Tuesday, 25th February 2020

ಕೊಚ್ಚೆಗೆ ಕಲ್ಲು ಹಾಕಿದ್ರೆ ನಮ್ಮ ಮೇಲೆ ಹಾರುತ್ತೆ – ಈಶ್ವರಪ್ಪ ವಿರುದ್ಧ ಜಮೀರ್ ವಾಗ್ದಾಳಿ

ಹುಬ್ಬಳ್ಳಿ: ಬಿಜೆಪಿ ಹಿರಿಯ ನಾಯಕರಾಗಿ ಈಶ್ವರಪ್ಪ ಅವರಿಗೆ ಮಾತನಾಡಲು ಬರುವುದಿಲ್ಲ. ಕೊಚ್ಚೆಗೆ ಕಲ್ಲು ಹಾಕಿದರೆ ನಮ್ಮ ಮೇಲೆ ಹಾರುತ್ತೆ. ಇದರಂತೆ ಅವರ ಮಾತಿಗೆ ಪ್ರಾಮುಖ್ಯತೆ ಕೊಡಬಾರದು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಈಶ್ವರಪ್ಪ ಮಾತಿಗೆ ಆದ್ಯತೆ ಕೊಡುವ ಅಗತ್ಯವಿಲ್ಲ. ಇದುವರೆಗೂ ಈಶ್ವರಪ್ಪ ಯಾರ ಬಗ್ಗೆಯಾದರು ಉತ್ತಮ ಮಾತು ಹೇಳಿದ್ದರಾ? ಕಳ್ಳ, ಸುಳ್ಳ ಅಂತ ಹೇಳಲು ಅವನು ಯಾರು? ಅವನಿಗೆ ಕಳ್ಳತನ ಮಾಡಿ ಅಭ್ಯಾಸವಿರಬೇಕು. ಎಲ್ಲರಿಗೂ ಕಳ್ಳರು ಎನ್ನುತ್ತಿದ್ದಾನೆ. ಈಶ್ವರಪ್ಪ ಮನುಷ್ಯನಾ ಎಂದು ಜಮೀರ್ ಪ್ರಶ್ನೆ ಮಾಡಿ ಏಕವಚನದಲ್ಲೇ ತಿರುಗೇಟು ನೀಡಿದರು.

ಸಿದ್ದರಾಮಯ್ಯಗೆ ಜೈಕಾರ: ನಾನು ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಪಕ್ಷಕ್ಕೆ ನಿಷ್ಠೆನಾಗಿದ್ದೆ. ಈಗ ಕಾಂಗ್ರೆಸ್ ನಲ್ಲಿ ಇದ್ದೇನೆ ಸಿದ್ದರಾಮಯ್ಯ ನಮ್ಮ ನಾಯಕ ಎಂದು ಒಪ್ಪಿಕೊಂಡಿದ್ದು, ಪಕ್ಷಕ್ಕೆ ನಿಷ್ಠೆಯಾಗಿರುತ್ತೇನೆ. ಲೋಕಸಭಾ ಚುನಾವಣೆ ನಂತರ ಸರ್ಕಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡಿದರೆ ಬಿಎಸ್ ವೈ ಮನೆಯಲ್ಲಿ ವಾಚ್ ಮೆನ್ ಕೆಲಸ ಮಾಡಲು ಸಿದ್ಧ ಎಂಬ ಮಾತಿಗೆ ನಾನು ಈಗಲೂ ಬದ್ಧ. ಆದರೆ ನಾನು ಈಶ್ವರಪ್ಪ ಮುಖ ನೋಡಲು ನಾನು ಸಿದ್ಧವಿಲ್ಲ. ಏಕೆಂದರೆ ಈಶ್ವರಪ್ಪ ಸಿಎಂ ಆಗೋದು ಕನಸಿನ ಮಾತು ಎಂದರು.

ಕಾಂಗ್ರೆಸ್ ನಾಯಕರ ಸಿಎಂ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ್ದ ಈಶ್ವರಪ್ಪ ಅವರು, ಇಷ್ಟು ದಿನ ಕಾಂಗ್ರೆಸ್ ನಾಯಕರು ಬಾಯಿಯೇ ಬಂದಂತೆ ಮಾತನಾಡುತ್ತಿದ್ದರು. ಆದರೆ ವಿಶ್ವನಾಥ್ ಅವರು ಹೇಳಿಕೆ ನೀಡಿದ ಬಳಿಕ ಈಗ ನಾವು ಮಾತನಾಡುವುದು ಬೇಡ ನೀವು ಮಾತನಾಡ ಬೇಡಿ ಎಂದು ಹೇಳಿದ್ದಾರೆ. ಆದ್ದರಿಂದಲೇ ಇಬ್ಬರು ಸುಮ್ಮನಿದ್ದಾರೆ. ಆದರೆ ಲೋಕಸಭಾ ಚುನಾವಣೆ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ. ಮಾಧ್ಯಮಗಳು ಕದನ ವಿರಾಮ ಎಂದು ಹೇಳುತ್ತಿದ್ದು, ಚುನಾವಣೆ ಬಳಿಕ ಈ ಕದನ ಮತ್ತೆ ಮುಂದುವರಿಯುತ್ತದೆ. ಆದರೆ ಸರ್ಕಾರ ಯಾವುದೇ ಕಾರಣಕ್ಕೂ ಉಳಿಯುದಿಲ್ಲ ಎಂದು ಹೇಳಿದ್ದರು.

Leave a Reply

Your email address will not be published. Required fields are marked *