ಚಾಮರಾಜನಗರ: ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಂತಿರುವ ಮಲ್ಲಯ್ಯನಪುರ ಬಳಿ ಒಂದೇ ಪ್ರದೇಶದಲ್ಲಿ ಏಳು ಬಗೆಯ ಖನಿಜಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಸಂರಕ್ಷಿಸಿ ಇಲ್ಲೊಂದು ಜಿಯೋಲಾಜಿಕಲ್ ಮ್ಯೂಸಿಯಂ ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕ್ಷೇತ್ರ ಪರಿಶೀಲನೆ ನಡೆಸುತ್ತಿದ್ದ ವೇಳೆ ಚಾಮರಾಜನಗರ ಸಮೀಪವೇ ಇರುವ ಮಲ್ಲಯ್ಯನಪುರ ಬಳಿ ಒಂದೇ ಪ್ರದೇಶದಲ್ಲಿ ಏಳು ರೀತಿಯ ಖನಿಜಗಳು ಪತ್ತೆಯಾಗಿರುವುದು ಕಂಡು ಬಂದಿದೆ. ಸರ್ಕಾರಕ್ಕೆ ಸೇರಿದ ಸರ್ವೆ ನಂಬರ್ 124 ರಲ್ಲಿ ಫೆಲ್ಸೈಟ್, ಗ್ರಾನೈಟ್ ಫ್ಯೂಷೈಟ್, ಕ್ವಾರ್ಟ್ ಜೈಟ್, ಡೋಲೆರೈಟ್ ಡೈಕ್, ಸ್ಮೋಕಿ ಕ್ವಾರ್ಟ್ಜ್, ಪೆಗ್ಮಟೈಟ್ ಮತ್ತು ಗ್ರಾನೈಟ್ ಗ್ನೈಸ್ ಎಂಬ ಖನಿಜಗಳು ಪತ್ತೆಯಾಗಿವೆ.
Advertisement
Advertisement
ಒಂದೇ ಪ್ರದೇಶದಲ್ಲಿ ಬೇರೆ ಬೇರೆ ಬಗೆಯ ಖನಿಜಗಳು ಕಂಡು ಬರುವುದು ತೀರಾ ಅಪರೂಪ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಲಕ್ಷ್ಮಮ್ಮ ಹೇಳಿದ್ದಾರೆ. ಹೀಗಾಗಿ ಒಂದೇ ಪ್ರದೇಶದಲ್ಲಿ ವಿವಿಧ ರೀತಿಯ ಖನಿಜಗಳು ಪತ್ತೆಯಾಗಿರುವ ಈ ಪ್ರದೇಶವನ್ನು ಸಂರಕ್ಷಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
Advertisement
ಮೈಸೂರು ವಿಶ್ವವಿದ್ಯಾನಿಲಯದ ಸಹಕಾರದೊಂದಿಗೆ ಇಲ್ಲೊಂದು ಪ್ರಕೃತಿದತ್ತವಾದ ಜಿಯೋಲಾಜಿಕಲ್ ಮ್ಯೂಸಿಯಂ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಪ್ರದೇಶದಲ್ಲಿ ಸ್ವಾಭಾವಿಕ ಭೂಗರ್ಭ ಸಂಗ್ರಹಾಲಯ ಸ್ಥಾಪಿಸಿ, ಜಿಲ್ಲೆಯ ಇತರ ಕಡೆ ದೊರೆಯುವ ಶಿಲಾ ಮಾದರಿ ಹಾಗೂ ಖನಿಜಗಳ ಮಾದರಿಗಳನ್ನು ಇಲ್ಲಿ ಸಂಗ್ರಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Advertisement
ಈ ಪ್ರಾಕೃತಿಕ ಭೂಗರ್ಭದಲ್ಲಿ ಸಂಗ್ರಹಾಲಯ ಸ್ಥಾಪಿಸುವುದರಿಂದ ಭೂಮಿಯ ಶಿಲಾಸ್ತರಗಳ ಉಗಮ ಹಾಗೂ ರಚನೆ ಬಗ್ಗೆ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಸಂಗ್ರಹಾಲಯ ಸ್ಥಾಪನೆಗೆ ಬೇಕಾಗುವ ಅನುಧಾನವನ್ನು ಜಿಲ್ಲಾ ಖನಿಜ ನಿಧಿಯಿಂದ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಚಾಮರಾಜನಗರವನ್ನು ಪ್ರವಾಸಿ ತಾಣವನ್ನಾಗಿ ಸಹ ರೂಪಿಸಲು ನಿರ್ಧರಿಸಲಾಗಿದ್ದು, ಒಂದು ವಿಸ್ತೃತ ಯೋಜನೆ ತಯಾರಿಸಿ ಸಲ್ಲಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.