– ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ವೈದ್ಯರಿಗೆ ಸೂಚನೆ
– ಯಾವುದೇ ಸೋಂಕಿತರು ಚಿಕಿತ್ಸೆಯಿಂದ ವಂಚಿತರಾಗಬಾರದು
– ಔಷಧಿ, ಲಸಿಕೆ, ಬೆಡ್, ಆಕ್ಸಿಜನ್ ಸದಾ ಲಭ್ಯವಿರಬೇಕು
ಚಿಂಚೋಳಿ (ಕಲಬುರಗಿ): ಕೋವಿಡ್- 19 ಸೋಂಕಿತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಸಕಾಲಕ್ಕೆ ಸರಿಯಾಗಿ ವೈದ್ಯರು ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕೆಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಇಂದಿಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚಿಂಚೋಳಿ ಪಟ್ಟಣದಲ್ಲಿರುವ ತಾಲ್ಲೂಕಿನ 30 ಹಾಸಿಗೆ ಸಾಮರ್ಥ್ಯವುಳ್ಳ ಅಸ್ಪತ್ರೆಗೆ ಇಂದು ದಿಢೀರ್ ಭೇಟಿ ಕೊಟ್ಟು ಇಲ್ಲಿ ಕೊರೊನಾ ಸೋಂಕಿತರಿಗೆ ನೀಡುತ್ತಿರುವ ವೈದ್ಯಕೀಯ ಸವಲತ್ತುಗಳು ಹಾಗೂ ಕುಂದು- ಕೊರತೆಗಳ ಬಗ್ಗೆ ಖುದ್ದು ಮಾಹಿತಿ ಪಡೆದರು. ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ರೆಮಿಡಿಸಿವರ್ ಲಸಿಕೆ, ಬೆಡ್, ಐಸಿಯೂ ಬೆಡ್, ಅಗತ್ಯವಿರುವ ಅಕ್ಸಿಜನ್ ಸಿಲಿಂಡರ್, ತಿಂಡಿ, ಊಟ ಸೇರಿದಂತೆ ಅಗತ್ಯ ಸವಲತ್ತುಗಳನ್ನು ಕಲ್ಪಿಸಿಕೊಡುವಂತೆ ಸ್ಥಳದಲ್ಲಿದ್ದ ವೈದ್ಯರಿಗೆ ಸೂಚಿಸಿದರು.
Advertisement
Advertisement
ಯಾವುದೇ ಕಾರಣಕ್ಕೂ ಆಸ್ಪತ್ರೆಯಲ್ಲಿ ಸೋಂಕಿತರು ಸವಲತ್ತುಗಳಿಂದ ವಂಚಿತರಾಗಬಾರದು. ಅಗತ್ಯವಿರುವುದನ್ನು ಮೊದಲೇ ಸಂಗ್ರಹಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಪ್ರತಿದಿನ ಅಸ್ಪತ್ರೆಗೆ ಎಷ್ಟು ಸೋಂಕಿತರು ದಾಖಲಾಗಿದ್ದಾರೆ?, ಎಷ್ಟು ಮಂದಿ ಬಿಡುಗಡೆಯಾದರು?, ಯಾರಿಗೆ ಐಸಿಯು ಬೆಡ್ ಅಗತ್ಯವಿದೆ? ರೆಮಿಡಿಸಿವರ್ ಲಸಿಕೆ ಯಾರಿಗೆ ನೀಡಬೇಕು? ಆಕ್ಸಿಜನ್ ಲಭ್ಯತೆ ಸೇರಿದಂತೆ ಮತ್ತಿತರ ಮಾಹಿತಿಯನ್ನು ಪಡೆದುಕೊಂಡರು.
Advertisement
ಯಾವುದೇ ಒಬ್ಬ ವ್ಯಕ್ತಿಯು ವೈದ್ಯಕೀಯ ಸೇವೆಯಿಂದ ವಂಚಿತನಾಗಬಾರದು. ಒಂದು ವೇಳೆ ಇಲ್ಲಿ ಸೌಲಭ್ಯ ಸಿಗದಿದ್ದರೆ, ಪಕ್ಷದ ತಾಲೂಕು ಇಲ್ಲವೇ ಜಿಲ್ಲಾ ಅಸ್ಪತ್ರೆಗೆ ದಾಖಲಿಸಲು ಕ್ರಮ ತೆಗೆದುಕೊಳ್ಳಬೇಕೆಂದು ತಾಕೀತು ಮಾಡಿದರು. ಇನ್ನು ಮುಂದೆ ಪ್ರತಿದಿನ ಕಡ್ಡಾಯವಾಗಿ ಅಸ್ಪತ್ರೆಗೆ ದಾಖಲಾದವರು, ಬಿಡುಗಡೆಯಾದವರು, ಲಭ್ಯವಿರುವ ಔಷಧೀಯ ಪ್ರಮಾಣ, ಎಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಲಭ್ಯವಿದೆ ಸೇರಿದಂತೆ ಪ್ರತಿ ಮಾಹಿತಿಯ ವಿವರಗಳನ್ನು ಇಲಾಖೆಯ ಇಲ್ಲವೇ ಜಿಲ್ಲೆಯ ವೆಬ್ ಸೈಟ್ ಗೆ ಹಾಕಬೇಕು ಎಂದು ನಿದೇರ್ಶನ ನೀಡಿದರು.
Advertisement
ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬುವ ಸಾಧ್ಯತೆ ಇರುವ ಕಾರಣ ಇದರ ಬಗ್ಗೆಯೂ ಗಮನ ಹರಿಸುವಂತೆ ಸಲಹೆ ನೀಡಿದರು. ಈಗಾಗಲೇ ವಸತಿ ಶಾಲೆಗಳು, ವಿದ್ಯಾರ್ಥಿ ನಿಲಯಗಳು, ಸೇರಿದಂತೆ ಮತ್ತಿತರ ಕಡೆ ಹೋಂ ಐಸೋಲೇಷನ್ ಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲೂಕು ಮಟ್ಟದಲ್ಲಿರುವ ವಸತಿ ನಿಲಯಗಳನ್ನು ತಾತ್ಕಾಲಿಕವಾಗಿ ಬಳಕೆ ಮಾಡಿಕೊಳ್ಳುವಂತೆ ಸಚಿವ ನಿರಾಣಿ ಅವರು ಸಲಹೆ ನೀಡಿದರು.
ಈ ವೇಳೆ ಸಂಸದರಾದ ಡಾಕ್ಟರ್ ಉಮೇಶ್ ಜಾಧವ್, ಶಾಸಕರಾದ ಅವಿನಾಶ್ ಜಾಧವ್, ರಾಜಕುಮಾರ್ ಪಾಟೀಲ್, ವಿಧಾನಸಭಾ ಸದಸ್ಯರಾದ ಸುಶೀಲ್ ನಮೋಶಿ ಹಾಗೂ ಬಿ ಜಿ ಪಾಟೀಲರು ಉಪಸ್ಥಿತರಿದ್ದರು.