– ತಹಶೀಲ್ದಾರ್ ಗೆ ದೂರು, ವೈದ್ಯಾಧಿಕಾರಿಗಳ ವಿಚಾರಣೆ
ಚಾಮರಾಜನಗರ: ರೈತರೊಬ್ಬರು ರೇಷ್ಮೆ ಮಾರುಕಟ್ಟೆಯಲ್ಲಿ ಕೆಮ್ಮಿದ್ದು, ಪ್ರಶ್ನಿಸಿದ್ದಕ್ಕೆ ಕೊರೊನಾ ಇದೆ ಎಂದು ತಮಾಷೆ ಮಾಡಿದ್ದಾರೆ. ಇಷ್ಟಕ್ಕೆ ಮಾರುಕಟ್ಟೆಯಲ್ಲಿ ರಾದ್ಧಾಂತ ನಡೆದಿದೆ.
ಜಿಲ್ಲೆಯ ಕೊಳ್ಳೇಗಾಲದ ಮುಡಿಗುಂಡ ಬಳಿ ಘಟನೆ ನಡೆದಿದ್ದು, ಪದೇ ಪದೇ ಕೆಮ್ಮಿದ್ದರಿಂದ ಆತಂಕಗೊಂಡು ಅಕ್ಕಪಕ್ಕದವರು ವಿಚಾರಿಸಿದ್ದಾರೆ. ಈ ವೇಳೆ ತನಗೆ ಕೊರೊನಾ ಇದೆ ಎಂದು ರೈತ ತಮಾಷೆಗೆ ಹೇಳಿದ್ದಾರೆ. ಇದರಿಂದ ಬೆಚ್ಚಿಬಿದ್ದ ರೇಷ್ಮೆಗೂಡಿನ ಮಾರುಕಟ್ಟೆ ವ್ಯಾಪಾರಿಗಳು, ತೀವ್ರ ಆತಂಕಗೊಂಡಿದ್ದು, ತಕ್ಷಣವೇ ರೇಷ್ಮೆ ರೀಲರ್ಸ್ ಗಳು ತಹಸೀಲ್ದಾರ್ಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಕೊಳ್ಳೇಗಾಲ ತಹಶೀಲ್ದಾರ್ ಕುನಾಲ್ ಅವರು ದೌಡಾಯಿಸಿದ್ದು, ರೈತಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದ್ದಾರೆ. ಅಲ್ಲದೆ ಕನಕಪುರದ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ರೈತನ ಬಗ್ಗೆ ವಿಚಾರಿಸಿದ್ದಾರೆ.
Advertisement
Advertisement
ಕನಕಪುರದ ಅಚ್ಚಲು ಗ್ರಾಮದಿಂದ ರೈತ ರೇಷ್ಮೆಗೂಡು ತಂದಿದ್ದ. ಕೆಮ್ಮಿದ್ದನ್ನು ಪ್ರಶ್ನಿಸಿದ್ದಕ್ಕೆ ತಮಾಷೆಗಾಗಿ ಕೊರೊನಾ ಇದೆ ಎಂದು ಹೇಳಿದೆ ಎಂದು ರೈತ ತಿಳಿಸಿದ್ದಾರೆ. ನಂತರ ರೈತನನ್ನು ಅವರ ಗ್ರಾಮಕ್ಕೆ ಮರಳಿ ಕಳುಹಿಸಲಾಗಿದೆ. ಆದರೆ ಅವರು ತಂದಿದ್ದ ರೇಷ್ಮೆ ಗೂಡನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗಿದೆ.