್ತಿದ್ದಂತೆ ಕೂಗಿ ಕೊಂಡಿದ್ದಾಳೆ. ಆಗ ಮನೆಯವರು ಬಂದು ನೋಡುವಷ್ಟರಲ್ಲಿ ಉಸ್ಮಾ ಮೃತಪಟ್ಟಿದ್ದಳು ಎಂದು ಪಾಂಡೆ ತಿಳಿಸಿದರು.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದರು. ನಂತರ ತಾಯಿಯ ನಡವಳಿಕೆಯಿಂದ ಅನುಮಾನಗೊಂಡು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಪ್ರಕರಣದ ಸತ್ಯ ಬಯಲಾಗಿದೆ. ಕೌಶರ್ ಕುಟುಂಬದವರಿಗೆ ಮಹಿಳೆ ಮತ್ತು ಆಕೆಯ ಮಗಳ ಜೊತೆ ಹೊಂದಿದ್ದ ಸಂಬಂಧದ ಬಗ್ಗೆ ತಿಳಿದಿತ್ತು. ಇದರಿಂದ ಆಗಾಗ ಅವರ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಮೂರು ಗಂಟೆಗಳಲ್ಲಿ ಪ್ರಕರಣ ಬಗೆಹರಿಸಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅಪರಾಧದಲ್ಲಿ ಬಳಸಿದ ದುಪಟ್ಟಾ ಮತ್ತು ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಾಂಡೆ ಹೇಳಿದರು.