ಕೊಪ್ಪಳ: ಬಡತನ ಮತ್ತು ಅನಕ್ಷರತೆಯಿಂದ ಕೂಡಿದ್ದ ಕುಟುಂಬದಲ್ಲಿ ಜನಿಸಿದ್ದ ಶಹಪುರ ಗ್ರಾಮದ ಗೋಪಾಲ್ ವಾಕೋಡೆ ಎಂಬ ವ್ಯಕ್ತಿ ಬ್ರಿಟಿಷ್ ಸೈನ್ಯ ಸೇರಿದ್ದಾರೆ. ಇಂಗ್ಲೆಂಡ್ ನ ಈಸ್ಟ್ ಮಿಡ್ಲ್ ನಲ್ಲಿರುವ ಬ್ರಿಟೀಷ್ ಮಿಲಿಟರಿಯಲ್ಲಿ ಇದೀಗ ಸೇವೆ ಸಲ್ಲಿಸುತ್ತಿದ್ದಾರೆ.
Advertisement
ಮೂಲತಃ ಕೊಪ್ಪಳ ಜಿಲ್ಲೆಯ ಶಹಪುರ ಗ್ರಾಮದ ಯಲ್ಲಪ್ಪ ವಾಕೋಡೆ ಮತ್ತು ಫಕೀರವ್ವರ ಅವರ ಐವರು ಮಕ್ಕಳಲ್ಲಿ ಗೋಪಾಲರವರು ಕೂಡ ಒಬ್ಬರಾಗಿದ್ದು, ಇವರಿಗೆ ಒಬ್ಬ ಅಣ್ಣ ಮತ್ತು ಮೂವರು ಸಹೋದರಿಯರಿದ್ದಾರೆ. ಗೋಪಾಲರವರು ಬಾಲ್ಯದಲ್ಲಿದ್ದಾಗ ತಂದೆ ಯಲ್ಲಪ್ಪ ವಾಕೋಡೆ ಕುಟುಂಬ ಸಮೇತ ಗೋವಾಕ್ಕೆ ತೆರಳುತ್ತಾರೆ. ಆಗ ಮದ್ಯವ್ಯಸನಿಯಾಗಿ ರೂಪುಗೊಂಡ ಯಲ್ಲಪ್ಪ ವಾಕೋಡೆ 1995ರಲ್ಲಿ ಸಾವಿಗೀಡಾಗುತ್ತಾರೆ. ತಂದೆಯ ನಿಧನದ ಬಳಿಕ ತಾಯಿಯೂ ಮೃತಪಟ್ಟಿದ್ದಾರೆ. ಅಣ್ಣ ಮದುವೆಯಾಗಿ ಕೆಲವೇ ದಿನಗಳಲ್ಲಿ ಇಹಲೋಕ ತ್ಯಜಿಸಿದರು. ಸದ್ಯ ಗೋಪಾಲನ ಅತ್ತಿಗೆ ಶಹಪುರ ಗ್ರಾಮದಲ್ಲಿಯೇ ಇದ್ದು, ಅವರ ಮೂವರು ಸೋದರಿಯರಿಗೆ ಮದುವೆ ಮಾಡಿದ್ದಾರೆ.
Advertisement
Advertisement
ಯಲ್ಲಪ್ಪ ವಾಕೋಡೆಯವರು ಗೋವಾಗೆ ತಲುಪಿದಾಗ ಗೋಪಾಲರಿಗೆ 10 ವರ್ಷ. ಈ ವೇಳೆ ತಂದೆ ಮದ್ಯವ್ಯಸನರಾಗಿ ತಾಯಿಗೆ ಕಿರುಕುಳ ನೀಡುತ್ತಿರುವುದನ್ನು ನೋಡಿ, ಜೀವನ ನಡೆಸುವ ಉದ್ದೇಶದಿಂದ ಬೀಚ್ ಗಳಲ್ಲಿ ಕಡಲೆ ಮಾರಾಟ ಮಾಡಲು ಮುಂದಾಗುತ್ತಾರೆ. ದೈಹಿಕ ಶ್ರಮ, ಹಣಕಾಸಿನ ಸ್ಥಿತಿ ಲೆಕ್ಕಿಸದೇ ಕುಟುಂಬ ನಿರ್ವಹಣೆಗೆ ಹಗಲಿರುಳೂ ಶ್ರಮಿಸಲು ಆರಂಭಿಸುತ್ತಾರೆ.
Advertisement
ಈ ವೇಳೆ ಬ್ರಿಟ್ಸ್ ಕೊರೊಲ್ ಥಾಮಸ್ ಮತ್ತು ಕೊಲಿನ್ ಹ್ಯಾನ್ಸನ್ ಎನ್ನುವ ಬ್ರಿಟಿಷ್ ಹಿರಿಯ ದಂಪತಿ ಪ್ರವಾಸ ಕೈಗೊಂಡಾಗ ಗೋವಾದ ಬೆತೆಲ್ ಬಾತಿ ಬೀಚ್ ನಲ್ಲಿ ಗೋಪಾಲರವರು ಕಡಲೆ ಮಾರಾಟ ಮಾಡುವುದನ್ನು ಆಕಸ್ಮಿಕವಾಗಿ ಗಮನಿಸಿದ್ದಾರೆ. ಬಿಸಿಲನ್ನೂ ಲೆಕ್ಕಿಸದೇ ಬೀಚಿನಲ್ಲಿ ಬಾಲಕರಾಗಿದ್ದ ಗೋಪಾಲರವರು ಪ್ರವಾಸಿಗರಿಗೆ ಕಡಲೆ ತಗೊಳ್ಳಿ ಎಂದು ವಿನಂತಿಸುವ ಪರಿ, ಮುಗ್ಧತೆ, ಜೀವನ ಪ್ರೀತಿ ಕಂಡು ಮಮ್ಮಲ ಮರುಗುತ್ತಾರೆ. ಅಂತಃಕರಣದಿಂದ ಈತನಿಗೆ ಹತ್ತಿರದ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ ಹೊಸ ಬಟ್ಟೆ ಹಾಗೂ ಕಡಲೆ ಮಾರಾಟ ಮಾಡುವ ಬಿದಿರಿನ ಬುಟ್ಟಿ, ವಾಚು ಕೊಡಿಸುತ್ತಾರೆ. ನಂತರ ಮಡಗಾಂವ್ ನಗರದ ರಸ್ತೆಯ ಪಕ್ಕದಲ್ಲಿರುವ ಅವರ ಟೆಂಟ್ ಮತ್ತು ತಾಯಿಯನ್ನೂ ನೋಡಿ ಮರುಕ ಪಡುತ್ತಾರೆ. ನಂತರ ಅವರಿಗೆ ಆ ವರ್ಷ ಬೀಳ್ಕೊಟ್ಟು ಮುಂದಿನ ವರ್ಷ ಭೇಟಿಯಾಗುವ ಭರವಸೆ ನೀಡಿ ವಿದಾಯ ಹೇಳುತ್ತಾರೆ.
ನಂತರ ವರ್ಷಕ್ಕೊಮ್ಮೆ ಬರುತ್ತಿದ್ದ ಬ್ರಿಟಿಷ್ ದಂಪತಿ ಗೋಪಾಲರಿಗೆ ಹಣಕಾಸಿನ ನೆರವು ನೀಡುತ್ತಿದ್ದರು. 19 ವರ್ಷ ಆಗುತ್ತಿದ್ದಂತೆ ಗೋಪಾಲರನ್ನು ಇಂಗ್ಲೆಂಡ್ ಗೆ ಕರೆದುಕೊಂಡು ಹೋದರು. ಅಲ್ಲದೇ ಬ್ರಿಟ್ಸ್ ಕೊರೊಲ್ ಮತ್ತು ಕೊಲಿನ್ ಹ್ಯಾನ್ಸನ್ ದಂಪತಿ ಅಲ್ಲಿಂದಲೇ ಗೋಪಾಲರವರ ಕುಟುಂಬದವರಿಗೆ ಹಣಕಾಸಿನ ನೆರವು ನೀಡುತ್ತಿದ್ದರು. ಜೊತೆಗೆ ಗೋಪಾಲರವರ ಸಹೋದರಿಯರ ಮದುವೆ ಮತ್ತು ಮನೆ ಕಟ್ಟಲು ನೆರವಾದರು. ಈ ನಡುವೆ ಗೋಪಾಲರಿಗೆ ಇಂಗ್ಲೆಂಡ್ ನ ಸ್ಥಳೀಯ ಮಿಲಿಟರಿ ಬ್ಯಾರಕ್ ನಲ್ಲಿ ಕ್ರಿಕೆಟ್ ತರಬೇತಿ ಕೊಡಿಸಿದರು. ಹಂತ ಹಂತವಾಗಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗೋಪಿ ಸ್ಥಳೀಯ ಕ್ರಿಕೆಟ್ ತಂಡದ ನಾಯಕನಾಗಿ ಗಮನ ಸೆಳೆದಿದ್ದಾರೆ. ಅವರ ನಡೆ, ನುಡಿ, ಆಟೋಟದಲ್ಲಿನ ಪ್ರತಿಭೆಗೆ ಸಂಘ-ಸಂಸ್ಥೆಗಳು ಅಭಿನಂದಿಸಿ ಆದರಿಸುತ್ತವೆ. ಪ್ರಶಸ್ತಿ, ಮಾನ ಸನ್ಮಾನಗಳನ್ನು ನೀಡಿ ಗೌರವಿಸುತ್ತವೆ. ಕ್ರಿಕೆಟ್ ಆಟದಲ್ಲಿನ ಗೋಪಾಲರವರ ಚಾಣಾಕ್ಷತೆ ಕಂಡು ಮಿಲಿಟರಿ ಪಡೆಯ ಅಧಿಕಾರಿಯೊಬ್ಬರು ಸೈನ್ಯಕ್ಕೆ ಸೇರಿಸಿಕೊಳ್ಳುವೆಯಾ? ಎಂದಾಗ ಗೋಪಾಲರವರು ಸಮ್ಮತಿಸಿದ್ದಾರೆ.
ನಂತರ ಇಂಗ್ಲೆಂಡ್ ನ ಜಾಸ್ಮಿನ್ ಎಂಬ ಯುವತಿಯನ್ನು ವಿವಾಹವಾಗಿರುವ ಗೋಪಾಲ್ರವರು, ಡೈಸಿ ಎಂಬ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಕಳೆದ 10 ವರ್ಷದಿಂದ ಇಂಗ್ಲೆಂಡ್ ನಲ್ಲಿ ವಾಸ ಮಾಡಿಕೊಂಡಿದ್ದು, ಕ್ರಿಕೆಟ್ ಮತ್ತು ಮಿಲಿಟರಿ ಸೇವೆಗಾಗಿ ಅಫ್ಘಾನಿಸ್ತಾನ, ಕೀನ್ಯಾ ಮತ್ತು ಜರ್ಮನಿಯಲ್ಲೂ ಸಂಚರಿಸಿದ್ದಾರೆ. ಬ್ರಿಟಿಷ್ ಪ್ರಜೆಯಾದರೂ ಭಾರತದ ಬಗ್ಗೆ ಹೆಮ್ಮೆ, ಹುಟ್ಟೂರಿನ ಬಗ್ಗೆ ಅಭಿಮಾನ ಹೊಂದಿದ್ದಾರೆ ಮೂರು ವರ್ಷಕ್ಕೊಮ್ಮೆ ಜನ್ಮ ನೀಡಿದ ಗ್ರಾಮಕ್ಕೆ ಆಗಮಿಸಿ ಬಂಧುಗಳೊಂದಿಗೆ ಬೆರೆಯುತ್ತಾರೆ. ಬಡತನದ ಬೇಗುದಿಯಲ್ಲಿ ಬೆಂದ ಗೋಪಾಲ ವಾಕೋಡೆ ಸ್ವಸಾಮಥ್ರ್ಯದಿಂದ ಬ್ರಿಟಿಷ್ ಮಿಲಿಟರಿ ಪಡೆ ಸೇರಿದ ಬಗೆ ಅಚ್ಚರಿಗೆ ಕಾರಣವಾಗಿದೆ. ಗೋಪಾಲರವರ ನಡೆ, ನುಡಿ, ವಿನಮ್ರತೆ, ಕ್ರೀಡೆ ಹಾಗೂ ಸಾಮಾಜಿಕ ಸೇವೆ ಗುರುತಿಸಿ ವಿದೇಶೀ ಮಾಧ್ಯಮಗಳು ಈಗಾಗಲೇ ವರದಿ ಮಾಡಿವೆ.
ಕೊಪ್ಪಳದ ಕುಗ್ರಾಮವೊಂದರಲ್ಲಿ ಜನಿಸಿದವರು ಬ್ರಿಟಿಷ್ ಮಿಲಿಟರಿ ಹೇಗೆ ಸೇರಿದರು? ಎನ್ನುವ ಕುರಿತು ಇಷ್ಟರಲ್ಲಿಯೇ ಇವರ ಜೀವನಗಾಥೆ ಚಿತ್ರೀಕರಣವಾಗಲಿದೆ. ಇದೇ ಜು.12ರಂದು ಗೋಪಾಲರವರ ಸ್ಫೂರ್ತಿದಾಯಕ ಕಥೆ ಆಲಿಸಲು ದೇಶ ವಿದೇಶಗಳ ಮಾಧ್ಯಮ ಪ್ರತಿನಿಧಿಗಳು, ಮಿಲಿಟರಿ ಪಡೆಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಸಹೋದರಿಯ ಮೇಲೆಯೇ ಹಲ್ಲೆಗೈದ ಅಣ್ಣ-ತಮ್ಮ..!