ಆಸ್ಕರ್ ರೇಸ್‍ಗೆ ಎಂಟ್ರಿ ಕೊಟ್ಟ ಗಲ್ಲಿಬಾಯ್!

ಬೆಂಗಳೂರು: ಪದ್ಮಾವತ್ ಖ್ಯಾತಿಯ ನಟ ರಣ್‌ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಚಿತ್ರ ಗಲ್ಲಿ ಬಾಯ್. ಇದೇ ಫೆಬ್ರವರಿ ಹದಿನಾಲಕ್ಕರಂದು ಭಾರತದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ತಳಮಟ್ಟದಿಂದ ಮೇಲೆದ್ದು ಬಂದು ರಾಪ್ ಸಿಂಗಿಂಗ್‍ನಲ್ಲಿ ಸ್ಟಾರ್ ಆದ ಹುಡುಗನೊಬ್ಬನ ಮನಮಿಡಿಯುವ ಕಥೆಯೊಂದಿಗೆ ದೊಡ್ಡ ಮಟ್ಟದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ಧಾರಾವಿಯ ಸ್ಲಂ ಪ್ರದೇಶದಿಂದ ಹುಟ್ಟಿಕೊಂಡಿದ್ದ ಈ ಕಥೆಯ ಆಳ, ವಿಸ್ತಾರ ಕಂಡು ಕೇವಲ ಭಾರತೀಯ ಸಿನಿಮಾ ಪ್ರೇಮಿಗಳು ಮಾತ್ರವಲ್ಲದೇ ವಿಶ್ವಾದ್ಯಂತ ಸಿನಿಮಾಸಕ್ತರು ಬೆರಗಾಗಿದ್ದರು. ಇಂಥಾ ಅಪರೂಪದ ಕಥೆಯ ಚಿತ್ರಕ್ಕೀಗ ಸರಿಯಾದ ಸಮ್ಮಾನ ಸಿಗುವ ಕ್ಷಣಗಳು ಹತ್ತಿರಾಗಿವೆ. ಈ ಚಿತ್ರ 2020ರ ಸಾಲಿನ ಆಸ್ಕರ್ ಪ್ರಶಸ್ತಿ ರೇಸಿಗೆ ಎಂಟ್ರಿ ಕೊಟ್ಟಿದೆ.

ಈಗಾಗಲೇ ಭಾರತದಿಂದ ಆಸ್ಕರ್ ಪ್ರಶಸ್ತಿಗಾಗಿ ಕಳುಹಿಸಲಾಗೋ ಚಿತ್ರಗಳ ಪಟ್ಟಿ ಅಂತಿಮ ಹಂತ ತಲುಪಿಕೊಂಡಿದೆ. ಭಾರತದ ಬೇರೆ ಬೇರೆ ಭಾಷೆಗಳ ಹಲವಾರು ಚಿತ್ರಗಳು ಈ ಲಿಸ್ಟಿಗೆ ಸೇರಿಕೊಳ್ಳುವ ಸ್ಪರ್ಧೆಯಲ್ಲಿದ್ದವು. ಅದರಲ್ಲಿಯೂ ಹಿಂದಿಯಲ್ಲಿ ಮಾತ್ರ ಈ ಸಾಲಿನಲ್ಲಿ ಹೆಚ್ಚು ಚಿತ್ರಗಳಿದ್ದವು. ಅದರಲ್ಲಿ ಕಡೆಗೂ ಗಲ್ಲಿ ಬಾಯ್, ಉರಿ, ಬದ್ಲಾ, ಆರ್ಟಿಕಲ್ 15 ಮುಂತಾದ ಚಿತ್ರಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಈ ಎಲ್ಲ ಚಿತ್ರಗಳೂ ಕೂಡಾ ವಿಭಿನ್ನ ಕಥಾನಕದ ಮೂಲಕ ವಿಶ್ವಾದ್ಯಂತ ಗಮನ ಸೆಳೆದಂಥವುಗಳೇ. ಆದರೆ ಗಲ್ಲಿಬಾಯ್ ಚಿತ್ರದ ಕಥೆ, ಅದರ ಪ್ರಧಾನ ಪಾತ್ರಕ್ಕಾಗಿ ರಣ್‍ವೀರ್ ಸಿಂಗ್ ತಯಾರಾಗಿದ್ದ ರೀತಿ ಮಾತ್ರ ಸಲೀಸಾಗಿ ಯಾರೂ ಬೀಟ್ ಮಾಡಲು ಸಾಧ್ಯವಾಗದಿರುವಂಥಾದ್ದು.

ಧಾರಾವಿಯ ಸ್ಲಂ ಪ್ರದೇಶವೊಂದರಿಂದ ಹೆತ್ತವರ ಆಸೆ ಆಕಾಂಕ್ಷೆಗಳನ್ನೆಲ್ಲ ಮೀರಿಕೊಂಡು ರಾಪ್ ಲೋಕದ ಕನಸು ಕಟ್ಟಿಕೊಂಡು ಹೊರಡೋ ಹುಡುಗನೊಬ್ಬನ ಕಥೆ ಗಲ್ಲಿ ಬಾಯ್ ಚಿತ್ರದ್ದು. ಇಲ್ಲಿ ರಣ್‍ವೀರ್ ಸಿಂಗ್ ಗಲ್ಲಿ ಬಾಯ್ ಆಗಿ ನಟಿಸಿದರೆ, ಆಲಿಯಾ ಭಟ್ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಎಲ್ಲರನ್ನೂ ಕಾಡುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜೋಯಲ್ ಅಖ್ತರ್ ಅದೆಷ್ಟೋ ವರ್ಷಗಳ ಹಿಂದೆ ಈ ಕಥಾ ಎಳೆಯನ್ನು ಎದೆಗಿಳಿಸಿಕೊಂಡು, ಧಾರಾವಿ ಸ್ಲಂ ಪ್ರದೇಶದ ಪ್ರತಿಭಾವಂತರ ಯಶೋಗಾಥೆಗಳನ್ನು ಕಾಡಿಸಿಕೊಂಡು ಈ ಕಥೆ ಹೊಸೆದಿದ್ದಾರೆ. ಅದನ್ನು ಸಮರ್ಥವಾಗಿಯೇ ನಿರ್ದೇಶನ ಮಾಡಿದ್ದಾರೆ. ರಿತೇಶ್ ನಿಧ್ವಾನಿ ಮತ್ತು ಫರ್ಹಾ ಅಖ್ತರ್ ಗಲ್ಲಿ ಬಾಯ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಈ ಚಿತ್ರದಲ್ಲಿ ರಣ್‍ವೀರ್ ಸಿಂಗ್ ಗಲ್ಲಿ ಬಾಯ್ ಅವತಾರದಲ್ಲಿ ನಟಿಸಿರೋ ಬಗೆ, ಅದಕ್ಕಾಗಿ ಅವರು ಮಾಡಿಕೊಂಡಿರೋ ದೈಹಿಕ ರೂಪಾಂತರಗಳನ್ನು ಕಂಡು ಭಾರತೀಯ ಚಿತ್ರಪ್ರೇಮಿಗಳೆಲ್ಲ ನಿಬ್ಬೆರಗಾಗಿದ್ದರು. ಅದಾಗ ತಾನೇ ಪದ್ಮಾವತ್ ಚಿತ್ರಕ್ಕೆ ಕಟ್ಟುಮಸ್ತಾಗಿ ದೇಹವನ್ನು ಹುರಿಗೊಳಿಸಿಕೊಂಡಿದ್ದ ರಣ್‌ವೀರ್, ಅದಾಗಿ ತಿಂಗಳು ಕಳೆಯೋದರೊಳಗೆ ಪೀಚು ಪೀಚಾದ ಹುಡುಗನಂತಾಗಿ ದೇಹ ದಂಡಿಸಿಕೊಂಡಿದ್ದರು. ಇದೊಂದು ಸ್ಯಾಂಪಲ್ ಅಷ್ಟೇ. ಈ ಚಿತ್ರದ ಹಿಂದೆ ಇಂಥಾ ಅಗಾಧ ಪರಿಶ್ರಮಗಳಿವೆ. ಇದು ಮೂಡಿ ಬಂದಿರೋ ರೀತಿಯೇ ಆಸ್ಕರ್ ಗರಿ ಮತ್ತೆ ಭಾರತಕ್ಕೆ ದಕ್ಕುವ ಭರವಸೆಯನ್ನು ಗಟ್ಟಿಗೊಳಿಸಿದೆ.

Leave a Reply

Your email address will not be published. Required fields are marked *