– ಕೊರೊನಾ ಎರಡನೇ ಅಲೆ, ಚಳಿಗಾಲ ಪರಿಗಣಿಸಿ ಮುಂದಿನ ನಿರ್ಧಾರ
– ತಜ್ಞರ ಸಲಹೆಯಂತೆ ಶಾಲೆ ತೆರೆಯುತ್ತಿಲ್ಲ
ಬೆಂಗಳೂರು: ಶಾಲಾ ಕಾಲೇಜು ಆರಂಭದ ಕುರಿತು ಶಿಕ್ಷಣ ಇಲಾಖೆ ಸಾಕಷ್ಟು ಸಭೆ ನಡೆಸುವ ಮೂಲಕ ಚರ್ಚೆ ನಡೆಸಿದ್ದು, ಮಾತ್ರವಲ್ಲದೆ ತಜ್ಞರ ಸಲಹೆಯನ್ನು ಸಹ ಪಡೆಯಲಾಗಿದೆ. ಮುಖ್ಯಮಂತ್ರಿಗಳ ಸಲಹೆಯನ್ನೂ ಸ್ವೀಕರಿಸಲಾಗಿದೆ. ಎಲ್ಲರ ಸಲಹೆಗೆ ಸಂಪೂರ್ಣ ಮನ್ನಣೆ ನೀಡಿ ಡಿಸೆಂಬರ್ ಅಂತ್ಯದ ವರೆಗೆ ಶಾಲಾ ಕಾಲೇಜು ತೆರೆಯದಿರಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
Advertisement
ಶಾಲೆ ಆರಂಭದ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಸುಧಾಕರ್ ಅವರು ಹೈದರಾಬಾದ್ನಿಂದ ವೆಬಿನಾರ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದು, ತಜ್ಞರ ಅಭಿಪ್ರಾಯ ಹಾಗೂ ಸಲಹೆಗಳನ್ನು ವಿವರಿಸಿದರು. ತಜ್ಞರ ವರದಿ ಬಗ್ಗೆ ಸುಧಾಕರ್ ಅವರು ಮಾಹಿತಿ ನೀಡಿದ ಬಳಿಕ ಡಿಸೆಂಬರ್ ಅಂತ್ಯದ ವರೆಗೆ ಶಾಲಾ ಕಾಲೇಜುಗಳನ್ನು ತೆರೆಯುವುದು ಬೇಡ ಎಂಬ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
Advertisement
Advertisement
ಮಕ್ಕಳ ಜೀವ ಮುಖ್ಯ: ಕೊರೊನಾ ಎರಡನೇ ಅಲೆ ಶುರುವಾಗುತ್ತಿರುವುದು ಹಾಗೂ ಚಳಿಗಾಲ ಆರಂಭವಾಗಿರುವ ಹಿನ್ನೆಲೆ ಅಪಾಯ ಹೆಚ್ಚಿದೆ. ಹೀಗಾಗಿ ಡಿಸೆಂಬರ್ ಅಂತ್ಯದ ವರೆಗೆ ಶಾಲಾ ಕಾಲೇಜು ತೆರೆಯುವುದು ಬೇಡ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ತರಗತಿಗಳು ನಡೆಯದಿರುವುದರಿಂದ ಹಳ್ಳಿಗಳಲ್ಲಿ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹಗಳು ಹೆಚ್ಚುತ್ತಿವೆ. ಸಾಮಾಜಿಕ ಪಿಡುಗಗಳು ನಮ್ಮನ್ನು ಕಾಡಲು ಆರಂಭಿಸಿವೆ. ಈ ನಿಟ್ಟಿನಲ್ಲಿ ಸಹ ಚರ್ಚೆ ನಡೆಯಿತು. ಆದರೆ ಎಲ್ಲದಕ್ಕಿಂತ ಮಕ್ಕಳ ಜೀವ ಮುಖ್ಯ ಎಂಬ ಉದ್ದೇಶದಿಂದ ಶಾಲೆ ತೆರೆಯುತ್ತಿಲ್ಲ ಎಂದು ವಿವರಿಸಿದರು.
Advertisement
ಸದ್ಯಕ್ಕಿಲ್ಲ ವಿದ್ಯಾಗಮ: ನಮಗೆ 1-8ನೇ ತರಗತಿಯವರೆಗೆ ಶಾಲೆ ಪ್ರಾರಂಭ ಮಾಡುವ ಯೋಚನೆ ಇಲ್ಲ. ಆದರೆ 10ನೇ ತರಗತಿ ಮತ್ತು ಪಿಯುಸಿ ಬಗ್ಗೆ ಚರ್ಚೆ ನಡೆಯಿತು. ಆದರೆ ಈ ವರ್ಷ 1-8ನೇ ತರಗತಿಯವರೆಗೆ ಶಾಲೆ ಪ್ರಾರಂಭಿಸುವುದಿಲ್ಲ. ಡಿಸೆಂಬರ್ 3ನೇ ವಾರದಲ್ಲಿ ಮತ್ತೊಂದು ಸಭೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆನ್ಲೈನ್ ಮೂಲಕ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ತರಗತಿಗಳು ಮುಂದುವರಿಯುತ್ತವೆ. ಇದಲ್ಲದೆ ಶಿಕ್ಷಕರು ವಾಟ್ಸಪ್ ಗ್ರೂಪ್ ಸೇರಿದಂತೆ ಇನ್ನಿತರ ವಿಧಾನದ ಮೂಲಕ ಕಲಿಕೆ ಮುಂದುವರಿದಿದೆ. ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಮಕ್ಕಳ ಹಿತ, ಯೋಗ ಕ್ಷೇಮಕ್ಕೆ ನಮ್ಮ ಆದ್ಯತೆ. ಯಾರ ಒತ್ತಡಕ್ಕೂ ಶಾಲೆ ಪ್ರಾರಂಭ ಮಾಡುವುದಿಲ್ಲ. ಇದೀಗ ಎಲ್ಲ ಚರ್ಚೆ ನಡೆಸಿ ಆರೋಗ್ಯ ಇಲಾಖೆ, ಸಿಎಂ ಮಾತಿಗೆ ಮನ್ನಣೆ ನೀಡಿ ಡಿಸೆಂಬರ್ ವರೆಗೆ ಶಾಲಾ-ಕಾಲೇಜು ಆರಂಭಿಸಲ್ಲ. ವಿದ್ಯಾಗಮವನ್ನು ಸಹ ಸದ್ಯಕ್ಕೆ ಮತ್ತೆ ಆರಂಭಿಸುವುದಿಲ್ಲ ಎಂದು ತಿಳಿಸಿದರು.
ಯೂಟ್ಯೂಬ್, ಚಂದನ ವಾಹಿನಿ ಜೊತೆಗೆ ಜಿಯೋ ಟಿವಿಯವರು ಸಹ ಉಚಿತವಾಗಿ ಪಠ್ಯ ಬೋಧನೆಗೆ ಮುಂದೆ ಬಂದಿದ್ದಾರೆ. ಸದ್ಯದಲ್ಲೆ ಪಿಯುಸಿ, ಎಸ್ಎಸ್ಎಲ್ಸಿ ವೇಳಾಪಟ್ಟಿ ಪ್ರಕಟ ಮಾಡುತ್ತೇವೆ. ಮಕ್ಕಳಿಗೆ ಅನುಕೂಲವಾಗುವ ರೀತಿ ವೇಳಾಪಟ್ಟಿ ಇರುತ್ತದೆ. ಒಟ್ಟು 9,56,566 ಎಸ್ಎಸ್ಎಲ್ಸಿ ಮಕ್ಕಳಿದ್ದಾರೆ. 5,70,126 ದ್ವಿತೀಯ ಪಿಯುಸಿ ಮಕ್ಕಳಿದ್ದಾರೆ ಎಂದು ವಿವರಿಸಿದರು.