– 2013 ರಲ್ಲಿ ನಡೆದಿದ್ದ ಕೃತ್ಯ
– ಸಿ ರಿಪೋರ್ಟ್ ಸಲ್ಲಿಕೆಯಾದ ಬಳಿಕ ಅರೆಸ್ಟ್
ಬೆಂಗಳೂರು: ಎಟಿಎಂನಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಅಪರಾಧಿ ಮಧುಕರ್ ರೆಡ್ಡಿಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. 10 ಸಾವಿರ ದಂಡದ ಜೊತೆಗೆ ಹಲ್ಲೆಗೊಳಗಾಗಿದ್ದ ಜ್ಯೋತಿ ಉದಯ್ಗೆ ಪರಿಹಾರ ನೀಡುವಂತೆ ಆದೇಶ ನೀಡಿದೆ.
ಬೆಂಗಳೂರಿನ ಕಾರ್ಪೊರೇಷನ್ ವೃತ್ತದ ಎಟಿಎಂ ಕೇಂದ್ರದಲ್ಲಿ ಮಹಿಳಾ ಬ್ಯಾಂಕ್ ಉದ್ಯೋಗಿ ಜ್ಯೋತಿ ಅವರ ಮೇಲೆ ಮಧುಕರ್ ರೆಡ್ಡಿ ಭೀಕರ ಹಲ್ಲೆ ನಡೆಸಿದ ಆರೋಪ ಹೊತ್ತಿದ್ದ. ಸೋಮವಾರ 65ನೇ ಸೆಷನ್ಸ್ ನ್ಯಾಯಾಲಯ ಮಧುಕರ ರೆಡ್ಡಿ ದೋಷಿ ಎಂದು ಹೇಳಿ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
Advertisement
ಈ ಪ್ರಕರಣ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾ. ರಾಜೇಶ್ವರ ಅವರು, ಆರೋಪಿಯ ವಿರುದ್ಧ ತನಿಖಾಧಿಕಾರಿಗಳು ಸಲ್ಲಿಸಿದ್ದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ದೋಷಿ ಎಂದು ತೀರ್ಪು ನೀಡಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಎಂ.ವಿ.ತ್ಯಾಗರಾಜ್ ವಾದ ಮಂಡಿಸಿದ್ದರು.
Advertisement
Advertisement
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎಸ್ಜೆ ಪಾರ್ಕ್ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಶೋಧ ಕಾರ್ಯ ನಡೆಸಿದ್ದರು.
Advertisement
4 ಲಕ್ಷ ರೂ. ಖರ್ಚು ಮಾಡಿ ಪ್ರಯತ್ನ ನಡೆಸಿದರೂ ಆರೋಪಿಯ ಹೆಸರು, ಗುರುತು ಯಾವುದೂ ಪತ್ತೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಈ ಹಿಂದೆ ‘ಸಿ’ ರಿಪೋರ್ಟ್ ಸಲ್ಲಿಸಿದ್ದರು. ಆರೋಪಿ ಪತ್ತೆ ಹಚ್ಚುವ ಹಠಕ್ಕೆ ಬಿದ್ದಿದ್ದ ಪೊಲೀಸ್ ಇಲಾಖೆಯು ಸುಳಿವು ನೀಡಿದವರಿಗೆ 12 ಲಕ್ಷ ರು. ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು.
ಆಂಧ್ರದ ಮದನಪಲ್ಲಿ ಠಾಣೆ ಪೊಲೀಸರು 2017ರ ಫೆಬ್ರವರಿ ಕೊನೆ ವಾರದಲ್ಲಿ ಮಧುಕರ್ ರೆಡ್ಡಿಯನ್ನು ಕೊಲೆ ಪ್ರಕರಣವೊಂದರಲ್ಲಿ ಬಂಧಿಸಿದ್ದರು. ಆಂಧ್ರ ಮತ್ತು ತೆಲಂಗಾಣದಲ್ಲಿ ನಡೆದ ಮೂರು ಕೊಲೆ ಮತ್ತು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಧುಕರ್ ಆಗಾಗ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದ. ಇದನ್ನೂ ಓದಿ: ಎಟಿಂ ಹಲ್ಲೆಕೋರ ಮಧುಕರ್ ರೆಡ್ಡಿಗೆ ಮೂರು ರಾಜ್ಯಗಳ ಪೈಪೋಟಿ
ಹೈದರಾಬಾದ್, ಕಡಪ, ಅನಂತಪುರ, ಕೇರಳ ಹೀಗೆ ಐದಾರು ತಿಂಗಳಿಗೆ ಒಮ್ಮೆ ಸ್ಥಾನ ಬದಲಿಸುತ್ತಿದ್ದ. ಅಂತಿಮವಾಗಿ ಮದನಪಲ್ಲಿ ಪೊಲೀಸರ ಕೈಗೆ ಸೆರೆಯಾಗಿದ್ದ. ಸಿಸಿಟಿವಿ ಫೋಟೋ ಹೋಲಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರೆಡ್ಡಿಯನ್ನು ರಾಜ್ಯದ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆಸಿದ್ದು ನಾನೇ ಎಂದು ಒಪ್ಪಿಕೊಂಡಿದ್ದ. ವಿಚಾರಣೆಯ ಅಗತ್ಯವಿಲ್ಲ. ನನ್ನ ಪರವಾಗಿ ಯಾವುದೇ ವಕೀಲರು ವಾದ ಮಂಡಿಸುವುದು ಬೇಡ. ನನಗೆ ಹೆಂಡತಿ ಮಕ್ಕಳಿದ್ದು, ಆದಷ್ಟುಬೇಗ ವಾಪಸ್ ಹೋಗಬೇಕು. ನನ್ನ ತಪ್ಪಿಗೆ ಶಿಕ್ಷೆ ನೀಡಿ ಎಂದು ತನಿಖಾಧಿಗಳಲ್ಲಿ ಮನವಿ ಮಾಡಿದ್ದ.
ಏನಿದು ಪ್ರಕರಣ?
ಮಗಳ ಜನ್ಮ ದಿನಾಚರಣೆಗಾಗಿ ಹಣ ತೆಗೆದು ಕೊಳ್ಳಲು ಜ್ಯೋತಿ ಉದಯ್ 2013ರ ನವೆಂಬರ್ 19ರ ಬೆಳಗ್ಗೆ 7ರ ಸುಮಾರಿಗೆ ಕಾರ್ಪೊರೇಷನ್ ಸರ್ಕಲ್ನಲ್ಲಿರುವ ಬ್ಯಾಂಕ್ ಎಟಿಎಂಗೆ ಬಂದಿದ್ದರು. ಈ ವೇಳೆ ಒಳ ನುಗ್ಗಿದ್ದ ಮಧುಕರ್ ರೆಡ್ಡಿ ಜ್ಯೋತಿ ಉದಯ್ ಮೇಲೆ ಹಣ ನೀಡುವಂತೆ ಬೆದರಿಸಿದ್ದ. ಇದಕ್ಕೆ ನಿರಾಕರಿಸಿದಾಗ ಭೀಕರವಾಗಿ ಮಚ್ಚಿನಿಂದ ಹಲ್ಲೆ ನಡೆಸಿ, ಪರಾರಿಯಾಗಿದ್ದ. ಈ ದೃಶ್ಯಗಳು ಎಟಿಎಂನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.