– ಶುಭಗಳಿಗೆಯಲ್ಲಿ ಬನ್ನಿ ಎಂದು ಜ್ಯೋತಿಷಿಗಳ ಸಲಹೆ
ಬೆಂಗಳೂರು: ನಾಲ್ಕು ವರ್ಷಗಳ ಜೈಲು ವಾಸ 10 ದಿನಗಳ ಆಸ್ಪತ್ರೆ ವಾಸದ ಬಳಿಕ ಶಶಿಕಲಾ ಇಂದು ಡಿಸ್ಚಾರ್ಜ್ ಗೆ ಸಿದ್ಧರಾಗಿದ್ದಾರೆ. ಇದೇ ತಿಂಗಳ 27ಕ್ಕೆ ನಾಲ್ಕು ವರ್ಷದ ಶಿಕ್ಷೆ ಪ್ರಮಾಣ ಪೂರ್ಣಗೊಳಿಸಿದ್ದ ಶಶಿಕಲಾ, ಕೋವಿಡ್ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದರು. ಇದೀಗ 10 ದಿನಗಳ ಚಿಕಿತ್ಸಾವಧಿ ಮುಗಿದಿದ್ದು ಆಸ್ಪತ್ರೆಯಿಂದ ಮನೆಗೆ ತೆರಳಲು ಸಿದ್ಧರಾಗಿದ್ದಾರೆ.
Advertisement
1996ರಲ್ಲಿ ಸುಬ್ರಮಣಿಯನ್ ಸ್ವಾಮಿ, ಜಯಲಲಿತಾ ಸೇರಿದಂತೆ ಆಪ್ತರಾದ ಶಶಿಕಲಾ, ಇಳವರಸಿ ಹಾಗೂ ಸುಧಾಕರ್ ಮೇಲೆ ಆಕ್ರಮ ಆಸ್ತಿ ಗಳಿಕೆ ಕೇಸ್ ಹಾಕಿದ್ದರು. ಇದಕ್ಕಾಗಿ ಬೆಂಗಳೂರಿನಲ್ಲಿ ವಿಶೇಷ ಕೋರ್ಟ್ ಸ್ಥಾಪಿಸಲಾಗಿತ್ತು. 1991 ರಿಂದ 96 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ 66 ಕೋಟಿಯಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಅನ್ನೋದು ಸಾಬೀತಾಗಿ, ನಾಲ್ವರಿಗೂ 10 ಕೋಟಿ ದಂಡ ಮತ್ತು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ವಿಶೇಷ ಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಜಯಲಲಿತಾ ಪ್ರಶ್ನೆ ಮಾಡಿದ್ದರು. ಕರ್ನಾಟಕ ಹೈ ಕೋರ್ಟ್ ನಲ್ಲಿ ಬಗೆ ಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ನಾಲ್ವರನ್ನ ನಿರ್ದೋಷಿಗಳು ಎಂದು ಕರ್ನಾಟಕ ಹೈ ಕೋರ್ಟ್ ತೀರ್ಪು ನೀಡಿತ್ತು.
Advertisement
Advertisement
ಈ ತೀರ್ಪನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು. ಹೈ ಕೋರ್ಟ್ ತೀರ್ಪನ್ನು ರದ್ದುಗೊಳಿಸಿ, ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಲಾಗಿತ್ತು. 2016ರಲ್ಲಿ ಜಯಲಲಿತಾ ಮರಣ ಹೊಂದಿದ್ರಿಂದ ಉಳಿದ ಮೂವರು ಪರಪ್ಪನ ಅಗ್ರಹಾರ ಜೈಲು ಸೇರಬೇಕಾಯ್ತು. ಇದೀಗ ಶಶಿಕಲಾ ಮತ್ತು ಇಳವರಿಸಿ 10 ಕೋಟಿ ದಂಡ ಪಾವತಿಸಿದ್ದಾರೆ. ಸುಧಾಕರ್ ಇನ್ನು ಪಾವತಿಸಿಲ್ಲ.
Advertisement
ಈ ನಡುವೆ ಟಿಟಿವಿ ದಿನಕರನ್ ಎಎಂಎಂಕೆ ಪಕ್ಷ ಸ್ಥಾಪಿಸಿದ್ದು, ಶಶಿಕಲಾರನ್ನ ಮೆರವಣಿಗೆಯ ಮೂಲಕ ತಮಿಳುನಾಡಿಗೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದಾರೆ. ಆದರೆ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರೂ ಸಹ ಬೆಂಗಳೂರಿನಲ್ಲಿಯೇ ಇದ್ದು, ಒಳ್ಳೆ ದಿನಾಂಕ ನೋಡಿ ತಮಿಳುನಾಡಿಗೆ ಕಾಲಿಡೋಕೆ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಜ್ಯೋತಿಷಿಗಳು ಒಳ್ಳೆಯ ದಿನಾಂಕ ನೋಡಿ ತಮಿಳುನಾಡಿಗೆ ಕಾಲಿಡಿ ಅಂತಾ ಹೇಳಿದ್ದಾರೆ ಎನ್ನಲಾಗಿದೆ. ಎರಡು ತಿಂಗಳಲ್ಲಿ ತಮಿಳುನಾಡಿನ ಸಾರ್ವತ್ರಿಕ ಚುನಾವಣೆ ಇದ್ದು, ಶಶಿಕಲಾ ಬಿಡುಗಡೆ ಯಾವ ಮಟ್ಟದಲ್ಲಿ ಪರಿಣಾಮ ಬೀರುತ್ತೆ ಅನ್ನೋದನ್ನ ನೋಡಬೇಕಿದೆ.