– 5 ಎಕ್ರೆಯಲ್ಲಿ ಬೆಳೆದಿದ್ದ 70 ಕೆಜಿ ಗಾಂಜಾ ವಶ
ಹಾಸನ: ಜಿಲ್ಲೆಯ ಅಬಕಾರಿ ಡಿಸಿ ಗೋಪಾಕೃಷ್ಣಗೌಡ ನೇತೃತ್ವದ ತಂಡ ದಾಳಿ ಮಾಡಿ ಹಾಸನದಲ್ಲಿ ಸುಮಾರು ಐದು ಎಕರೆ ಜಮೀನಿನಲ್ಲಿ ಬೆಳೆಗಳ ಮಧ್ಯೆ ಯಾರಿಗೂ ತಿಳಿಯದಂತೆ ಬೆಳೆಯಲಾಗಿದ್ದ ಸುಮಾರು 15 ಲಕ್ಷ ಮೌಲ್ಯದ 70 ಕೆಜಿ ಅಕ್ರಮ ಗಾಂಜಾ ಬೆಳೆಯನ್ನು ವಶಪಡಿಸಿಕೊಂಡಿದ್ದಾರೆ.
ಅರಕಲಗೂಡು ತಾಲೂಕಿನ ಹೊಡೆನೂರು ಗ್ರಾಮದ ಮೂವರು ರೈತರ ಜಮೀನಿನ ಮೇಲೆ ದಾಳಿ ನಡೆಸಿ ಅಕ್ರಮ ಗಾಂಜಾ ಬೆಳೆದಿರೋದನ್ನು ಬಯಲು ಅಧಿಕಾರಿಗಳು ಮಾಡಿದ್ದಾರೆ. ಶುಂಠಿ ಬೆಳೆಯಲು ಕರ್ನಾಟಕಕ್ಕೆ ಬಂದ ಕೆಲವು ಕೇರಳ ಮೂಲದ ಮಂದಿಯೇ ರೈತರಿಗೆ ಗಾಂಜಾ ಬೀಜ ನೀಡಿ ಅವರ ಜಮೀನಿನಲ್ಲಿ ಗಾಂಜಾ ಬೆಳೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
Advertisement
Advertisement
ಅಷ್ಟೇ ಅಲ್ಲದೆ ತಾವೇ ಬೀಜ ನೀಡಿ ಬೆಳೆಸಿದ ಗಾಂಜವನ್ನು ಕೇರಳ ಮೂಲದವರೇ ಕೊಂಡು ಹಲವೆಡೆಗೆ ಕಳ್ಳಸಾಗಾಣೆ ಮಾಡುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸೋಮೇಶ್, ದೇವರಾಜ್, ಹಾಗೂ ಪ್ರಕಾಶ್ನನ್ನು ಬಂಧಿಸಲಾಗಿದೆ. ಇವರು ತಮ್ಮ ಜಮೀನಿನಲ್ಲಿ ಶುಂಠಿ, ಕೋಸು ಹಾಗೂ ಜೋಳದ ಬೆಳೆಗಳ ಮಧ್ಯೆ ಅಲ್ಲಲ್ಲಿ ಗಾಂಜಾ ಗಿಡವನ್ನು ಹುಲುಸಾಗಿ ಬೆಳೆಸಿದ್ದರು.
Advertisement
Advertisement
ಇದೇ ರೀತಿ ಕೆಲವು ದಿನಗಳ ಹಿಂದೆ ಆಲೂರು ತಾಲೂಕಿನಲ್ಲೂ ಕೂಡ ವ್ಯಕ್ತಿಯೊಬ್ಬ ಜಮೀನಿನಲ್ಲಿ ಗಾಂಜಾ ಬೆಳೆದು ಪೊಲೀಸರ ಅತಿಥಿಯಾಗಿದ್ದ. ಇತ್ತೀಚಿನ ಕೆಲ ಪ್ರಕರಣ ಗಮನಿಸಿದರೆ ರೈತರಿಗೆ ಕೆಲವರು ಹಣದಾಸೆ ತೋರಿಸಿ, ಅವರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುವಂತೆ ಮಾಡುತ್ತಿರುವ ಅಂಶ ಬೆಳಕಿಗೆ ಬರುತ್ತಿದೆ. ಅಂತಹವರ ಬಗ್ಗೆ ರೈತರು ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.