– ನಾಳೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಬಂದ್
ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಗಣರಾಜ್ಯೋತ್ಸವ ದಿನದಂದು ದೊಡ್ಡ ಎಚ್ಚರಿಕೆ ನೀಡಿದ್ದ ಅನ್ನದಾತರ ಪಡೆ, ಈಗ ಪ್ರತಿಭಟನಾ ಸ್ಥಳದಲ್ಲಿ ಮೂಲಸೌಕರ್ಯಗಳನ್ನು ಕಟ್ ಮಾಡಿದ್ದಕ್ಕೆ ಸಿಡಿದಿದ್ದಿದ್ದಾರೆ. ಈ ಮೂಲಕ ಮೋದಿ ಸರ್ಕಾರಕ್ಕೆ ಮತ್ತೊಮ್ಮೆ ಬಿಸಿ ಮುಟ್ಟಿಸಲು ಸಿದ್ಧವಾಗಿದ್ದಾರೆ.
Advertisement
ಜನವರಿ 26ರ ಗಣದಿನದಂದು ರಾಷ್ಟ್ರ ರಾಜಧಾನಿ ದೆಹಲಿ ಕಂಡು ಕೇಳರಿಯದ ಪ್ರತಿಭಟನೆಗೆ ಸಾಕ್ಷಿ ಆಗಿತ್ತು. ರೈತರ ಟ್ರ್ಯಾಕ್ಟರ್ ರ್ಯಾಲಿ ಹಿಂಸಾತ್ಮಕ ಪ್ರತಿಭಟನೆಗೆ ತಿರುಗಿ ದೆಹಲಿ ಕೆಂಪು ಕೋಟೆಗೆ ರೈತರ ಗುಂಪೊಂದು ಮುತ್ತಿಗೆ ಹಾಕಿ ಕಿಸಾನ್ ಧ್ವಜ ಹಾರಿಸ್ತು. ಈ ಘಟನೆ ದೆಹಲಿಯಲ್ಲಿ ಇನ್ನಿಲ್ಲದ ಕಿಚ್ಚು ಹೊತ್ತಿಕೊಳ್ಳಲು ಕಾರಣವಾಯ್ತು. ದೆಹಲಿಯಲ್ಲಿ ದೊಂಬಿ, ಗಲಾಟೆ ಗದ್ದಲದ ಬಳಿಕ ಮೋದಿ ಸರ್ಕಾರ ರೈತರ ಪ್ರತಿಭಟನಾ ಸ್ಥಳಗಳಲ್ಲಿ ಇನ್ನಿಲ್ಲದ ರೀತಿಯಲ್ಲಿ ಭದ್ರತೆಯನ್ನು ಹೆಚ್ಚಳ ಮಾಡ್ತು. ರೈತರ ಹೋರಾಟವನ್ನು ಹತ್ತಿಕ್ಕಲು ಸಿಂಘು, ಟಿಕ್ರಿ, ಗಾಜಿಪುರ ಗಡಿ ಭಾಗದಲ್ಲಿ ಮೊಳೆ, ಮುಳ್ಳಿನ ಬೇಲಿ ನಿರ್ಮಿಸಿತ್ತು 7 ಸುತ್ತಿನ ಪೊಲೀಸ್ ಭದ್ರಕೋಟೆ ನಿಯೋಜಿಸಿತ್ತು.
Advertisement
Advertisement
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಯುಪಿ ಗಡಿ ಗಾಜೀಪುರ್ದಲ್ಲಿ ಮೂಲ ಸೌಕರ್ಯಗಳನ್ನು ಬಂದ್ ಮಾಡಿದ್ರು. ವಿದ್ಯುತ್, ನೀರು ಮತ್ತು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ್ರು. ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದರು. ಕೇಂದ್ರ ಮತ್ತು ಯುಪಿ ರಾಜ್ಯ ಸರ್ಕಾರದ ನಡೆಗೆ ಈಗ ಅನ್ನದಾತರು ಗರಂ ಆಗಿದ್ದಾರೆ. ಸರ್ಕಾರದ ನಿಲುವು ಖಂಡಿಸಿ ಮತ್ತೊಂದು ಬೃಹತ್ ಹೋರಾಟ ನಡೆಸಲು ಸಿದ್ಧವಾಗಿದ್ದಾರೆ.
Advertisement
ನಾಳೆ ದೇಶಾದ್ಯಂತ ಮಧ್ಯಾಹ್ನ 12ರಿಂದ ಮಧ್ಯಾಹ್ನ 3 ಗಂಟೆವರೆಗೆ ರಾಷ್ಟ್ರೀಯ ಹೆದ್ದಾರಿಗಳನ್ನು ಮಣ್ಣಿನ ಮಕ್ಕಳು ಬಂದ್ ಮಾಡಲಿದ್ದಾರೆ. ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ನಗರದ ಹೊರ ಪ್ರದೇಶಗಳಲ್ಲಿ ಈ ಹೋರಾಟ ನಡೆಸಲು ಭಾರತೀಯ ಕಿಸಾನ್ ಯೂನಿಯನ್ ನಿರ್ಧರಿಸಿದೆ. ಅನ್ನದಾತರು ರಾಷ್ಟ್ರೀಯ ಹೆದ್ದಾರಿ ತಡೆಗೆ ಕರೆ ನೀಡಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿದ್ರು. ಸಭೆಯಲ್ಲಿ ಎನ್ಎಸ್ಜಿ ಅಜಿತ್ ದೋವಲ್, ದೆಹಲಿ ಪೊಲೀಸ್ ಕಮಿಷನರ್ ಎಸ್.ಎಲ್ ಶ್ರೀವಾತ್ಸವ್ ಭಾಗಿಯಾಗಿದ್ರು. ರೈತರ ರಸ್ತೆ ತಡೆ, ಪ್ರತಿಭಟನೆ ಹಾಗೂ ಅದಕ್ಕೆ ಭದ್ರತಾ ನಿಯೋಜನೆ ಕುರಿತು ಚರ್ಚಿಸಲಾಯ್ತು.
ಇಷ್ಟೇ ಅಲ್ಲದೇ ರೈತ ಪ್ರತಿಭಟನೆ ಲಾಭ ಗಳಿಸಲು ಪ್ರಯತ್ನಿಸುತ್ತಿರುವ ಉಗ್ರಗಾಮಿ ಗುಂಪುಗಳನ್ನು ಹತ್ತಿಕ್ಕಲು ಮಾಸ್ಟರ್ ಪ್ಲಾನ್ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಈ ನಡುವೆ ನಿನ್ನೆಯೂ ರೈತ ಪ್ರತಿಭಟನೆಗೆ ಪರ ವಿರೋಧ ಟ್ವೀಟ್ ಸರಣಿ ಮುಂದುವರಿದಿದೆ. ರೈತರು ನಮ್ಮ ದೇಶದ ಅವಿಭಾಜ್ಯ ಅಂಗ. ದೇಶದಲ್ಲಿ ಶಾಂತಿಯನ್ನು ತರಲು ನಾವು ಎಲ್ಲರೂ ಒಟ್ಟಾಗಿ ಮುಂದುವರಿಯಲಿದ್ದೇವೆ ಮತ್ತು ಸೌಹಾರ್ದಯುತ ಪರಿಹಾರವು ಕಂಡುಬರಲಿದೆ ಎಂದು ನನಗೆ ಖಾತ್ರಿಯಿದೆ ಎಂದು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೇಂದ್ರ ಸರ್ಕಾರದ ಇಂಡಿಯಾ ಟುಗೆದರ್ ಹ್ಯಾಶ್ ಟ್ಯಾಗ್ನಲ್ಲಿ ಟ್ವೀಟ್ ಮಾಡಿದ್ರು. ಅಲ್ಲದೇ ಕ್ರಿಕೆಟಿಗ ಇರ್ಫಾನ್ ಪಟಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವದ ದಿನ ಒಂದು ಹಂತದಲ್ಲಿದ್ದ ಪ್ರತಿಭಟನೆ ಈಗ ದಿನ ಕಳೆದಂತೆ ಸಾಕಷ್ಟು ಮಹತ್ವದ ತಿರುವುಗಳನ್ನು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ರೈತರ ಕಿಚ್ಚು ಮತ್ತಷ್ಟು ಕಾವೇರಲಿದೆ.