ಉಡುಪಿ: ಮುಂದಿನ ಸಿಎಂ ಗಾದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಮುಂದಿನ ನಾಯಕತ್ವದ ಫೈಟ್ ನಡೆಯುತ್ತಿರುವಾಗಲೇ ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್ ಹೆಸರು ತೂರಿ ಬಂದಿದೆ. ಈ ಹೆಸರು ಎತ್ತಿದ್ದು ಕಾಂಗ್ರೆಸ್ ನಾಯಕರಲ್ಲ, ಸಚಿವ ಬಿ.ಸಿ ಪಾಟೀಲ್.
Advertisement
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಕಾಂಗ್ರೆಸ್ಸಿನಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಮಾತ್ರ ಸಿಎಂ ಸ್ಪರ್ಧಿಗಳಲ್ಲ. ಜಿ. ಪರಮೇಶ್ವರ್ ಕೂಡ ಸಿಎಂ ಕ್ಯಾಂಡಿಡೇಟ್. ದಲಿತ ಸಿಎಂ ಆಗಬೇಕು ಎಂದು ಪರಮೇಶ್ವರ್ ಸದ್ದಿಲ್ಲದೆ ತಯಾರಿ ನಡೆಸುತ್ತಿದ್ದಾರೆ ಎಂದು ಮೂರನೇ ಹೆಸರನ್ನು ತೇಲಿಬಿಟ್ಟಿದ್ದಾರೆ. ಎಲ್ಲರೂ ಸಿಎಂ ಸ್ಥಾನಕ್ಕೆ ಸ್ಪರ್ಧೆ ಮಾಡುವುದು ತಪ್ಪಲ್ಲ, ಕೂಸು ಹುಟ್ಟುವ ಮೊದಲು ತೊಟ್ಟಿಲು ಕಟ್ಟಿ ತೂಗಿದ್ರೆ ಹೇಗೆ ಎಂದು ಟಾಂಗ್ ಕೊಟ್ಟಿದ್ದಾರೆ.
Advertisement
Advertisement
ಕಾಂಗ್ರೆಸ್ ಎಂಬ ಹಡಿಲು ಭೂಮಿ:
ಕಾಂಗ್ರೆಸ್ ಕಥೆ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತಾಯ್ತು. ರಾಜ್ಯ ಕಾಂಗ್ರೆಸ್ಸಿನಲ್ಲಿ ಮುಂದಿನ ಸಿಎಂ ಚರ್ಚೆ ನಡೆಯುತ್ತಿದೆ ಎಂದು ಸಚಿವ ಬಿಸಿ ಪಾಟೀಲ್ ಕಾಂಗ್ರೆಸ್ ನಾಯಕರಿಗೆ ಚಿವುಟಿದ್ದಾರೆ. ಇದನ್ನೂ ಓದಿ: ಉಡುಪಿಯ ಗದ್ದೆಯಲ್ಲಿ ಹೂತುಹೋದ ಕೃಷಿ ಸಚಿವರ ಕಾರು
Advertisement
ಕಾಂಗ್ರೆಸ್ ಪಕ್ಷ ಈಗಾಗಲೇ ನಿರ್ಣಾಮ ಆಗಿದೆ. ನಾಟಿ ಮಾಡುವ ಮೊದಲು ಬೆಳೆ ತೆಗೆಯಲು ಸಾಧ್ಯವಿಲ್ಲ. 2023ರ ಚುನಾವಣೆಯಲ್ಲಿ ಮೊದಲು ನೀವು ಗೆಲ್ಲಿ ಆಮೇಲೆ ಸಿಎಂ ವಿಚಾರ ಚರ್ಚೆ ಮಾಡಿ. ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಇವರು ಈಗಲೇ ಕುರ್ಚಿಗೆ ಕಿತ್ತಾಡುತ್ತಿದ್ದಾರೆ ಎಂದರೆ ಜನ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಹಡಿಲು ಭೂಮಿಯನ್ನು ಹಿಡಿದುಕೊಂಡು ಕನಸು ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು. ಮುಂದಿನ 2023ರ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಬಿ.ಸಿ ಪಾಟೀಲ್ ಹೇಳಿದರು.