ದಶಕಗಳಿಂದೀಚೆಗೆ ಕನ್ನಡ ಸಿನಿಮಾಗಳ ಬಗ್ಗೆ ಪರಭಾಷಾ ನೆಲದಲ್ಲಿ ಅದೆಂತಹ ತಾತ್ಸಾರದ ಭಾವವಿತ್ತೆಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. ಇಲ್ಲಿ ಬರೀ ರಿಮೇಕ್ ಮಾಡ್ತಾರೆಂಬುದರಿಂದ ಮೊದಲ್ಗೊಂಡು, ಗುಣಮಟ್ಟದವರೆಗೂ ಕನ್ನಡ ಸಿನಿಮಾಗಳ ಬಗ್ಗೆ ಕಂಪ್ಲೇಂಟುಗಳ ಸರಮಾಲೆಗಳೇ ಇದ್ದವು. ಅದಕ್ಕೆ ಕಾರಣ ಸೀಮಿತ ಮಾರುಕಟ್ಟೆ ಎಂಬಂಥ ಸಮಜಾಯಿಷಿಗಳೂ ಈ ದಿಕ್ಕಿನಿಂದ ಕೇಳಿ ಬರುತ್ತಿದ್ದವು. ಅಂತಹ ಕಾಲಘಟ್ಟದಲ್ಲಿ ಎಲ್ಲ ಇಲ್ಲಗಳನ್ನು ಮೀರಿಕೊಂಡು ಪರಭಾಷೆಗಳಲ್ಲಿಯೂ ಅಚ್ಚರಿ ಮೂಡುವಂಥ ಸಿನಿಮಾ ಮಾಡೋದೆಂದರೆ ಅದೊಂದು ಸಾಹಸ. ಅದನ್ನು ಸಾಧ್ಯವಾಗಿಸಿದ್ದು ಉಪ್ಪಿ ನಿರ್ದೇಶನದ `ಓಂ’ ಚಿತ್ರ!
Advertisement
ಅದಾಗಲೇ ‘ತರ್ಲೆ ನನ್ಮಗ’ ಮತ್ತು ‘ಶ್’ ಎಂಬೆರಡು ಸಿನಿಮಾ ನಿರ್ದೇಶನದ ಬಳಿಕ ಉಪೇಂದ್ರ ಅವರ ಮೂರನೇ ಸಿನಿಮಾ ಓಂ. ಅದೆಷ್ಟೋ ವರ್ಷಗಳಿಂದ ಈ ಕಥೆಯನ್ನು ಹದಗೊಳಿಸಿಕೊಂಡು ಕಾಯುತ್ತಿದ್ದ ಉಪೇಂದ್ರ, ಭೂಗತ ಜಗತ್ತಿನ ಕಥೆ ಹೇಳುತ್ತಿದ್ದಾರೆಂಬ ಸುಳಿವು ಸಿಕ್ಕಾಗ ಅದೆಷ್ಟು ಮಂದಿ ಅಚ್ಚರಿಗೊಂಡಿದ್ದರೋ ಗೊತ್ತಿಲ್ಲ. ಆದರೆ ತುಂಬಾ ಜನ ಇದು ವರ್ಕೌಟ್ ಆಗೋ ಸಂಗತಿ ಅಲ್ಲ ಎಂಬರ್ಥದಲ್ಲಿ ಮೂಗು ಮುರಿದಿದ್ದದ್ದಂತೂ ಸತ್ಯ. ಆದರೆ ಅದು ಬಿಡುಗಡೆಯಾದ ನಂತರದಲ್ಲಿ ಎಲ್ಲ ಚಿತ್ರಣವೂ ಬದಲಾಗಿ ಹೋಗಿತ್ತು.
Advertisement
Advertisement
ಇದರಲ್ಲಿನ ಕಥೆ, ನಿರೂಪಣಾ ಶೈಲಿಗೆ ಕನ್ನಡದ ಪ್ರೇಕ್ಷಕರೆಲ್ಲ ಫಿದಾ ಆಗಿದ್ದರು. ಆ ಕಾಲಕ್ಕೆ ಮಾಧ್ಯಮಗಳು ಈ ಪಾಟಿ ಬೆಳೆದಿಲ್ಲವಾದರೂ ಕೂಡ ತಾನೇ ತಾನಾಗಿ ‘ಓಂ’ ಪ್ರಭೆ ಕನ್ನಡದ ಗಡಿ ದಾಟಿ ಪರಭಾಷೆಗಳತ್ತಲೂ ಹಬ್ಬಿಕೊಂಡಿತ್ತು. ಯಾವ ಜನ ಕನ್ನಡ ಚಿತ್ರಗಳೆಂದರೆ ಅಸಡ್ಡೆ ತೋರುತ್ತಿದ್ದರೋ ಅದೇ ಜನ ‘ಓಂ’ ಅನ್ನು ನೋಡಬೇಕೆಂದು ಕಾತರರಾಗಿದ್ದರು. ನಂತರದಲ್ಲಿ ಅದರ ರಿಮೇಕ್ ಹಕ್ಕುಗಳಿಗಾಗಿ ಪರಭಾಷಾ ನಿರ್ಮಾಪಕರ ಕಡೆಯಿಂದ ಪೈಪೋಟಿಯೂ ಆರಂಭವಾಗಿತ್ತು.
Advertisement
‘ಓಂ’ 1997ರಲ್ಲಿ ಓಂಕಾರಂ ಎಂಬ ಹೆಸರಲ್ಲಿ ರಿಮೇಕ್ ಆಗಿತ್ತು. ಅದರಲ್ಲಿ ರಾಜಶೇಖರ್ ಮತ್ತು ಕನ್ನಡದ ಪ್ರೇಮಾ ನಾಯಕ ನಾಯಕಿಯರಾಗಿ ನಟಿಸಿದ್ದರು. ವಿಶೇಷವೆಂದರೆ, ತೆಲುಗಿನಲ್ಲಿಯೂ ಉಪೇಂದ್ರ ಅವರೇ ನಿರ್ದೇಶನ ಮಾಡಿದ್ದರು. ಅದು ಅಲ್ಲಿಯೂ ದಾಖಲೆಯ ಪ್ರದರ್ಶನವನ್ನೇ ಕಂಡಿತ್ತು. ಇದರಿಂದಾಗಿಯೇ ಬೇರೆ ಭಾಷೆಗಳಲ್ಲಿಯೂ ಕನ್ನಡ ಸಿನಿಮಾದತ್ತ ಬೆರಗಿನ ಮಾತುಗಳು ಕೇಳಿ ಬರಲು ಕಾರಣವಾಗಿತ್ತು. ಆ ನಂತರದಲ್ಲಿ ಓಂ ಅರ್ಜುನ್ ಪಂಡಿತ್ ಎಂಬ ಶೀರ್ಷಿಕೆಯಲ್ಲಿ ಹಿಂದಿಗೂ ರೀಮೇಕ್ ಆಗಿ ತೆರೆಗಂಡಿತ್ತು.
ಆ ಬಳಿಕ ‘ಓಂ’ನ ಸ್ಫೂರ್ತಿಯಿಂದಲೇ ಪರಭಾಷೆಗಳಲ್ಲಿ ಒಂದಷ್ಟು ಸಿನಿಮಾಗಳು ತಯಾರುಗೊಂಡಿದ್ದವು. ಸೂಪರ್ ಹಿಟ್ ಚಿತ್ರಗಳೇ ಕನ್ನಡದ ‘ಓಂ’ನಿಂದ ಸ್ಫೂರ್ತಿಗೊಂಡಂತೆ ಅಣಿಗೊಳ್ಳಲಾರಂಭಿಸಿದವು. ಹಾಗೆ ಮೊದಲ ಸಲ ದೊಡ್ಡ ಮಟ್ಟದಲ್ಲಿ ಕನ್ನಡದ ಘನತೆಯನ್ನು ಪರಭಾಷಾ ಚಿತ್ರರಂಗಗಳಲ್ಲಿಯೂ ಹಬ್ಬಿಕೊಳ್ಳುವಂತೆ ಮಾಡಿದ ಹೆಗ್ಗಳಿಕೆ ನಿಸ್ಸಂದೇಹವಾಗಿ ‘ಓಂ’ಗೆ ಸಲ್ಲುತ್ತದೆ. ಹೀಗೆ ಕೆದಕುತ್ತಾ ಹೋದರೆ, ‘ಓಂ’ನ ದಾಖಲೆಗಳು ದಂಡಿ ದಂಡಿಯಾಗಿಯೇ ಕಾಣಸಿಗುತ್ತವೆ. ಇಂದಿಗೆ ಆ ಸಿನಿಮಾ ಬಿಡುಗಡೆಯಾಗಿ 25 ವರ್ಷ ತುಂಬುತ್ತಿರೋದರ ಹಿನ್ನೆಲೆಯಲ್ಲಿ ಚಿತ್ರರಂಗದಲ್ಲೊಂದು ಸಂಭ್ರಮ ಮಡುಗಟ್ಟಿದೆಯಲ್ಲಾ? ಅದು ಸಿನಿಮಾ ಸೃಷ್ಟಿಕರ್ತರ ಆಲೋಚನಾ ಕ್ರಮವನ್ನೇ ಬದಲಾಯಿಸಿಬಿಟ್ಟ `ಓಂ’ಕಾರದ ಅಸಲೀ ಖದರ್ ಅನ್ನಲಡ್ಡಿಯಿಲ್ಲ!.