ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ-ಗೋವಾ ಮಧ್ಯಭಾಗದಲ್ಲಿರುವ ಅಂಬೋಲಿ ಫಾಲ್ಸ್ ಜಲವೈಭವ ನೋಡುಗರ ಕಣ್ಣಿಗೆ ಹಬ್ಬ. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆ ಸಾವಂತವಾಡಿ ತಾಲೂಕಿನ ಅಂಬೋಲಿಯಲ್ಲಿರುವ ಈ ಜಲಪಾತ ಕಿಂಗಡಮ್ ಆಫ್ ಫಾಲ್ಸ್ ಅಂತಾನೇ ಫೇಮಸ್.
Advertisement
ವರ್ಷಧಾರೆಗೆ ಮೈದುಂಬಿರುವ ಈ ಜಲಧಾರೆ ಪ್ರತಿವರ್ಷ ಪ್ರವಾಸಿಗರನ್ನು ಹರ್ಷದ ಹೊನಲಿನಲ್ಲಿ ಮಿಂದೇಳಿಸುತ್ತಿತ್ತು. ಆದರೆ ಈ ಬಾರಿ ಮಾತ್ರ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಈ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶವಿಲ್ಲ. ಆದರೆ ಈ ಮಾರ್ಗವಾಗಿ ಸಂಚರಿಸುವ ಜನರು ಕೆಲವು ಕ್ಷಣಗಳ ಕಾಲ ಈ ಪ್ರದೇಶದಲ್ಲಿ ನಿಂತು ತೆರಳುತ್ತಿದ್ದಾರೆ.
Advertisement
Advertisement
ಅಂಬೋಲಿಯಲ್ಲಿರುವ ಈ ಜಲಪಾತಗಳ ಸ್ವರ್ಗವಷ್ಟೇ ಅಲ್ಲ ಬೆಟ್ಟದ ಮೇಲೆ ಆವರಿಸುವ ದಟ್ಟ ಮಂಜು ಸಹ ನೋಡುಗರ ಕಣ್ಮನ ಸೆಳೆಯುತ್ತದೆ. ಸಹ್ಯಾದ್ರಿ ಶ್ರೇಣಿಗಳಲ್ಲಿರುವ ಈ ಅಂಬೋಲಿ ಕಣಿವೆಯಲ್ಲಿ ಸಾಗುತ್ತಿದ್ದರೆ ಆ ಮಂಜಿನ ಚಿತ್ತಾರ, ಬೆಟ್ಟಗಳ ಸಾಲಿನಲ್ಲಿ ಜಲಪಾತದ ಹರ್ಷೋದ್ಘಾರ ಈ ಸುಂದರ ದೃಶ್ಯಕಾವ್ಯವನ್ನು ಬಣ್ಣಿಸಲು ಪದಗಳೇ ಸಾಲದು. ಇದಷ್ಟೇ ಅಲ್ಲದೇ ಈ ಅಂಬೋಲಿ ಕಣಿವೆಗಳಲ್ಲಿ ಸಾಕಷ್ಟು ಮಂಗಗಳು ಸಹ ವಾಸವಿವೆ. ಪ್ರತಿ ವರ್ಷ ಇಲ್ಲಿ ಆಗಮಿಸುತ್ತಿದ್ದ ಸಹಸ್ರಾರು ಪ್ರವಾಸಿಗರು ಈ ಮಂಗಗಳಿಗೆ ಆಹಾರ ನೀಡುತ್ತಿದ್ದರು.
Advertisement
ಯಾವುದಾದರೂ ವಾಹನ ಈ ಮಾರ್ಗವಾಗಿ ಪಾಸ್ ಆದ್ರೆ ಸಾಕು ಯಾರಾದರೂ ಏನಾದರೂ ಕೊಡ್ತಾರಾ ಅಂತ ಈ ಮಂಗಗಳು ವಾಹನದತ್ತ ಧಾವಿಸುತ್ತವೆ. ಕಳೆದ 15 ದಿನಗಳಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನದಿ ಅಂಚಿನ ಗ್ರಾಮಗಳಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದರೆ, ಮತ್ತೊಂದೆಡೆ ಜಲಪಾತಗಳಲ್ಲಿ ಜಲವೈಭವವೇ ಸೃಷ್ಟಿಯಾಗಿದೆ. ಆದರೆ ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಜಲಪಾತಗಳ ವೀಕ್ಷಣೆ ಹಾಗೂ ಪ್ರಕೃತಿ ವೈಭವ ಕಣ್ತುಂಬಿಕೊಳ್ಳಲು ಈ ಬಾರಿ ಸಾಧ್ಯವಾಗುತ್ತಿಲ್ಲ.