ಬೆಂಗಳೂರು: ಹೊಸ ಸಚಿವರಿಗೆ ಖಾತೆ ಹಂಚಿಕೆ ಕಸರತ್ತಿನ ಹೊತ್ತಲ್ಲೇ ಇಡೀ ಸಂಪುಟವನ್ನೇ ವಿಸರ್ಜಿಸಿ, ಹೊಸದಾಗಿ ಸಂಪುಟ ರಚಿಸಿ ಅನ್ನೋ ಕೂಗು ಎದ್ದಿದೆ. ಸಂಪುಟ ಪುನಾರಚನೆ ಮಾಡುವುದು ಒಳ್ಳೆಯದು. ಹಳಬರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು. ಆಗ ಮುಂದೆ 150 ಸೀಟು ಬರೋಕೆ ಸಾಧ್ಯ. ಉತ್ತಮ ಆಡಳಿತ ಕೊಡೋಕೆ ಸಾಧ್ಯ ಅಂತ ಶಾಸಕ ತಿಪ್ಪಾರೆಡ್ಡಿ ಆಗ್ರಹಿಸಿದ್ದಾರೆ.
Advertisement
ಸಚಿವರಾಗಿ 20 ತಿಂಗಳು ಪೂರೈಸಿದವರನ್ನು ಕೈ ಬಿಡಿ. 32 ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕೊಡಿ ಅಂತ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಆಗ್ರಹಿಸಿದ್ದಾರೆ. ಈ ಮಧ್ಯೆ, ಪ್ರಬಲ ಖಾತೆಗೆ ಹೊಸ ಸಚಿವರು ಪಟ್ಟು ಹಿಡಿದಿರುವಾಗಲೇ, ಹಾಲಿ ಸಚಿವರು ಕೂಡ ತಮ್ಮ ಖಾತೆ ಬದಲಾವಣೆಯ ಟೆನ್ಷನ್ ನಲ್ಲಿದ್ದಾರೆ. ನಾಡಿದ್ದು ಗುರುವಾರ ಖಾತೆ ಹಂಚೋದಾಗಿ ಸಿಎಂ ಹೇಳಿದ್ದಾರೆ. ಇದರ ಮಧ್ಯೆ, ಅಸಮಾಧಾನಿತ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಅರವಿಂದ್ ಬೆಲ್ಲದ್ ಮತ್ತು ತಿಪಟೂರು ಶಾಸಕ ಬಿ.ಸಿ. ನಾಗೇಶ್ ಅವರನ್ನು ಸಿಎಂ ಜೊತೆ ಗೃಹ ಸಚಿವ ಬೊಮ್ಮಾಯಿ ಮಾತನಾಡಿಸಿ ಕಳಿಸಿದ್ದಾರೆ.
Advertisement
Advertisement
ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ವಂಚಿತರಾಗಿರುವ ಶಾಸಕ ರೇಣುಕಾಚಾರ್ಯ ಮತ್ತೆ ದೆಹಲಿಗೆ ಹೋಗಿ ಠಿಕಾಣಿ ಹೂಡಿದ್ದಾರೆ. ಇಂದು ಮುಂಜಾನೆ 5.30ಕ್ಕೆ ದೆಹಲಿ ತಲುಪಿರುವ ರೇಣುಕಾಚಾರ್ಯ ನಾಳೆವರೆಗೂ ಅಲ್ಲೇ ಇರಲಿದ್ದಾರೆ. ಆದರೆ ಸಂಘಟನಾ ಪ್ರಮುಖರ ತುರ್ತು ಬುಲಾವ್ ಹಿನ್ನೆಲೆ ದೆಹಲಿಗೆ ಬಂದಿದ್ದೇನೆ ಅಷ್ಟೇ. ಯಾರ ಮೇಲೂ ದೂರು ಕೊಡಲ್ಲ. ಸೀಡಿಗೀಡಿ ಇಲ್ಲ. ಅತೃಪ್ತ ಶಾಸಕರ ಗುಂಪಿನ ನಾಯಕ ನಾನಲ್ಲ ಅಂದಿದ್ದಾರೆ.
Advertisement
ರೇಣುಕಾಚಾರ್ಯ ದೆಹಲಿ ಭೇಟಿಗೆ ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದು, ಅವರ ಕ್ಷೇತ್ರಕ್ಕೆ ಹೆಚ್ಚು ರೈಲು ತರುವ ಪ್ರಯತ್ನಕ್ಕೆ ಹೋಗಿದ್ದಾರೆ ಅಂದ್ರೆ, ಗೃಹಸಚಿವ ಬೊಮ್ಮಾಯಿ ಅವರು, ರೇಣುಕಾಚಾರ್ಯ ನಮ್ ಗುರುಗಳು, ನಾವು ಮಾತಾಡಲ್ಲ ಅಂತ ಮೂದಲಿಸಿದ್ದಾರೆ.
ಉಡುಪಿಯಲ್ಲಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿ, ರೇಣುಕಾಚಾರ್ಯ ಜೊತೆ ಮಾತಾಡ್ತೀನಿ ಅಂದಿದ್ದಾರೆ. ಸಂಜೆ ಹೊತ್ತಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯನ್ನು ಭೇಟಿಯಾಗಿರೋ ರೇಣುಕಾಚಾರ್ಯ, 2 ಗಂಟೆಗಳ ಕಾಲ ರಾಜ್ಯದ ರಾಜಕೀಯ ವಿದ್ಯಮಾನದ ಬಗ್ಗೆ ಚರ್ಚೆ ಮಾಡಿದ್ದಾಗಿ ತಿಳಿಸಿದ್ದಾರೆ. ಕಾರಜೋಳ, ಬೊಮ್ಮಾಯಿ ಲೇವಡಿಗೆ ಪ್ರತಿಕ್ರಿಯಿಸಲ್ಲ ಅಂದಿದ್ದಾರೆ.