Bengaluru City

ನಾಳೆ ‘ಮಂಗಳವಾರ ರಜಾದಿನ’ ಚಿತ್ರ ತೆರೆಗೆ- ಯುವಿನ್ ನಿರ್ದೇಶನದ ಚೊಚ್ಚಲ ಸಿನಿಮಾ

Published

on

Share this

ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಮಂಗಳವಾರ ರಜಾದಿನ’ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಸಖತ್ ಬಝ್ ಕ್ರಿಯೇಟ್ ಮಾಡಿದ್ದು, ಚಿತ್ರ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

‘ಮಂಗಳವಾರ ರಜಾದಿನ’ ಯುವ ನಿರ್ದೇಶಕ ಯುವಿನ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ನಿರ್ದೇಶಕ ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿರುವ ಯುವಿನ್ ಸಿನಿಮಾ ಸ್ಕ್ರಿಪ್ಟ್ ಬರಹಗಾರರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಒಂದಿಷ್ಟು ಹೊಸ ತಂಡಗಳ ಜೊತೆ ಅಸೋಸಿಯೇಟ್, ಅಸಿಸ್ಟೆಂಟ್ ನಿರ್ದೇಶಕರಾಗಿ ದುಡಿದಿದ್ದಾರೆ. ಈ ಎಲ್ಲ ಅನುಭವವನ್ನು ಇಟ್ಟುಕೊಂಡು ‘ಮಂಗಳವಾರ ರಜಾದಿನ’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ ಯುವಿನ್. ಈಗಾಗಲೇ ಚಿತ್ರದ ತುಣುಕುಗಳಿಗೆ ಸಿನಿರಸಿಕರಿಂದ ಸಿಕ್ಕಿರುವ ರೆಸ್ಪಾನ್ಸ್ ನಿಂದ ಸಂತಸಗೊಂಡಿರುವ ಯುವಿನ್ ಸಿನಿಮಾವನ್ನು ಪ್ರೇಕ್ಷಕ ಪ್ರಭುಗಳು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಲ್ಲಿದ್ದಾರೆ.

ಸ್ವತಃ ತಾವೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಯುವಿನ್, ನಿರ್ಮಾಪಕರಿಗಾಗಿ ಅಲೆದು ಅಲೆದು ಕೊನೆಗೆ ಸ್ನೇಹಿತರೆಲ್ಲರನ್ನೂ ಸೇರಿಸಿಕೊಂಡು ತ್ರಿವರ್ಗ ಎಂಬ ತಂಡ ಕಟ್ಟಿಕೊಂಡು ಸಿನಿಮಾ ನಿರ್ಮಾಣ ಮಾಡಿದ್ದಾರೆ. `ಮಂಗಳವಾರ ರಜಾದಿನ’ ಕಾಮಿಡಿ ಹಾಗೂ ಎಮೋಷನಲ್ ಡ್ರಾಮಾ ಜಾನರ್ ಸಿನಿಮಾವಾಗಿದ್ದು, ಚಂದನ್ ಆಚಾರ್ ಚಿತ್ರದಲ್ಲಿ ಕ್ಷೌರಿಕನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ನಟ ಸುದೀಪ್ ಗೆ ಹೇರ್ ಕಟ್ ಮಾಡಬೇಕು ಎಂಬ ಮಹದಾಸೆ ಹೊಂದಿರುವ ಬಾರ್ಬರ್ ಹುಡುಗನ ಕನಸು ಈಡೇರುತ್ತಾ? ಇಲ್ಲವಾ? ಎನ್ನೋದರ ಸುತ್ತ ‘ಮಂಗಳವಾರ ರಜಾದಿನ’ ಸಿನಿಮಾ ಕಥೆಯನ್ನು ಹೆಣೆಯಲಾಗಿದೆ.

ಲಾಸ್ಯ ನಾಗರಾಜ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ಪಾಪಾ ಪಾಂಡು ಖ್ಯಾತಿಯ ಜಹಂಗೀರ್, ರಜನಿಕಾಂತ್, ಹರಿಣಿ, ಗೋಪಾಲ್ ದೇಶಪಾಂಡೆ, ನಂದನ್ ರಾಜ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಋತ್ವಿಕ್ ಮುರಳಿಧರ್ ಹಾಗೂ ಪ್ರಜೋತಾ ಡೇಸಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಉದಯ್ ಲೀಲಾ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ‘ಮಂಗಳವಾರ ರಜಾದಿನ’ ನಾಳೆ ಚಿತ್ರಮಂದಿರದ ಅಂಗಳಕ್ಕೆ ಬರುತ್ತಿದ್ದು, ಪ್ರೇಕ್ಷಕ ಪ್ರಭುಗಳು ಚಿತ್ರದ ಬಗ್ಗೆ ಏನ್ ಹೇಳ್ತಾರೆ ಅನ್ನೋದನ್ನ ಕಾದು ನೋಡಬೇಕು.

Click to comment

Leave a Reply

Your email address will not be published. Required fields are marked *

Advertisement
Advertisement