ಮಡಿಕೇರಿ: ಕೋವಿಡ್ ಪಾಸಿಟಿವಿಟಿ ರೇಟ್ ಏರಿಳಿತ ನಡುವೆ ಕೊಡಗು ಜಿಲ್ಲೆಯತ್ತ ಪ್ರವಾಸಿಗರ ದಂಡು ಹರಿದು ಬರುತ್ತಿದ್ದು, ಜಿಲ್ಲೆಯಲ್ಲಿ ಕೋವಿಡ್ ಸೋಂಕು ಮತ್ತಷ್ಟು ವ್ಯಾಪಿಸುವ ಭೀತಿ ಎದುರಾಗಿದೆ.
ಹೊರ ಜಿಲ್ಲೆಗಳಲ್ಲಿ ಅನ್ಲಾಕ್ ಆದ ಹಿನ್ನೆಲೆ ಪ್ರವಾಸಿಗರು ಕೊಡಗಿನತ್ತ ಆಗಮಿಸುತ್ತಿದ್ದಾರೆ. ಕೊರೊನಾ ಲಾಕ್ಡೌನ್ನಿಂದ ತಿಂಗಳುಗಟ್ಟಲೇ ಮನೆಯಲ್ಲಿದ್ದ ಜನ ಇದೀಗ ಅನ್ಲಾಕ್ ಆಗುತ್ತಿದ್ದಂತೆ ಹೊರಗೆ ಸುತ್ತಾಡಲು ಆರಂಭಿಸಿದ್ದಾರೆ. ಪ್ರವಾಸಿ ತಾಣಗಳನ್ನು ಮುಚ್ಚಿದರೂ ಅಂತಹ ಸ್ಥಳಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಕಳೆದ ಕೆಲ ದಿನಗಳಿಂದ ಕರ್ನಾಟಕ ಕಾಶ್ಮೀರ ಕೊಡಗು ಜಿಲ್ಲೆಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ.
Advertisement
Advertisement
ಕೊಡಗಿನಲ್ಲಿ ಜುಲೈ 5ರ ವರೆಗೆ ಲಾಕ್ಡೌನ್ ಮುಂದುವರಿಸಿದ್ದರೂ ಇದಾವುದನ್ನೂ ಲೆಕ್ಕಿಸದ ಜನ, ಬೆಂಗಳೂರು, ಕೋಲಾರ, ಮಂಗಳೂರು, ಕೇರಳ ಸೇರಿದಂತೆ ಹೊರ ರಾಜ್ಯಗಳಿಂದಲೂ ಆಗಮಿಸಿ ಜಿಲ್ಲೆಯಲ್ಲಿ ಸುತ್ತಾಡುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಓಡಾಡುತ್ತಿರುವ ವಾಹನಗಳ ತಪಾಸಣೆಗೆ ಪೊಲೀಸರು ಫೀಲ್ಡಿಗಿಳಿದಿದ್ದು, ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಜನರು ಕೊಡಗಿಗೆ ಪ್ರವಾಸಕ್ಕೆ ಬಂದಿರುವುದು ಬೆಳಕಿಗೆ ಬರುತ್ತಿದೆ. ಪ್ರವಾಸಕ್ಕೆ ಬಂದಿರುವ ವಾಹನಗಳಿಗೆ ದಂಡ ಹಾಕಲಾಗಿದೆ.
Advertisement
Advertisement
ಎಷ್ಟೇ ಪ್ರಯತ್ನಪಟ್ಟರೂ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಂಟ್ರೋಲ್ ಗೆ ಬರುತ್ತಿಲ್ಲ. ಒಂದು ದಿನ ಶೇ.5ಕ್ಕೆ ಇಳಿಯುವ ಪಾಸಿಟಿವಿಟಿ ರೇಟ್, ಮತ್ತೆ ಮರುದಿನ ಶೇ.8 ರಿಂದ 10ಕ್ಕೆ ಏರಿಕೆಯಾಗುತ್ತಿದೆ. ಈ ನಡುವೆ ವೀಕ್ ಎಂಡ್ ಕಫ್ರ್ಯೂ ಇದ್ದರೂ ಕೊಡಗು ಜಿಲ್ಲೆಗೆ ಭಾರೀ ಸಂಖ್ಯೆಯಲ್ಲಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ಕೊಡಗಿನಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗದ ಹಿನ್ನಲೆಯಲ್ಲಿ ಜುಲೈ 5ರ ವರೆಗೆ ಲಾಕ್ಡೌನ್ ಮುಂದುವರೆಸಲಾಗಿದೆ.
ಎಲ್ಲ ಪ್ರವಾಸಿ ತಾಣಗಳು ಬಂದ್ ಆಗಿದ್ದು, ಪ್ರವಾಸಿಗರಿಗೆ ಎಂಟ್ರಿ ಇಲ್ಲ. ಹೀಗಿದ್ದರೂ ಕೊಡಗಿಗೆ ಪ್ರವಾಸಿಗರು ಬರುತ್ತಿದ್ದಾರೆ. ಕೊಡಗಿಗೆ ಬರುತ್ತಿರುವ ಪ್ರವಾಸಿಗರು ಜಿಲ್ಲೆಗೆ ಮತ್ತಷ್ಟು ಕಂಟಕವಾಗಬಹುದು ಎಂಬುದು ಸ್ಥಳೀಯ ಶಾಸಕರ ಆತಂಕ. ಅಲ್ಲದೆ ಪ್ರವಾಸಿಗರೇ ಇಲ್ಲಿಂದ ಸೋಂಕು ಅಂಟಿಸಿಕೊಂಡು ಹೋಗುವ ಸಾಧ್ಯತೆ ಇದೆ. ಹೀಗಾಗಿಯೇ ಅನಾವಶ್ಯಕವಾಗಿ ಜಿಲ್ಲೆಗೆ ಬರುತ್ತಿರುವವರನ್ನು ಗಡಿಭಾಗದಲ್ಲೇ ತಡೆದು ವಾಪಸ್ ಕಳುಹಿಸುವಂತೆ ಸೂಚಿಸಲಾಗಿದೆ. ತಕ್ಷಣವೇ ಜಿಲ್ಲಾಧಿಕಾರಿಯವರೇ ಟಾಸ್ಕ್ ಫೋರ್ಸ್ ಸಮಿತಿ ಸಭೆ ಕರೆದು ಇದೆಲ್ಲದಕ್ಕೂ ಕಡಿವಾಣ ಹಾಕುವಂತೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಆಗ್ರಹಿಸಿದ್ದಾರೆ.