ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆ ಭಾಗ ಕಡೂರಿನಲ್ಲಿ ಹಲವು ದಿನಗಳಿಂದ ಕೈಕೊಟ್ಟಿದ್ದ ಮಳೆರಾಯ ನಿನ್ನೆ ಧಾರಾಕಾರವಾಗಿ ಸುರಿದು ಅವಾಂತರ ಸೃಷ್ಟಿಸಿದ್ದಾನೆ.
ಭಾರೀ ಮಳೆ ಜೊತೆ ಗಾಳಿಯ ವೇಗವೂ ಹೆಚ್ಚಿದ್ದರಿಂದ ಪಟ್ಟಣದ ಹಲವೆಡೆ ಮರಗಿಡಗಳು ಧರೆಗುರುಳಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿ ಜನಜೀವನ ಕೂಡ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಹಲವು ಭಾಗಗಳಲ್ಲಿ ಮನೆ ಮೇಲಿನ ಶೀಟ್ಗಳು ಹಾರಿ ಹೋಗಿವೆ. ರೈಲ್ವೆ ಅಂಡರ್ ಬ್ರಿಡ್ಜ್ ಬಳಿ 5 ಅಡಿ ಎತ್ತರಕ್ಕೆ ನೀರು ನಿಂತಿದ್ದು ವಾಹನಗಳೇ ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಕೆಲ ವಾಹನಗಳು ನೀರಿನ ಮಧ್ಯೆಯೂ ಚಲಾಯಿಸಿ ಇಂಜಿನ್ಗೆ ನೀರು ನುಗ್ಗಿದ ಪರಿಣಾಮ ಕೆಟ್ಟು ನಿಂತವು.
Advertisement
Advertisement
ಸರ್ಕಾರಿ ಬಸ್ ನಿಲ್ದಾಣದ ಎದುರಿನ ನಂಜುಡೇಶ್ವರ ಲಾಡ್ಜ್ ಕಟ್ಟಡದ ಮೇಲಿದ್ದ ಮೊಬೈಲ್ ಟವರ್ ಗಾಳಿಯ ರಭಸಕ್ಕೆ ಮಗುಚಿ ಬಿದ್ದಿದೆ. ಕಟ್ಟಡದ ಮೇಲೆ ಟವರ್ಗೆ ಹಾಕಿದ್ದ ಅಡಿಪಾಯ ಗಟ್ಟಿಯಾಗಿದ್ದರಿಂದ ಅದೃಷ್ಟವಶಾತ್ ಟವರ್ ಕಟ್ಟಡದ ಒಂದು ಭಾಗಕ್ಕೆ ವಾಲಿಕೊಂಡಿದೆ. ಟವರ್ ಗಾಳಿಗೆ ಹಾರಿ ನಿಲ್ದಾಣದ ಮುಂದಿನ ರಸ್ತೆಗೆ ಬಿದ್ದಿದ್ದರೆ ಭಾರಿ ಅನಾಹುತವಾಗುತ್ತಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಪುಷ್ಯ ಮಳೆ ಆರಂಭಗೊಂಡು ಇಂದಿಗೆ 6 ದಿನಗಳಾಗಿದ್ದು, ವರುಣದೇವನ ಅರ್ಭಟಕ್ಕೆ ಹಲವು ಭಾಗಗಳಲ್ಲಿ ಹಾನಿಯಾಗಿದೆ.