ನಟಿ ಹಾಗೂ ಪ್ರಾಣಿಪ್ರಿಯೆ ಸಂಯುಕ್ತಾ ಹೊರನಾಡು ಲಾಕ್ಡೌನ್ ಅವಧಿಯಲ್ಲಿ ಕಳೆದ ಸಮಯ ಹಾಗೂ ಸುನಾಮಿ ಹಾಡಿನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
• ಹೇಗಿದ್ದೀರಾ? ಲಾಕ್ಡೌನ್ ಅವಧಿಯಲ್ಲಿ ತುಂಬಾ ಬ್ಯುಸಿಯಾಗಿದ್ರಿ ನೀವು?
ನಾನು ಚೆನ್ನಾಗಿದ್ದೀನಿ. ಲಾಕ್ಡೌನ್ ಅವಧಿಯಲ್ಲಿ ಹೆಚ್ಚಾಗಿ ಸಾಮಾಜಿಕ ಕಾರ್ಯಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ಜೊತೆಗೆ ಸರ್ಕಾರದ ಕಾರ್ಯಕ್ರಮಗಳಲ್ಲಿ ಕೈ ಜೋಡಿಸಿದ್ದರಿಂದ ಆ ಕೆಲಸಗಳಲ್ಲಿ ಬ್ಯುಸಿಯಾಗಿದ್ದೆ. ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆ.
Advertisement
Advertisement
• ಸುನಾಮಿ ವಿಡಿಯೋ ಸಾಂಗ್ ತುಂಬಾ ವೈರಲ್ ಆಗಿದೆ. ಎಲ್ಲರೂ ಇಷ್ಟಪಡುತ್ತಿದ್ದಾರೆ?
ಹೌದು, ಈ ಹಾಡಿಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಿಕ್ತಿದೆ. ಇದನ್ನು ಮಾಡಿರೋ ಉದ್ದೇಶ ಬೀದಿನಾಯಿಗಳ ಬಗ್ಗೆ ಜಾಗೃತಿ ಮೂಡಿಸಲು. ಬೀದಿನಾಯಿಗಳನ್ನ ಅಡಾಪ್ಟ್ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ. ಇದರ ಕ್ರೆಡಿಟ್ ರಘು ದೀಕ್ಷಿತ್ ಅವರಿಗೆ ಸೇರಬೇಕು. ಅವರೇ ಈ ಹಾಡನ್ನು ಬರೆದು, ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಡ್ಯುಯೇಟ್ ಕಾನ್ಸೆಪ್ಟ್ ನಲ್ಲಿ ಪ್ರಾಣಿಗಳ ಮೇಲಿನ ಪ್ರೀತಿಯನ್ನು ತೋರಿಸೋ ಒಂದು ಹೊಸ ಪ್ರಯತ್ನ. ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಇದನ್ನು ಮೆಚ್ಚಿಕೊಂಡಿದ್ದಾರೆ. ಇದರಲ್ಲಿ ನಾನು ಮೊದಲ ಬಾರಿ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದೀನಿ ಅದೊಂದು ಖುಷಿ ಇದೆ ನನಗೆ.
Advertisement
Advertisement
• ಲಾಕ್ಡೌನ್ ಸಮಯದಲ್ಲಿ ಬಿಡುವಿನ ವೇಳೆ ಹೊಸ ಹವ್ಯಾಸ ಏನಾದ್ರು ಬೆಳೆಸಿಕೊಂಡ್ರಾ?
ಹೌದು, ನಂಗೆ ನಿಜಕ್ಕೂ ಖುಷಿ ಆಗುತ್ತೆ ಇದನ್ನ ಹೇಳೋದಕ್ಕೆ. ನನಗೆ ಸಂಗೀತ ಕಲಿಬೇಕು ಅಂತ ಆಸಕ್ತಿ ಇತ್ತು. ರಂಗಭೂಮಿ ಕಲಾವಿದರಿಗೆ ಹಾಡೋಕು ಬರಬೇಕು ತುಂಬಾ ಮುಖ್ಯ ಅದು. ನಾನು ರಂಗಭೂಮಿಯಲ್ಲಿ ನಾಟಕಕ್ಕೋಸ್ಕರ ಕಲಿತಿದ್ದೆ ಆದ್ರೆ ಅಷ್ಟಾಗಿ ಸಂಗೀತದ ಬಗ್ಗೆ ಗೊತ್ತಿರಲಿಲ್ಲ. ಚಿಕ್ಕಂದಿನಲ್ಲೂ ಅಭ್ಯಾಸ ಮಾಡಿರಲಿಲ್ಲ. ಲಾಕ್ಡೌನ್ ಅವಧಿಯಲ್ಲಿ ಆ ಆಸೆಯನ್ನು ಈಡೇರಿಸಿಕೊಂಡೆ. ಪೂರ್ಣ ಪ್ರಮಾಣದಲ್ಲಿ ಕಲಿತಿಲ್ಲವಾದ್ರು ಸಂಗೀತದ ಬಗ್ಗೆ ಒಂದಿಷ್ಟು ಅರಿತುಕೊಂಡಿದ್ದೇನೆ, ಪ್ರತಿನಿತ್ಯ ಪ್ರಾಕ್ಟೀಸ್ ಕೂಡ ಮಾಡ್ತಿದ್ದೀನಿ. ಅದನ್ನು ಹೊರತು ಪಡಿಸಿ ಒಂದು ಡಾಕ್ಯುಮೆಂಟರಿ ಮಾಡ್ದೆ. ಬಿಡುವು ಸಿಕ್ಕಾಗ ಪೇಟಿಂಗ್ ಮಾಡ್ತಿದ್ದೆ.
• ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಎಲ್ಲಿ ನೋಡಿದ್ರು ನಿಮಗಿಂತ ಪ್ರಾಣಿಗಳ ಫೋಟೋನೇ ಇರುತ್ತೆ?
ನಿಜ, ನಾನು ಪ್ರಾಣಿ ಪ್ರಿಯೆ. ಹಲವು ಸಂಸ್ಥೆಗಳ ಅಂಬಾಸಿಡರ್ ಕೂಡ ಹೌದು, ಹಲವಾರು ರೆಸ್ಕ್ಯೂ ಸಂಸ್ಥೆಗಳ ಜೊತೆ ಕೈ ಜೋಡಿಸಿದ್ದೇನೆ. ಸೋಶಿಯಲ್ ಮೀಡಿಯಾವನ್ನು ನಮಗೋಸ್ಕರ ಬಳಸಿಕೊಳ್ಳೋದ್ರ ಜೊತೆಗೆ ಜಾಗೃತಿ ಮೂಡಿಸಲು ಬಳಸೋದು ಒಳ್ಳೆಯದು ಅನ್ನೋದು ನನ್ನ ಅನಿಸಿಕೆ. ಅದಕ್ಕಾಗಿ ನಾನು ಹೆಚ್ಚಾಗಿ ಪ್ರಾಣಿಗಳ ಪೋಟೋ ಪೋಸ್ಟ್ ಮಾಡುತ್ತೇನೆ. ಅದನ್ನು ನೋಡಿದವ್ರಲ್ಲಿ ಒಬ್ಬರಾದ್ರು ಪ್ರಾಣಿಗಳನ್ನು ಅಡಾಪ್ಟ್ ಮಾಡಿಕೊಳ್ಳಲೋ ಅಥವಾ ಅವುಗಳ ಸಹಾಯಕ್ಕೆ ಕೈ ಚಾಚಿದ್ರೆ ಸಹಾಯವಾಗುತ್ತೆ ಅನ್ನೋದು ನನ್ನ ಉದ್ದೇಶ.
• ನಿಮ್ಮ ಪ್ರಾಣಿ ಪ್ರೀತಿ ಬಗ್ಗೆ ಎಲ್ಲರಿಗೂ ಗೊತ್ತಿದೆ ಆದರೂ ಒಂದು ಕುತೂಹಲ ಇದೆ, ಪ್ರಾಣಿಗಳನ್ನು ಕಂಡರೆ ಯಾಕಿಷ್ಟು ಪ್ರೀತಿ?
ಚಿಕ್ಕವಯಸ್ಸಿನಿಂದಲೂ ಪ್ರಾಣಿಗಳು ಅಂದ್ರೆ ಪಂಚಪ್ರಾಣ. ನಾನು ಚಿಕ್ಕವಳಿದ್ದಾಗ ನಮ್ಮ ಮನೆ ಮುಂದೆ ಮೋರಿಲಿ ಒಂದು ನಾಯಿ ಇತ್ತು. ಅದರ ಜೊತೆ ನಾನು ಕಾಲ ಕಳೆಯುತ್ತಿದ್ದೆ, ಅದಕ್ಕೆ ತಿನ್ನೋಕೆ ಕೊಡ್ತಾ ಇದ್ದೆ. ಅಲ್ಲಿಂದ ಶುರುವಾದ ಪ್ರೀತಿ ಇವತ್ತು ಬೀದಿನಾಯಿಗಳ ಬಗ್ಗೆ ಕಾಳಜಿ ಹಾಗೂ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸೋವರೆಗೆ ಬಂದಿದೆ. ಪ್ರಾಣಿಗಳಿಗೆ ನೀವು ಪ್ರೀತಿ ತೋರಿಸಿದ್ರೆ ಅವು ನಿಮಗೆ ಪ್ರೀತಿ ತೋರಿಸುತ್ತೆ. ಅವುಗಳು ತೋರಿಸೋ ಪ್ರೀತಿಯಲ್ಲಿ ಸ್ವಾರ್ಥ ಇರೋದಿಲ್ಲ ನಿಷ್ಕಲ್ಮಶ ಪ್ರೀತಿ ಅವುಗಳದ್ದು. ನಾನು ಯಾವ ಪ್ರಾಣಿನಾದ್ರು ಮುಟ್ಟೋಕೆ ರೆಡಿಯಿದ್ದೀನಿ. ಆ ಪ್ರಾಣಿ ಕಂಡ್ರೆ ಭಯ ಈ ಪ್ರಾಣಿ ಕಂಡ್ರೆ ಭಯ ಆ ರೀತಿ ಏನು ಇಲ್ಲ. ನನ್ನ ಪ್ರಕಾರ ಎಲ್ಲ ಪ್ರಾಣಿಗಳು ಒಂದೇ. ನೀವು ಎಷ್ಟು ಪ್ರೀತಿ, ರಕ್ಷಣೆ ಕೊಡ್ತೀರೋ ಅವು ನಮ್ಮನ್ನು ಅಷ್ಟೇ ಪ್ರೀತಿ ಮಾಡುತ್ತವೆ.ನಾನು ಅವುಗಳಲ್ಲಿ ದೇವರನ್ನು ಕಾಣುತ್ತೇನೆ. ನಿಜವಾಗ್ಲೂ ಹೇಳಬೇಕು ಅಂದ್ರೆ ನನಗೆ ಭಯ ಆಗೋದೇ ಮನುಷ್ಯರನ್ನ ಕಂಡ್ರೆ.
• ಲಾಕ್ಡೌನ್ ಅವಧಿಯಲ್ಲಿ ನಿಮ್ಮ ಕೆಲಸ ಶ್ಲಾಘನೀಯ. ಸಾವಿರಾರು ಬೀದಿನಾಯಿಗಳಿಗೆ ಆಹಾರ ನೀಡ್ತಿದ್ರಿ, ಜಾಗೃತಿ ಮೂಡಿಸಿದ್ರಿ. ನಿಮ್ಮ ಕೆಲಸ ಮೆಚ್ಚುಗೆ ಪಡೆದುಕೊಂಡಿತ್ತು.
ಹೌದು, ಲಾಕ್ಡೌನ್ ನಿಂದ ಸಾವಿರಾರು ಜನರ ಬದುಕು ಬೀದಿಗೆ ಬಂತು. ಮನುಷ್ಯರಿಗೇ ಊಟ ಸಿಗ್ತಾ ಇರ್ಲಿಲ್ಲ ಇನ್ನು ಬೀದಿ ನಾಯಿಗಳ ಪಾಡೇನು ಅಲ್ವಾ!? ಅವುಗಳ ಕಷ್ಟ ನೋಡೋಕಾಗದೇ ಬೀದಿ ನಾಯಿಗಳಿಗೆ ಊಟ ನೀಡಲು ಶುರು ಮಾಡಿದೆ. ಇದೆಲ್ಲದರ ಜೊತೆಗೆ ನಾಯಿಗಳಿಂದ ಕೊರೊನಾ ಹರಡುತ್ತೆ ಎಂದು ಸುಳ್ಳು ಸುದ್ಧಿ ಹರಡಿ ಬೆಂಗಳೂರಲ್ಲಿ ಎಷ್ಟೋ ಜನ ತಮ್ಮ ನಾಯಿಗಳನ್ನ ಬೀದಿ ಪಾಲು ಮಾಡಿದ್ರು. ಇದು ನನಗೆ ತುಂಬಾ ನೋವು ಕೊಡ್ತು. ಇದಕ್ಕೆಲ್ಲ ಏನಾದ್ರು ಮಾಡಲೇಬೇಕು ಎಂದು ‘ಕೇರ್’ ಎಂಬ ಸಂಸ್ಥೆ ಜೊತೆ ಸೇರಿ ಜಾಗೃತಿ ಮೂಡಿಸಲು ಆರಂಭಿಸಿದೆ. ಸಾವಿರಾರು ನಾಯಿಗಳು ಇದ್ವು ನನ್ನೊಬ್ಬಳಿಂದ ಇವುಗಳಿಗೆ ಆಹಾರ ಪೂರೈಕೆ ಮಾಡೋಕೆ ಸಾದ್ಯವಿಲ್ಲ ಎಂದು ಗೊತ್ತಾದಾಗ ನಾನು ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದೆ ಜೊತೆಗೆ ಫಂಡ್ ರೈಸ್ಗೆ ಮುಂದಾದೆ. ನನ್ನ ಈ ಕೆಲಸಕ್ಕೆ ಉತ್ತಮ ಪ್ರತಿಕ್ರಿಯೇ ಸಿಕ್ತು. ಸುಮಾರು 150 ಜನರು ವಾಟ್ಸಾಪ್ ಗ್ರೂಪ್ನಲ್ಲಿ ಕೈ ಜೋಡಿಸಿದ್ರು. ಹಲವಾರು ಜನರು ಫಂಡ್ ನೀಡಲು ಮುಂದಾದ್ರು. ಇವರೆಲ್ಲರ ಸಹಕಾರದಿಂದ ಪ್ರತಿನಿತ್ಯ 4000 ಬೀದಿನಾಯಿಗಳಿಗೆ ಲಾಕ್ಡೌನ್ ಅವಧಿಯಲ್ಲಿ ಆಹಾರ ನೀಡಲು ಸಾಧ್ಯವಾಯ್ತು. ಅದನ್ನು ಅಲ್ಲಿಗೆ ಕೈ ಬಿಡಲಿಲ್ಲ, ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ.
• ನಿಮ್ಮ ಸೋಶೀಯಲ್ ಸರ್ವಿಸ್ ಹಾಗೂ ಪ್ರಾಣಿಗಳ ಮೇಲಿನ ಕಳಕಳಿಗೆ ತುಂಬಾ ಮೆಚ್ಚುಗೆ ಸಿಕ್ತಿದೆ ಎಷ್ಟೋ ಜನಕ್ಕೆ ನೀವು ಪ್ರೇರಣೆ ಕೂಡ ಆಗಿದ್ದೀರ?
ನನ್ನಿಂದ ನಾಲ್ಕು ಜನ ಬದಲಾಗ್ತಾರೆ ಅಂದ್ರೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ಎಲ್ಲರೂ ಮೆಚ್ಚುಗೆ, ಪ್ರೀತಿ ವ್ಯಕ್ತಪಡಿಸೋದ್ರಿಂದ ಇನ್ನೊಂದಿಷ್ಟು ಕೆಲಸ ಮಾಡಲು ಸಹಾಯ ಆಗುತ್ತೆ. ಇನ್ನು ಕೆಲವರು ಕೆಲವು ಕಾರ್ಯಕ್ರಮಗಳಿಗೆ ನನ್ನ ಜೊತೆ ಕೈ ಜೋಡಿಸುತ್ತಾರೆ. ನನ್ನ ಕೆಲಸ ನನಗೆ ತುಂಬಾ ತೃಪ್ತಿ ನೀಡಿದೆ. ನನ್ನ ಕೆಲಸ ನನಗೆ ಪ್ರೇರಣೆ ಮತ್ತು ಸ್ಪೂರ್ತಿ ನೀಡಿದೆ.
• ಹಲವಾರು ಸಂಘ, ಸಂಸ್ಥೆಗಳ ರಾಯಭಾರಿ ಕೂಡ ಆಗಿ ಕಾರ್ಯ ನಿರ್ವಹಿಸುತ್ತಿದ್ದೀರ ಎಷ್ಟು ಖುಷಿ ಅನಿಸುತ್ತೆ?
ನಾನು ಸಾಮಾಜಿಕ ಸೇವೆಯನ್ನ ನನ್ನ ಖುಷಿಗೆ ಮಾಡುತ್ತಿದ್ದೇನೆ. ನನ್ನ ಕೆಲಸವನ್ನು ಗುರುತಿಸಿ ದೊಡ್ಡ ಜವಾಬ್ದಾರಿಯನ್ನು ನನಗೆ ಹಲವು ಸಂಸ್ಥೆಗಳು ನೀಡಿರೋದು ಸಂತಸ ತಂದಿದೆ. ಪೀಪಲ್ ಫಾರ್ ಅನಿಮಲ್ ಫೌಡೇಷನ್ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಈ ಸಂಸ್ಥೆ ನಗರದಲ್ಲಿ ತೊಂದರೆಗೆ ಒಳಗಾಗೋ ಸಾವಿರಾರು ಪ್ರಾಣಿಗಳ ರಕ್ಷಣೆ ಮಾಡುತ್ತಾ ಬಂದಿದೆ. ಈ ಸಂಸ್ಥೆಯ ಬೆಂಗಳೂರು ರಾಯಭಾರಿಯಾಗಿ ನನನ್ನು ನೇಮಿಸಿದ್ದಾರೆ. ಇದಲ್ಲದೆ ಯುನೆಸೆಫ್ನವರ ಮೈನರ್ ಪ್ರಾಜೆಕ್ಟ್, ಚೈಲ್ಡ್ ವಯೋಲೆನ್ಸ್ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸೋ ಅವಕಾಶ ನನಗೆ ಸಿಕ್ಕಿದೆ. ಕೇರ್ ಎಂಬ ಸಂಸ್ಥೆ ಸಾವಿರಾರು ಬೀದಿನಾಯಿಗಳ ರಕ್ಷಣೆ ಮಾಡುತ್ತಿದೆ ಜೊತೆಗೆ ಅವುಗಳಿಗೆ ಆಹಾರ ಒದಗಿಸುತ್ತಿದೆ ಆ ಸಂಸ್ಥೆಯ ರಾಯಭಾರಿಯಾಗಿದ್ದೇನೆ. ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅರಿವು ಮೂಡಿಸಲು ವೇದಿಕೆ ಸಿಗುತ್ತಿರೋದು ತುಂಬಾ ಹೆಮ್ಮೆ ಇದೆ.
• ಏಳು ವರ್ಷದ ಸಿನಿಮಾ ಜರ್ನಿ ಎಷ್ಟು ಖುಷಿ ಕೊಟ್ಟಿದೆ?
ನಾನು ಚಿತ್ರರಂಗಕ್ಕೆ ಬಂದು ಏಳು ವರ್ಷ ಆಯ್ತು, ನಂಗೆ ಸಕ್ಸಸ್, ಸೋಲು ಇದ್ಯಾವುದರ ಯೋಚನೆ ಇಲ್ಲ. ಯಾವ ಪಾತ್ರ ಖುಷಿ ಕೊಡುತ್ತೋ, ಯಾವ ಸಬ್ಜೆಕ್ಟ್ ಖುಷಿ ಕೊಡುತ್ತೋ ಆ ಪಾತ್ರಗಳನ್ನ ಒಪ್ಪಿಕೊಳ್ತೀನಿ. ಚಿತ್ರರಂಗದಲ್ಲಿ ಎಲ್ಲರೂ ನನ್ನ ಪ್ರೀತಿಯಿಂದ ಕಾಣುತ್ತಾರೆ. ಬೇರೆ ಚಿತ್ರರಂಗದಲ್ಲೂ ಒಳ್ಳೆಯ ಸಿನಿಮಾಗಳು ಸಿಕ್ತಿವೆ. ಏಳು ವರ್ಷದ ಜರ್ನಿ ಖುಷಿ ಕೊಟ್ಟಿದೆ. ನಾನು ತುಂಬಾ ಖುಷಿಯಾಗಿದ್ದೇನೆ. ನನಗೆ ಯಾವುದೇ ರಿಗ್ರೇಟ್ ಇಲ್ಲ.
• ಹೊಸ ಸಿನಿಮಾಗಳಿಗೆ ಸಹಿ ಮಾಡಿದ್ರಾ?
ಹೊಸ ಪ್ರಾಜೆಕ್ಟ್ ಗಳು ಬರ್ತಿವೆ. ಸದ್ಯಕ್ಕೆ ಕನ್ನಡದಲ್ಲಿ ಹೊಂದಿಸಿ ಬರೆಯಿರಿ, ಅರಿಷಡ್ವರ್ಗ, ಮೈಸೂರು ಮಸಾಲ ಚಿತ್ರಗಳಿವೆ. ತೆಲುಗಿನಲ್ಲಿ ಲಾಕ್ಡ್, ಗಾಡ್ ಸೀಕ್ವೆಲ್ 2 ವೆಬ್ ಸಿರೀಸ್ ಶೂಟಿಂಗ್ ಬಾಕಿ ಇದೆ. ತಮಿಳಿನಲ್ಲಿ ರೆಡ್ ರ್ಯಾಂಮ್ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಹೊಸ ಪ್ರಾಜೆಕ್ಟ್ ಬರ್ತಾ ಇವೆ ಇಲ್ಲಿವರೆಗೆ ಯಾವುದೂ ಒಪ್ಪಿಕೊಂಡಿಲ್ಲ.
• ಟ್ರಾವೆಲ್ಲಿಂಗ್ ನಿಮಗೆ ತುಂಬಾ ಇಷ್ಟ ಅನ್ಸುತ್ತೆ?
ಹೌದು, ನಂಗೆ ಟ್ರಾವೆಲ್ ಮಾಡೋದು ಅಂದ್ರೆ ತುಂಬಾ ಇಷ್ಟ. ಫ್ರೆಂಡ್ಸ್ ಫ್ಯಾಮಿಲಿ ಜೊತೆ ಟ್ರಾವೆಲ್ ಮಾಡೋದು, ಹೊಸ ಊರು ನೋಡೋದು ತುಂಬಾ ಖುಷಿ ಕೊಡುತ್ತೆ ನನಗೆ. ಟ್ರಾವೆಲ್ನಿಂದ ಮನಸ್ಸಿಗೂ ನೆಮ್ಮದಿ ಸಿಗುತ್ತೆ ಹೊಸದನ್ನು ಕಲಿಯೋಕೆ, ತಿಳಿದುಕೊಳ್ಳೋಕೆ ಸಾಧ್ಯವಾಗುತ್ತೆ. ಲಾಕ್ಡೌನ್ ಟೈಂನಲ್ಲಿ ಟ್ರಾವೆಲ್ ಮಾಡೋಕೆ ಆಗಲಿಲ್ಲ ಅದೊಂದು ಬೇಸರ ಇದೆ.
• ನಿಮ್ಮ ಫೇವರೇಟ್ ಫುಡ್ ಯಾವುದು?
ನಾನು ಪ್ಯೂರ್ ವೆಜಿಟೇರಿಯನ್, ವೆಜ್ನಲ್ಲಿ ಎಲ್ಲ ಬಗೆಯೂ ಇಷ್ಟವಾಗುತ್ತೆ. ಫೇವರೇಟ್ ಅಂದ್ರೆದಹಿ ಪೂರಿ, ಆಂಬೊಡೆ, ಸಾಬುದಾನ ಕಿಚಡಿ, ಮೊಸರು ಅಂದ್ರೆ ತುಂಬಾ ಇಷ್ಟ. ನಾನು ಕಾಫಿ ಪ್ರಿಯೆ, ಏನ್ ಬೇಕಾದ್ರು ಬಿಟ್ಟು ಇರ್ತೀನಿ ಆದ್ರೆ ಕಾಫಿ ಕುಡಿಯದೇ ಇರೋಕೆ ಆಗೋದೇ ಇಲ್ಲ. ಕಾಫಿ ಬೇಕೇ ಬೇಕು.