ಬೆಂಗಳೂರು: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Advertisement
ಪ್ರವಾಹಪೀಡಿತ ಗ್ರಾಮಗಳು, ಸ್ಥಳಾಂತರಗೊಂಡಿರುವ ಗ್ರಾಮಗಳು, ಸಂತ್ರಸ್ತರಿಗೆ ತೆರೆಯುವ ಕಾಳಜಿ ಕೇಂದ್ರಗಳ ಬಳಿ ಕೈಗೊಳ್ಳಬೇಕಿರುವ ಕ್ರಮಗಳು ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕೈಗೊಳ್ಳಬೇಕಿರುವ ಸಿದ್ಧತೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಶುಕ್ರವಾರ ಅಗತ್ಯ ಸೂಚನೆಗಳನ್ನು ನೀಡಿದರು.
Advertisement
Advertisement
ಕಾಳಜಿ ಕೇಂದ್ರಗಳಲ್ಲಿ ಆಶ್ರಯಪಡೆದಿರುವ ಸಂತ್ರಸ್ತರಿಗೆ ಶುದ್ಧಕುಡಿಯುವ ನೀರು ಮತ್ತು ಗುಣಮಟ್ಟದ ಆಹಾರ ಪೂರೈಸಬೇಕು. ಒಂದು ವೇಳೆ ಶುದ್ಧಕುಡಿಯುವ ನೀರಿನ ಘಟಕಗಳು ಸಮೀಪದಲ್ಲಿ ಇಲ್ಲದಿದ್ದರೆ ಲಭ್ಯವಿರುವ ನೀರನ್ನೇ ಕಾಯಿಸಿ, ಶೋಧಿಸಿ ನೀಡಲು ಸೂಚಿಸಲಾಗಿದೆ. ಕೇಂದ್ರಗಳ ಒಳಗೆ ಮತ್ತು ಹೊರಭಾಗದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು, ಪ್ರತಿದಿನ ರೋಗನಿರೋದಕ ದ್ರಾವಣ ಸಿಂಪಡಿಸಬೇಕು, ಕೇಂದ್ರದಲ್ಲಿರುವ ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕು ಮತ್ತು ಅವರಿಗೆ ಕೋವಿಡ್ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ತಜ್ಞರು ಅರಿವು ಮೂಡಿಸುವ ಕೆಲಸ ಮಾಡಲು ಆದೇಶಿಸಿದರು.
Advertisement
ಹಿರಿಯ ನಾಗರಿಕರು, ಬಾಣಂತಿಯರು, ಗರ್ಭಿಣಿಯರು ಮತ್ತು ಮಕ್ಕಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಘಟಕ ಅಥವಾ ತಾಲೂಕು ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ವಿಶೇಷ ಕಾಳಜಿಯಿಂದ ಅವರನ್ನು ನೋಡಿಕೊಳ್ಳಬೇಕು. ಜ್ವರ ಹಾಗೂ ಇತರೆ ರೋಗಲಕ್ಷಣ ಇದ್ದವರಿಗೆ ತಕ್ಷಣ ಕೋವಿಡ್ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲು ಸೂಚಿಸಲಾಗಿದ್ದು, ಕಾಳಜಿ ಕೇಂದ್ರಗಳಲ್ಲಿರುವ ಎಲ್ಲರಿಗೂ ಮಾಸ್ಕ್ ವಿತರಿಸಬೇಕು, ಸ್ಯಾನಿಟೈಸರ್ ನೀಡುವ ಜೊತೆಗೆ ಶುಚಿತ್ವದ ಬಗ್ಗೆ ಗಮನಹರಿಸರಿಸಲು ಸೂಚಿಸಿದ್ದಾರೆ.
ರಾಜ್ಯದ 18 ತಾಲೂಕು, 131 ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದು, 830 ಮನೆಗಳಿಗೆ ಹಾನಿಯಾಗಿದೆ. ಸದ್ಯ ರಾಜ್ಯದಲ್ಲಿ 80 ಕಾಳಜಿ ಕೇಂದ್ರ ತೆರೆಯಲಾಗಿದ್ದು, 8,733 ಜನರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ.