ಬುಮ್ರಾ ಹಿಂದಿಕ್ಕಿ ಅಶ್ವಿನ್ ದಾಖಲೆ ಸರಿಗಟ್ಟಿದ ಚಹಲ್

ಹೈದರಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ವಿಶೇಷ ಹೆಗ್ಗಳಿಕೆಯನ್ನು ಪಡೆದಿದ್ದು, ಟಿ20 ಮಾದರಿಯಲ್ಲಿ ತಂಡದ ಪರ ಅತ್ಯಧಿಕ ವಿಕೆಟ್ ಪಡೆದ ಆಟಗಾರನಾಗಿ ಆರ್.ಅಶ್ವಿನ್ ರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ಆಟಗಾರ್ ಹೆಟ್ಮಾಯರ್ ವಿಕೆಟ್ ಪಡೆಯುವ ಮೂಲಕ ಚಹಲ್ ಈ ಸಾಧನೆ ಮಾಡಿದ್ದು, ಆ ಮೂಲಕ ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾರನ್ನು ಹಿಂದಿಕ್ಕಿದ್ದಾರೆ.

ಟೀಂ ಇಂಡಿಯಾ ಪರ ಅತಿ ಕಡಿಮೆ 34 ಪಂದ್ಯದಲ್ಲಿ 50 ವಿಕೆಟ್ ಸಾಧನೆ ಮಾಡಿದ ಆಟಗಾರ ಎಂಬ ದಾಖಲೆಯನ್ನು ಚಹಲ್ ಸಾಧಿಸಿದ್ದು, ಈ ಪಟ್ಟಿಯಲ್ಲಿ ಶ್ರೀಲಂಕಾ ಆಟಗಾರ ಅಜಂತಾ ಮೆಂಡಿಸ್ (26 ಪಂದ್ಯ) ವಿಶ್ವ ಕ್ರಿಕೆಟ್‍ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಇದುವರೆಗೂ ವಿಶ್ವ ಟಿ20 ಕ್ರಿಕೆಟ್ ಮಾದರಿಯಲ್ಲಿ 32 ಆಟಗಾರರು 50 ವಿಕೆಟ್ ಪಡೆದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಟೀಂ ಇಂಡಿಯಾ ಪರ ಆರ್.ಅಶ್ವಿನ್, ಬುಮ್ರಾ, ಚಹಲ್ ಸ್ಥಾನ ಪಡೆದಿದ್ದಾರೆ. ಉಳಿದಂತೆ ಮೊದಲ ಟಿ20 ಪಂದ್ಯದಲ್ಲಿ ಚಹಲ್ 9ರ ಎಕನಾಮಿಯಲ್ಲಿ 36 ರನ್ ನೀಡಿ 2 ವಿಕೆಟ್ ಪಡೆದಿದ್ದರು.

ಇತ್ತ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರದರ್ಶನಕ್ಕೆ ವಿಶ್ವದ ದಿಗ್ಗಜ ಮಾಜಿ ಆಟಗಾರರು, ಕ್ರಿಕೆಟ್ ವಿಶ್ಲೇಷಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಪಂದ್ಯದಲ್ಲಿ ಕೊಹ್ಲಿ 50 ಎಸೆತಗಳಲ್ಲಿ ತಲಾ 6 ಸಿಕ್ಸರ್, ಬೌಂಡರಿ ನೆರವಿನಿಂದ 94 ರನ್ ಗಳಿಸಿ ಅಜೇಯರಾಗಿ ಉಳಿದರು. ಅಲ್ಲದೇ 8 ಎಸೆತಗಳು ಬಾಕಿ ಇರುವಂತೆ ಪಂದ್ಯದಲ್ಲಿ ತಂಡ ಗೆಲುವು ಪಡೆಯಲು ಕಾರಣರಾದರು.

Leave a Reply

Your email address will not be published. Required fields are marked *