ಉಡುಪಿ: ಭಾರತೀಯ ಭೂಸೇನೆಯ ನಿವೃತ್ತ ಯೋಧ, ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್ ಡಯಾಸ್ ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಆರ್.ಎಲ್ ಡಯಾಸ್ ಅವರಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ಎರಡು ದಶಕಗಳಿಂದ ಡಯಾಸ್ ಉಡುಪಿ ರೈಲ್ವೆ ಯಾತ್ರಿ ಸಂಘದ ಪದಾಧಿಕಾರಿಯಾಗಿ ನಂತರ ಅಧ್ಯಕ್ಷರಾಗಿ ಉಡುಪಿ ಭಾಗದ ರೈಲ್ವೆ ಸೇರಿದಂತೆ ನೈಋತ್ಯ ರೈಲ್ವೆ, ದಕ್ಷಿಣ ರೈಲ್ವೆ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಿದ್ದರು. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿ ಕೆಲಸ ಮಾಡಿಸುವಲ್ಲಿ ಯಶಸ್ಸು ಕಂಡಿದ್ದರು.
Advertisement
Advertisement
ಉಡುಪಿ ರೈಲ್ವೆ ಯಾತ್ರಿ ಸಂಘದ ನೇತೃತ್ವದಲ್ಲಿ ಸಂಘಟಿತ ಹೋರಾಟದಿಂದ ರಾಜ್ಯದಲ್ಲಿ ಹಲವಾರು ರೈಲ್ವೆ ಯೋಜನೆಗಳು ಜಾರಿಗೊಂಡಿವೆ. ಕರಾವಳಿ ಭಾಗಕ್ಕೆ ಹೊಸ ರೈಲುಗಳು, ಹಲವು ರೈಲುಗಳ ವಿಸ್ತರಣೆಗೆ ಹಗಲು ರಾತ್ರಿ ಶ್ರಮಿಸಿದ ಡಯಾಸ್ ಅವರು ಕೊಂಕಣ ರೈಲ್ವೆ ಹೋರಾಟಕ್ಕೆ ಮಹತ್ವಪೂರ್ಣ ಪಾತ್ರ ವಹಿಸಿದ್ದರು. ರೈಲ್ವೆ ಸಂಬಂಧಿತ ಹೋರಾಟಗಳ ಹೊರತಾಗಿ ಇತರ ಕ್ಷೇತ್ರಗಳಲ್ಲೂ ಡಯಾಸ್ ಅವರ ಸಾಮಾಜಿಕ ಕಳಕಳಿ ನಿರಂತರವಾಗಿತ್ತು ಎಂದು ಹಿರಿಯ ಪತ್ರಕರ್ತ ಜಯಕರ್ ಕಲ್ಮಾಡಿ ನೆನಪಿಸಿಕೊಳ್ಳುತ್ತಾರೆ.
Advertisement
ಪರ್ಕಳ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳಿಗೆ ಸ್ಪಂದನೆ, ಉಡುಪಿಯಲ್ಲಿ ನರ್ಮ್ ಬಸ್ ಓಡಾಟದ ಹಿಂದೆ ಡಯಾಸ್ ಅವರ ಪಾತ್ರವಿತ್ತು. ಈಗ ಚಾಲನೆಯಲ್ಲಿರುವ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿಗೆ ಅವರು ನಡೆಸಿದ ಹೋರಾಟಗಳು ಇತ್ಯಾದಿ ಜನ ಮಾನಸದಲ್ಲಿ ನೆಲೆಯೂರಿದೆ. ಭಾನುವಾರ ಆರ್.ಎಲ್ ಡಯಾಸ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.