ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಉನ್ನತ ಶಿಕ್ಷಣ ಹಾಗೂ ಆರೋಗ್ಯ ಸೇವೆಯ ಕಾರಿಡಾರ್ನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಜಿಲ್ಲೆಯ ಬಹುದಿನಗಳ ಕನಸಾಗಿದ್ದ ಮೆಡಿಕಲ್ ಕಾಲೇಜು ಆರಂಭಕ್ಕೆ ಸಿದ್ಧತೆಗಳು ನಡೆದಿವೆ. ಈಗಾಗಲೇ ವೈದ್ಯಕೀಯ ಕಾಲೇಜು ಕ್ಯಾಂಪಸ್ ನಿರ್ಮಾಣ ಭರದಿಂದ ಸಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಜೂನ್ ಅಥವಾ ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಂಡು ಉದ್ಘಾಟಿಸಲಾಗುವುದು. ಹಾಗೆಯೇ ನರ್ಸಿಂಗ್, ಪ್ಯಾರಾ ಮೆಡಿಕಲ್, ಫಾರ್ಮಸಿ ಕೋಸ್ಗಳನ್ನೂ ಆರಂಭಿಸಲಾಗುವುದು. ಆಯುಷ್ ಆಸ್ಪತ್ರೆ ಮತ್ತು ಕಾಲೇಜು ಆರಂಭಕ್ಕೂ ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು. ಇದರ ಜೊತೆಗೆ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಸಹಿತ ಉನ್ನತ ಶಿಕ್ಷಣದ ಎಲ್ಲಾ ಕೋರ್ಸ್ಗಳ ಆರಂಭಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
Advertisement
Advertisement
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಲಿಕಾ ನಿರ್ವಹಣಾ ವ್ಯವಸ್ಥೆಯಡಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿ.ಸಿ.ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆ ರಾಜಧಾನಿಗೆ ಸಮೀಪ ಇರುವುದರಿಂದ ಉನ್ನತ ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿನ ಸವಲತ್ತುಗಳನ್ನು ಅಭಿವೃದ್ಧಿಪಡಿಸಿದರೆ, ತಾನೇ ತಾನಾಗಿ ಈ ಎರಡೂ ಕ್ಷೇತ್ರದ ಕೇಂದ್ರವಾಗಿ ಬೆಳವಣಿಗೆ ಹೊಂದಲಿದೆ. ಆ ನಿಟ್ಟಿನಲ್ಲಿ ನೀಲನಕ್ಷೆ ರೂಪಿಸಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಮುಖ್ಯಮಂತ್ರಿ ಯಡಿಯೂರಪ್ಪ ಅವರು, ತಮಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಈ ಎರಡೂ ಖಾತೆಗಳನ್ನು ನೀಡಿರುವುದು ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಿದೆ ಎಂದರು.
Advertisement
ಸದ್ಯ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿರುವವರ ಸಂಖ್ಯೆ ಕಡಿಮೆಯಿದೆ. ಶಿಕ್ಷಣಕ್ಕೆ ದಾಖಲಾಗುವ ಶೇ.75 ರಷ್ಟು ಮಂದಿಯಾದರೂ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವಂತಾಗಬೇಕು. ಅದಕ್ಕೆ ತಕ್ಕನಾಗಿ ಸವಲತ್ತುಗಳನ್ನು ನಾವು ಒದಗಿಸಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯನ್ನು ಮಾದರಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಕಾರಿಡಾರ್ನ್ನಾಗಿ ರೂಪಿಸಲಾಗುವುದು ಎಂದರು.
Advertisement
ಕಾಲೇಜುಗಳ ಅಭಿವೃದ್ಧಿಗೆ ಕ್ರಮ: ನಗರದ ಕಾಲೇಜುಗಳ ಅಭಿವೃದ್ಧಿಗೆ ಒಟ್ಟು 6.67 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರಯೋಗಾಲಯ, ಹೆಚ್ಚುವರಿ ಕೊಠಡಿಗಳು, ಶೌಚಾಲಯ ನಿರ್ಮಾಣಗಳಿಗೆ ಹಣ ನೀಡಲಾಗಿದೆ. ಹಾಗೆಯೇ ಜಿಲ್ಲೆಯ ಪ್ರಥಮ ಮಹಿಳಾ ಕಾಲೇಜು ನಿರ್ಮಾಣಕ್ಕೂ ಡಿಎಂಎಫ್ ನಿಧಿ ಅಡಿಯಲ್ಲಿ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಆರಂಭಗೊಂಡಿರುವ ಮಹಿಳಾ ಕಾಲೇಜು ಕಟ್ಟಡ ಕಾಮಗಾರಿ ಇದೇ ವರ್ಷ ಪೂರ್ಣಗೊಂಡು ಉದ್ಘಾಟನೆ ಆಗಲಿದೆ. ಕಾಲೇಜು ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಮತ್ತು ಬೋಧಕ ಸಿಬ್ಬಂದಿ ಹೆಚ್ಚು ಮುತುವರ್ಜಿ ವಹಿಸಿ ಕಾಲೇಜು ಆವರಣವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು. ಬೋಧನೆ ಜತೆಗೆ ಶುಚಿತ್ವಕ್ಕೂ ಒತ್ತು ನೀಡಬೇಕು ಎಂದು ಸಚಿವರು ಕಿವಿಮಾತು ಹೇಳಿದರು.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಶಿಕ್ಷಣ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಮೊದಲ ವರ್ಷದ ಎಲ್ಲಾ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ನೀಡುತ್ತಿದೆ. ಕಲಿಕಾ ನಿರ್ವಹಣಾ ವ್ಯವಸ್ಥೆಯಡಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯಲ್ಲಿ 4,200 ಮಂದಿಗೆ ಟ್ಯಾಬ್ಲೆಟ್ ಪಿಸಿಗಳನ್ನು ಉಚಿತವಾಗಿ ನೀಡುತ್ತಿದ್ದು ಇದರ ಸೌಲಭ್ಯಗಳನ್ನು ಪಡೆದು ವಿದ್ಯಾರ್ಥಿಗಳು ಜಿಲ್ಲೆಗೆ ಒಳ್ಳೇಯ ಹೆಸರು ತರಬೇಕು ಎಂದರು.
ಮೊದಲು ಕಾಲೇಜು ಆರಂಭ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ತಜ್ಞರ ಅಭಿಪ್ರಾಯ ಪಡೆದು ಕೆಲ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿ ಮೊದಲು ಕಾಲೇಜುಗಳನ್ನು ಆರಂಭಿಸಲಾಗುವುದು. ಆ ನಂತರವಷ್ಟೇ ಶಾಲೆಗಳ ಆರಂಭದ ಬಗ್ಗೆ ನಿರ್ಧರಿಸಲಾಗುವುದು. ಆದಷ್ಟು ಶೀಘ್ರದಲ್ಲೇ ಎಲ್ಲಾ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಫಸ್ಟ್: ಸೋಮವಾರ ನಡೆದ ಲಸಿಕಾ ಮೇಳದಂದು ಜಿಲ್ಲೆಯಲ್ಲಿ ನಲವತ್ತು ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. ಇದಕ್ಕೆ ಕಾರಣರಾದ ಜಿಲ್ಲಾಧಿಕಾರಿ, ಡಿಎಚ್ಒ, ನರ್ಸ್ಗಳು ಹಾಗೂ ಇತರೆ ಸಿಬ್ಬಂದಿಗಳನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಜನರಿಗೆ ಲಸಿಕೆಯನ್ನು ಆದ್ಯತೆ ಮೇರೆಗೆ ನೀಡಲು ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಆ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ಕೊರೊನಾ ಮುಕ್ತ ಜಿಲ್ಲೆ ಎಂದೂ ಕರ್ನಾಟಕವು ಕೊರೊನಾ ಮುಕ್ತ ರಾಜ್ಯ ಆಗಬೇಕು. ನಿನ್ನೆಯವರೆಗೆ ರಾಜ್ಯದ ಎರಡೂ ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ. ನಿನ್ನೆ ಒಂದೇ ದಿನ 11.24 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮೂರನೇ ಅಲೆ ಎದುರಿಸಲು ಸಕಲ ಸಿದ್ದತೆ: ಮುಂದೆ ಬರುತ್ತದೆ ಎಂದು ನಿರೀಕ್ಷಿಸಲಾಗಿರುವ ಕೊರೊನಾ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ನಡೆಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಐವತ್ತರಿಂದ ಅರವತ್ತು ಹಾಸಿಗೆಗಳನ್ನು ಮಕ್ಕಳ ಚಿಕಿತ್ಸೆಗೆ ಸಿದ್ಧಪಡಿಸಲಾಗುತ್ತಿದೆ. ಇದರ ಜತೆಗೆ ವಿಶೇಷ ನಿಗಾ ಘಟಕಗಳನ್ನೂ ಸ್ಥಾಪಿಸಲಾಗುವುದು. ಒಟ್ಟಾರೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ರಾಜ್ಯದ ಆರೋಗ್ಯ ಕ್ಷೇತ್ರದ ಸುಧಾರಣೆ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕೆಳ ಹಂತದ ಚಿಕಿತ್ಸಾ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ 250 ಮಾದರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಹೊಸದಾಗಿ ವೈದ್ಯರು, ನರ್ಸ್ ಮತ್ತು ಇತರೆ ಸಿಬ್ಬಂದಿಗಳನ್ನೂ ದೊಡ್ಡ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಕಾಳಜಿ ವಹಿಸಿ ಆದ್ಯತೆ ನೀಡುತ್ತಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದರು. ಇದನ್ನೂ ಓದಿ: ಒಂದೇ ತನಿಖೆಗೆ ಎರಡು ರೀತಿ ತನಿಖಾ ವರದಿ ಬರೆದ ಮೈಸೂರು ಪ್ರಾದೇಶಿಕ ಆಯುಕ್ತ