– 4 ಜನ ಸಾವು, 3 ಜನ ನಾಪತ್ತೆ
– 200 ಮನೆಗಳು ಸಂಪೂರ್ಣ ಹಾನಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹದ ಮಟ್ಟ ಕಡಿಮೆ ಆಗಿದ್ದು, ಪರಿಹಾರ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.
Advertisement
ಈ ಕುರಿತು ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ 81 ಗ್ರಾಮಗಳು ಪ್ರವಾಹದಿಂದ ಭಾದಿತವಾಗಿವೆ. 9,673 ಜನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. 113 ಕಾಳಜಿ ಕೇಂದ್ರ ತೆರೆಯಲಾಗಿದೆ. 12 ಸಾವಿರಕ್ಕೂ ಹೆಚ್ಚು ಜನ ಪ್ರವಾಹದಿಂದ ಭಾದಿತರಾದವರಾಗಿದ್ದು, 200 ಮನೆಗಳು ಸಂಪೂರ್ಣ ಹಾನಿಯಾಗಿವೆ. ಈ ವರೆಗೆ ಪ್ರವಾಹದಿಂದ 4 ಜನ ಸಾವನ್ನಪ್ಪಿದ್ದು, 3 ಜನ ಕಾಣೆಯಾಗಿದ್ದಾರೆ ಎಂದು ತಿಳಿಸಿದರು.
Advertisement
Advertisement
ಸಚಿವ ಹೆಬ್ಬಾರ್ ಭೇಟಿ
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಯಲ್ಲಾಪುರ ಹಾಗೂ ಅಂಕೋಲ ಭಾಗದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರವಾಹ ಪೀಡಿತ ಪ್ರದೇಶವಾದ ಮಂಜುಗುಣಿ, ಹಿಚ್ಕಡ್, ಶಿರೂರಿಗೆ ಭೇಟಿ ನೀಡಿ ನಂತರ ಇಲ್ಲಿನ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
Advertisement
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವಾಹದಲ್ಲಿ ಮೃತರಾದವರಿಗೆ ತಲಾ ಐದು ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಒಬ್ಬರಿಗೆ ಮಾತ್ರ ಪರಿಹಾರ ನೀಡಬೇಕಿದೆ. ಶೀಘ್ರದಲ್ಲಿ ಅದನ್ನು ನೀಡಲಾಗುತ್ತದೆ. ಮಳೆ ಇರುವುದರಿಂದ ಮನೆ, ಬೆಳೆ ಪರಿಹಾರದ ಸರ್ವೇ ಮಾಡಲು ತೊಡಕಾಗಿದೆ. ಶೀಘ್ರದಲ್ಲಿ ಸರ್ವೇ ಮಾಡಿ ಮನೆ ಹಾನಿ ಹಾಗೂ ಬೆಳೆ ಹಾನಿ ಗೆ ಪರಿಹಾರ ನೀಡಲಾಗುತ್ತದೆ. ನಾಳೆ ಜಿಲ್ಲೆಗೆ ಸರ್ಕಾರದ ವಿಶೇಷ ಅಧಿಕಾರಿಗಳ ತಂಡ ಬರಲಿದ್ದು, ಪರಿಶೀಲನೆ ಮಾಡುತ್ತಾರೆ ಎಂದರು.