ಮುಂಬೈ: ಕೊರೊನಾ ಸೋಂಕಿರುವ ಮಕ್ಕಳಲ್ಲಿ ಕವಾಸಕಿ ಕಾಯಿಲೆಯಂತೆಯೇ ರೋಗಲಕ್ಷಣಗಳು ಕಂಡು ಬರುತ್ತಿರುವುದು ಮುಂಬೈ ನಗರದ ಚಿಂತೆಗೆ ಈಗ ಕಾರಣವಾಗಿದೆ. ಈ ಕಾಯಿಲೆ ಮೊದಲು ಪಾಶ್ಚಿಮಾತ್ಯ ದೇಶಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಕಾಯಿಲೆಯ ಲಕ್ಷಣಗಳು ವರದಿಯಾಗುತ್ತಿವೆ.
14 ವರ್ಷದ ಬಾಲಕಿ ಈ ವಾರ ಮುಂಬೈನ ಖಾಸಗಿ ಆಸ್ಪತ್ರೆಗೆ ಬಂದಿದ್ದಳು. ತೀವ್ರ ಜ್ವರ ಮತ್ತು ಕವಾಸಕಿ ರೋಗಲಕ್ಷಣಗಳನ್ನು ಹೊಂದಿದ್ದಳು. ನಂತರ ಕೊರೊನಾ ಪಾಸಿಟಿವ್ ಬಂದಿದ್ದು, ಬಾಲಕಿಯ ಆರೋಗ್ಯ ಸ್ಥೀತಿ ಗಂಭೀರವಾಗಿದ್ದರಿಂದ ಶುಕ್ರವಾರ ರಾತ್ರಿ ಐಸಿಯುಗೆ ಶಿಫ್ಟ್ ಮಾಡಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕಳೆದ ವಾರ ಬಾಲಕಿಯ ತಂದೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಆಕೆಯೂ ಸೋಂಕು ಹರಡಿದೆ.
Advertisement
Advertisement
ಏಪ್ರಿಲ್ನಿಂದ ಅಮೆರಿಕ, ಇಂಗ್ಲೆಂಡ್, ಸ್ಪೇನ್, ಇಟಲಿ ಮತ್ತು ಚೀನಾಗಳಲ್ಲಿ ಕಾವಸಾಕಿ ಸಿಂಡ್ರೋಮ್ನಂತಹ ರೋಗಲಕ್ಷಣ ಹೊಂದಿರುವ ಕೋವಿಡ್ -19 ಮಕ್ಕಳ ಪ್ರಕರಣಗಳು ವರದಿಯಾಗುತ್ತಿವೆ.
Advertisement
ದಿ ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ನಲ್ಲಿ ಕೋವಿಡ್ -19 ಮತ್ತು ಕವಾಸಕಿಯಂತಹ ರೋಗಲಕ್ಷಣಗಳನ್ನು ಹೊಂದಿರುವ 58 ಮಕ್ಕಳನ್ನು ಅಧ್ಯಯನ ಮಾಡಿದೆ. ಅಧ್ಯಯನದಲ್ಲಿ ಇದನ್ನು “ಪೀಡಿಯಾಟ್ರಿಕ್ ಇನ್ಫ್ಲಾಮೇಟರಿ ಮಲ್ಟಿಸಿಸ್ಟಮ್ ಸಿಂಡ್ರೋಮ್” (Paediatric Inflammatory Multisystem Syndrome) ಎಂದು ಕರೆಯಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ‘ಮಲ್ಟಿಸಿಸ್ಟಮ್ ಇನ್ಫ್ಲಾಮೇಟರಿ ಸಿಂಡ್ರೋಮ್’ (Multisystem Inflammatory Syndrome) ಎಂದು ಹೆಸರಿಸಿದೆ.
Advertisement
ಕವಾಸಕಿ ಕಾಯಿಲೆ ಹೇಗೆ ಬರುತ್ತೆ ಎಂಬುದರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಆದರೆ ಈ ಕವಾಸಕಿ ಸಿಂಡ್ರೋಮ್ ಮುಖ್ಯವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡು ಬರುತ್ತದೆ. ಮಕ್ಕಳಲ್ಲಿ ಈ ಕಾಯಿಲೆ ಕಂಡು ಬಂದರೆ ಜ್ವರ ಮತ್ತು ರಕ್ತನಾಳಗಳಲ್ಲಿ ಉರಿಯೂತ ಉಂಟಾಗುತ್ತದೆ. ಕೆಲವೊಮ್ಮೆ ಈ ಕಾಯಿಲೆಗೆ ಚಿಕಿತ್ಸೆ ನೀಡಿಲ್ಲವಾದರೆ ಕೊರನರಿ ಆರ್ಟರೀಸ್ (ಅಭಿಧಮನಿ ಮತ್ತು ಅಪಧಮನಿಗಳಿಗೆ) ಹಾನಿಯಾಗುವ ಸಾಧ್ಯತೆ ಇದೆ.
ಮಹಾರಾಷ್ಟ್ರದ 14,474 ಕೋವಿಡ್-19 ಪ್ರಕರಣಗಳಲ್ಲಿ 5,103 ಪ್ರಕರಣಗಳು 10 ವರ್ಷದೊಳಗಿನವರು ಮತ್ತು 9,371 ಪ್ರಕರಣಗಳು 11 ರಿಂದ 20 ವರ್ಷದೊಳಗಿನವರು ಎಂದು ವರದಿಯಾಗಿದೆ.
14 ವರ್ಷದ ಬಾಲಕಿಯ ತಂದೆ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿದ್ದರು. ಬಾಲಕಿಯನ್ನು ಬುಧವಾರ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಕವಾಸಕಿ ಸಿಂಡ್ರೋಮ್ ಮಕ್ಕಳ ಮೇಲೆ ಬೇಗ ಪರಿಣಾಮ ಬೀರುತ್ತವೆ. ಆದರೆ ಬಾಲಕಿ ತಕ್ಷಣ ನಮ್ಮ ಬಳಿಗೆ ಬಂದಳು. ಆದ್ದರಿಂದ ನಾವು ಅವಳನ್ನು ಎರಡು ದಿನಗಳವರೆಗೆ ಚಿಕಿತ್ಸೆಗೆ ಒಳಪಡಿಸಿದ್ದೆವು. ಆದರೆ ಆಕೆಯ ಸ್ಥಿತಿ ಮತ್ತೆ ಹದಗೆಟ್ಟಿದೆ ಎಂದು ಆಸ್ಪತ್ರೆಯ ಮಕ್ಕಳ ಸಾಂಕ್ರಾಮಿಕ ರೋಗಗಳ ತಜ್ಞ ಡಾ.ತನು ಸಿಂಘಾಲ್ ಹೇಳಿದ್ದಾರೆ.
ಕವಾಸಕಿ ರೋಗವು ಸಾಮಾನ್ಯವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೊರೊನಾ ಸೋಂಕಿರುವ 10-14 ವರ್ಷ ವಯಸ್ಸಿನ ಮಕ್ಕಳಲ್ಲೂ ಅದರ ರೋಗಲಕ್ಷಣಗಳು ಕಂಡು ಬರುತ್ತಿದೆ. ಇದು ಕವಾಸಕಿ ಕಾಯಿಲೆಯಲ್ಲ, ಆದರೆ ಅದರಂತೆಯೇ ಇದೆ. ಕವಾಸಕಿ ರೋಗಿಗಳಲ್ಲಿ ಸಾಮಾನ್ಯವಾಗಿ ನಾಲಿಗೆ ಮತ್ತು ಕಣ್ಣುಗಳು ಕೆಂಪಾಗುತ್ತವೆ. ಕೊರೊನಾ ದೃಢಪಟ್ಟ ಎರಡು-ಮೂರು ವಾರಗಳ ನಂತರ ಮಕ್ಕಳಲ್ಲಿ ಹೆಚ್ಚಾಗಿ ಕವಾಸಕಿಯಂತಹ ರೋಗಲಕ್ಷಣ ಕಂಡು ಬರುತ್ತಿದೆ ಎಂದು ಡಾ.ಸಿಂಘಾಲ್ ಹೇಳಿದರು.
ಮುಂಬೈಯಲ್ಲಿ ಇದೇ ರೀತಿಯ ಎರಡು ಪ್ರಕರಣಗಳನ್ನು ನಾನು ನೋಡಿದ್ದೇನೆ. ಒಂದು ಎಸ್ಆರ್ಸಿಸಿ ಆಸ್ಪತ್ರೆಯಲ್ಲಿ ಮತ್ತು ಇನ್ನೊಂದು ಜೋಗೇಶ್ವರಿಯ ಖಾಸಗಿ ಆಸ್ಪತ್ರೆಯಲ್ಲಿ. ಇಬ್ಬರಿಗೂ ಉರಿಯೂತ, ಜ್ವರ ಇತ್ತು. ಕೊರೊನಾ ವರದಿಯಲ್ಲಿ ನೆಗೆಟಿವ್ ಇದೆ. ಆದರೂ ಈ ರೀತಿ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ ಎಂದು ಡಾ. ಸಿಂಘಾಲ್ ತಿಳಿಸಿದ್ದಾರೆ.
ಕವಾಸಕಿಯ ರೋಗಲಕ್ಷಣಗಳೊಂದಿಗೆ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಲು ಪ್ರಾರಂಭಿಸಲಾಗಿದೆ. ಕವಾಸಕಿಯಂತೆಯೇ ರೋಗಲಕ್ಷಣ ತೋರಿಸುತ್ತಿರುವ ನಾಲ್ಕು ಪ್ರಕರಣಗಳನ್ನು ನೋಡಿದ್ದೇನೆ. ಆದರೆ ಅವರಿಗೆ ಕೋವಿಡ್ -19 ನೆಗೆಟಿವ್ ಬಂದಿದೆ ಎಂದು ಡಾ. ಬಿಸ್ವಾ ಆರ್ ಪಾಂಡಾ ತಿಳಿಸಿದರು.
ಕೊರೊನಾ ಸೋಂಕು ಪತ್ತೆಯಾದ ಮೂರು ವಾರಗಳ ನಂತರ ಕವಾಸಕಿ ಕಾಯಿಲೆ ಲಕ್ಷಣ ಕಂಡು ಬರುತ್ತಿದೆ. ಕವಾಸಕಿ ಕಾಯಿಲೆಗೆ ಕೊರೊನಾವೈರಸ್ ನೇರವಾಗಿ ಕಾರಣವಾಗಿದೆಯೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಕೆಇಎಂ ಆಸ್ಪತ್ರೆಯು ಇಂತಹ ಪ್ರಕರಣಗಳನ್ನು ಇನ್ನೂ ಗಮನಿಸಿಲ್ಲ ಎಂದು ಕೆಇಎಂ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಮುಕೇಶ್ ಶರ್ಮಾ ಹೇಳಿದ್ದಾರೆ.