ನಟನೆಯ ವ್ಯಾಮೋಹಕ್ಕೆ ಸಿಲುಕಿ ಕೈಯಲ್ಲಿ ಸ್ವಂತ ಕೆಲಸವಿದ್ರೂ ಕಲಾ ಸರಸ್ವತಿಯ ಆರಾಧನೆಗೆ ಬಣ್ಣದ ಲೋಕಕ್ಕೆ ಕಾಲಿಟ್ಟು ಚಿಕ್ಕ ಚಿಕ್ಕ ಪಾತ್ರಗಳಲ್ಲೇ ಖುಷಿಪಡುತ್ತಾ ಇಂದು ಸಾಕಷ್ಟು ಹೆಸರು ಗಳಿಸಿರುವ ನಟ ಗಣೇಶ್ ರಾವ್ ಕೇಸರ್ಕರ್. ತಮ್ಮ 20 ವರ್ಷಗಳ ಕಿರುತೆರೆ, ಹಿರಿತೆರೆ ಜರ್ನಿಯ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದಾರೆ.
* ನಿಮ್ಮ ಹಿನ್ನೆಲೆ ಬಗ್ಗೆ ಹೇಳಿ..
ಮೂಲತಃ ಕೊಳ್ಳೆಗಾಲದವನು. ನಮ್ಮ ತಂದೆ ಮಿಲಿಟರಿ ಅಧಿಕಾರಿ. ನಾನು ಡಿಪ್ಲೋಮ ಇನ್ ಆಟೋಮೊಬೈಲ್ ಎಂಜಿನಿಯರಿಂಗ್ ಮುಗಿಸಿದ್ದೇನೆ. ಹೈಸ್ಕೂಲ್ನಲ್ಲಿದ್ದಾಗ ನಾಟಕವೊಂದಕ್ಕೆ ಬಣ್ಣ ಹಚ್ಚಿದ್ದೆ. ಅದರಲ್ಲಿ ನಾನು ಬಹುಮಾನ ಪಡೆದುಕೊಂಡಿದ್ದೆ. ಅಂದು ಆ ಸಂದರ್ಭ ನನಗೆ ಬಹಳ ಖುಷಿ ಕೊಡ್ತು. ನಾನು ಕಲಾವಿದನಾಗಬೇಕೆಂಬ ಆಸೆ ಮೊಳಕೆಯೊಡೆಯಿತು. ಆದರೆ ಮನೆಯಲ್ಲಿ ಮೊದಲಿನಿಂದಲೂ ಈ ಕ್ಷೇತ್ರದ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. ಆದ್ದರಿಂದ ನಾನು ವಿದ್ಯಾಭ್ಯಾಸದ ನಂತರ ನಟನೆಯಲ್ಲಿ ತೊಡಗಿಕೊಳ್ಳೋಣ ಎಂದು ಓದಿನ ಕಡೆ ಗಮನ ಹರಿಸಿದೆ. ಇಂಜಿನಿಯರಿಂಗ್ ಮುಗಿದ ಬಳಿಕ ಕಲಾವಿದನಾಗಲು ನಿರ್ಧರಿಸಿದೆ.
Advertisement
Advertisement
* ಕಿರುತೆರೆ ನಿಮ್ಮ ಕಲಾ ಬದುಕಿಗೆ ತಂದು ಕೊಟ್ಟ ಶ್ರೇಯಸ್ಸಿನ ಬಗ್ಗೆ ಹೇಳಿ..
ವಿದ್ಯಾಭ್ಯಾಸದ ಬಳಿಕ ಸ್ವಂತ ಕೆಲಸದಲ್ಲಿ ತೊಡಗಿದ ನನಗೆ ಚಿತ್ರರಂಗದ ಪರಿಚಯಸ್ಥರೊಬ್ಬರ ಮೂಲಕ ಕಿರುತೆರೆಯಲ್ಲಿ ನಟಿಸಲು ಅವಕಾಶ ದೊರೆಯಿತು. ನಾನು ಆರಡಿ ಎತ್ತರ ಅಷ್ಟೇ ಪರ್ಸನಾಲಿಟಿ ಇದ್ದಿದ್ದರಿಂದ ‘ಮಂಜುಕರಗಿತು’ ಧಾರಾವಾಹಿಯಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ದೊರೆಯಿತು. ಆ ಪಾತ್ರ ಕ್ಲಿಕ್ ಆಗಿ ಕಿರುತೆರೆಯಲ್ಲಿ ‘ಭಾಗ್ಯಚಕ್ರ’, ‘ಮನ್ವಂತರ’, ‘ಗೋಧೂಳಿ’, ‘ಪುಣ್ಯಕೋಟಿ’ ಹೀಗೆ ಬ್ಯಾಕ್ ಟು ಬ್ಯಾಕ್ ಸೀರಿಯಲ್ ಗಳಲ್ಲಿ ಅಭಿನಯಿಸಿದೆ. ಇದರ ಜೊತೆಗೆ ಪೌರಾಣಿಕ ಧಾರಾವಾಹಿಗಳಲ್ಲಿ ಪಾತ್ರ ಮಾಡಿ ಸೈ ಎನಿಸಿಕೊಂಡೆ. ಕಲಾ ಸರಸ್ವತಿಯ ಆಶೀರ್ವಾದದಿಂದ ಇಂದು ಸುಮಾರು 4000ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ದೊರಕಿದೆ, ಈಗಲೂ ಅವಕಾಶ ಸಿಗುತ್ತಿದೆ. ಇದನ್ನೂ ಓದಿ: ಪರಿಶ್ರಮ ಪ್ರಯತ್ನದ ಜೊತೆ ತಾಳ್ಮೆ ಇರಲಿ: ನಟಿ ದೀಪಾ ಭಾಸ್ಕರ್
Advertisement
Advertisement
* ಬೆಳ್ಳಿತೆರೆಯಲ್ಲಿ ನಿಮ್ಮ ಪಯಣ ಶುರುವಾಗಿದ್ದು ಹೇಗೆ?
ಧಾರಾವಾಹಿಗಳಲ್ಲಿ ಒಂದಾದ ಮೇಲೆ ಒಂದರಂತೆ ನಟಿಸುತ್ತಾ ನನ್ನ ಪಾತ್ರಗಳ ಮೂಲಕ ಚಿತ್ರರಂಗದಿಂದಲೂ ಅವಕಾಶಗಳು ಬರಲು ಆರಂಭವಾಯಿತು. `ಚಾಮುಂಡಿ’ ಚಿತ್ರ ನಾನು ಮೊದಲು ನಟಿಸಿದ ಚಲನಚಿತ್ರ. ಅಲ್ಲಿಂದ ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಸಿನಿಮಾದಲ್ಲಿ ನಟನೆ ಮಾಡುತ್ತಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡೆ. ಸುಮಾರು 200 ಸಿನಿಮಾಗಳಲ್ಲಿ ನಾನು ಪೋಷಕ ಪಾತ್ರಗಳಿಗೆ ಬಣ್ಣಹಚ್ಚಿದ್ದೇನೆ. ಈ ಮಧ್ಯೆ ನಾನು ನಮ್ಮವರು ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದೇನೆ. `ಸಚ್ಚಿ’, `ಡಾನ್’, `ಶಾಸ್ತ್ರಿ’, `ತಂಗಿಗಾಗಿ’, `ನಂದ’, ‘ರಾಕ್ಷಸ’, `ಪಾರ್ಥ’ ಹೀಗೆ ಒಂದಾದ ಮೇಲೆ ಒಂದು ಸಿನಿಮಾಗಳಲ್ಲಿ ನಟಿಸುತ್ತಾ ಹೋದೆ. ಅಂಬರೀಶ್, ವಿಷ್ಣುವರ್ಧನ್, ರವಿಚಂದ್ರನ್, ಜಗ್ಗೇಶ್, ಶಿವಣ್ಣ ದರ್ಶನ್, ಸುದೀಪ್ ಸೇರಿದಂತೆ ಚಂದನವನದ ಎಲ್ಲಾ ಸ್ಟಾರ್ ನಟರು ಹಾಗೂ ಈಗಿನ ನವ ನಟರ ಜೊತೆಯೂ ನಟಿಸಿದ್ದೇನೆ. ಇದನ್ನೂ ಓದಿ: ನನ್ನ ಕಡೆ ಎಸೆದ ಕಲ್ಲುಗಳನ್ನು ಮೆಟ್ಟಿಲು ಮಾಡಿಕೊಂಡು ಬೆಳೆದೆ- ಪಾಪಾ ಪಾಂಡು ಖ್ಯಾತಿಯ ಚಿದಾನಂದ್
* ನಿಮಗೆ ಖ್ಯಾತಿ ತಂದು ಕೊಟ್ಟ ಪಾತ್ರ ಯಾವುದು?
ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರಗಳು ನನಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಿದೆ. ನಾನು 200 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದೇನೆ. ಅದರಲ್ಲಿ ಬಹುತೇಕ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದೇ ಹೆಚ್ಚು. ಖಳನಟನಾಗಿ, ಪೊಲೀಸ್ ಅಧಿಕಾರಿಯಾಗಿ ನಟಿಸಿದ ಪಾತ್ರಗಳು ಸಿನಿಮಾದಲ್ಲಿ ನನಗೆ ಖ್ಯಾತಿಯನ್ನು ತಂದು ಕೊಟ್ಟಿದೆ. ಹೆಚ್ಚಾಗಿ ನನ್ನನ್ನು ಪೊಲೀಸ್ ರೋಲ್ ಮಾಡಲೆಂದೇ ಈಗಲೂ ಕರೆಯುತ್ತಾರೆ ಇದು ನನಗೆ ಒಂದು ರೀತಿಯ ಹೆಮ್ಮೆಯ ವಿಚಾರ ಎನ್ನಿಸುತ್ತೆ. ಇದನ್ನೂ ಓದಿ: ಹಂಡ್ರೆಡ್ ಪರ್ಸೆಂಟ್ ಹ್ಯಾಪಿ ನಾನು- ಖ್ಯಾತ ಕಿರುತೆರೆ ನಟ, ನಿರ್ದೇಶಕ ರವಿಕಿರಣ್
* ನೀವು ಎಂದೂ ಮರೆಯದ ಘಟನೆ ಯಾವುದು?
ಅಣ್ಣಾವ್ರು ಕಾಡಿನಿಂದ ಬಂದ ನಂತರ ಅವರ ನೇತೃತ್ವದಲ್ಲಿ ಚಿತ್ರರಂಗದಲ್ಲಿ ಹೋರಾಟ ನಡೆಯಿತು. ರಾಜ್ಯದಲ್ಲಿ ಕನ್ನಡ ಸಿನಿಮಾ ಬಿಡುಗಡೆಯಾದ ಆರು ವಾರದ ನಂತರ ಪರಭಾಷೆ ಸಿನಿಮಾ ಬಿಡುಗಡೆಯಾಗಬೇಕೆಂಬುದು ಆ ಹೋರಾಟದ ಉದ್ದೇಶ. ಈ ಸಮಯಯದಲ್ಲಿ ಡಾ.ರಾಜ್ಕುಮಾರ್ ಅವರ ಆರೋಗ್ಯ ಅಷ್ಟು ಚೆನ್ನಾಗಿರಲಿಲ್ಲ. ಅವರ ಕೈ ನಡುಗುತ್ತಿತ್ತು. ಆಗ ಅವರ ಪಕ್ಕದಲ್ಲಿ ನಾನಿದ್ದೆ. ಅಣ್ಣಾವ್ರು ನನ್ನ ಕೈ ಮೇಲೆ ಕೈಯಿಟ್ಟು ಸ್ವಲ್ಪ ಹಿಡಿದುಕೋ ಎಂದು ಹೇಳಿದ್ರು. ಅವರ ಕೈ ಸ್ಪರ್ಶ ನನಗೊಂದು ರೋಮಾಂಚನದ ಅನುಭವ ನೀಡಿತು. ಅವರ ಭಾಷಣ ಮುಗಿಯುವವರೆಗೂ ಕೈಹಿಡಿದುಕೊಂಡೇ ಇದ್ದೆ. ಈಗಲೂ ಆ ಕ್ಷಣ ನನಗೆ ತುಂಬಾ ಖುಷಿ ಕೊಡುತ್ತೆ. ಅವರ ಜೊತೆ ನಟಿಸಲು ಆಗದಿದ್ದರೂ ಅವರ ಕೈ ಹಿಡಿದುಕೊಳ್ಳುವ ಭಾಗ್ಯ ನನ್ನದಾಗಿತಲ್ಲ ಎಂಬ ಧನ್ಯತಾ ಭಾವ ನನ್ನಲ್ಲಿದೆ. ಇದನ್ನೂ ಓದಿ:ಸೋಲು-ಗೆಲುವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದೇನೆ, ಯಾವುದೇ ರಿಗ್ರೆಟ್ ಇಲ್ಲ- ನಟ ದಿಲೀಪ್ ರಾಜ್
* ಚಿತ್ರರಂಗದಲ್ಲಿ ಎದುರಿಸಿದ ನೋವಿನ ಸಂಗತಿ
ನಾನು ತುಂಬಾ ಇಷ್ಟಪಟ್ಟು ಈ ಕ್ಷೇತ್ರಕ್ಕೆ ಬಂದಿದ್ದೇನೆ. ಏನೇ ಆದರೂ ಕಲಾವಿದನಾಗೇ ಉಳಿಯಬೇಕು ಎಂದುಕೊಂಡಿದ್ದೇನೆ. ಆದ್ದರಿಂದ ಏನೇ ನೋವಾದರೂ ಸಹಿಸಿಕೊಳ್ಳಲೇಬೇಕು. ಅವಮಾನ, ಅಪಮಾನ ಆದಾಗ ಸಾಕಪ್ಪ ಬಿಟ್ಟು ಹೋಗೋಣ ಅನ್ನಿಸಿದ್ದು ಇದೆ. ಆದರೆ ನಾನು ನಟನೆಯಲ್ಲೇ ಸಾರ್ಥಕತೆ ಕಂಡುಕೊಂಡಿರೋದ್ರಿಂದ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಮುಂದೆ ಸಾಗುತ್ತಿದ್ದೇನೆ.
* ರಾಜಕೀಯ ರಂಗದಲ್ಲೂ ನೀವು ಗುರುತಿಸಿಕೊಂಡಿದ್ದೀರಿ?
ನನಗೆ ಸಾಮಾಜಿಕ, ಸಮಾಜಮುಖಿ ಕೆಲಸದಲ್ಲಿ ಮೊದಲಿನಿಂದಲೂ ಆಸಕ್ತಿ. ಸಮಾಜದಲ್ಲಿ ಒಂದೊಳ್ಳೆ ಸ್ಥಾನದಲ್ಲಿ ಗುರುತಿಸಿಕೊಳ್ಳಬೇಕೆಂಬ ಬಯಕೆ ಇದೆ. ಆ ಮೂಲಕ ಜನರ ಸೇವೆ ಮಾಡಬೇಕು ಎಂದುಕೊಂಡಿದ್ದೇನೆ ಇದೇ ನಿಟ್ಟಿನಲ್ಲಿ ರಾಜಕೀಯ ರಂಗದಲ್ಲಿಯೂ ಸಕ್ರಿಯವಾಗಿದ್ದೇನೆ. ಇದನ್ನೂ ಓದಿ: ನಮ್ಮ ಅನುಭವಕ್ಕೆ ಈಗ ಬೆಲೆಯಿಲ್ಲ: ಹಿರಿಯ ನಟ, ರಂಗಭೂಮಿ ಕಲಾವಿದ ಶಂಕರ್ ಭಟ್
* ಚಿತ್ರರಂಗದಲ್ಲಿ ನಿಮ್ಮ ಮುಂದಿನ ನಡೆ?
ಒಳ್ಳೊಳ್ಳೆ ಪಾತ್ರಗಳಲ್ಲಿ ನಟಿಸುತ್ತಾ ಹೋಗಬೇಕು ಅನ್ನೋದೊಂದೇ ನನ್ನ ಮುಂದಿರುವ ಗುರಿ. ಸಿನಿಮಾ ನಿರ್ದೇಶನ ಮಾಡುವ ಪ್ಲಾನ್ ಕೂಡ ಇದೆ. ಕಥೆ ಕೂಡ ರೆಡಿ ಮಾಡುತ್ತಿದ್ದೇನೆ. ಇದರ ಬೆನ್ನಲ್ಲೇ ಕಂಠೀರವ ಸ್ಟುಡಿಯೋ ಅಧ್ಯಕ್ಷ ಸ್ಥಾನದ ಚುನಾವಣೆಗೆ ಬೇಡಿಕೆ ಇಟ್ಟಿದ್ದೇನೆ. ಸ್ಟುಡಿಯೋ ಅಭಿವೃದ್ಧಿಗೆ ನನ್ನದೇ ಆದ ಕೊಡುಗೆ ನೀಡಬೇಕು ಎಂಬ ಬಹುದೊಡ್ಡ ಕನಸಿದೆ.
* ಪ್ರಸ್ತುತ ನಟಿಸುತ್ತಿರುವ ಸೀರಿಯಲ್ ಮತ್ತು ಸಿನಿಮಾಗಳು ಯಾವ್ಯಾವು.?
ರವಿಬೋಪಣ್ಣ, ಕಿರಿಕ್ ಶಂಕ್ರ, ಯಾರ್ ಮಗ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಕೆಲವು ಚಿತ್ರಗಳು ಬಿಡುಗಡೆಯಾಗಬೇಕಿದೆ. ಇದರ ಜೊತೆ ಚೈತನ್ಯ ನಿರ್ದೇಶನದ ಆಕೃತಿ ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದೇನೆ.