ಮುಳುಗುತ್ತಿದ್ದ ಹಸು ಉಳಿಸಲು ನದಿಯಲ್ಲಿ ಜೀವ ಪಣಕ್ಕಿಟ್ಟ ಗೆಳೆಯರು

ಉಡುಪಿ: ಜೀವ ಪಣಕ್ಕಿಟ್ಟ ಯುವಕರು ನದಿಯಲ್ಲಿ ಮುಳುಗುತ್ತಿದ್ದ ಹಸು ರಕ್ಷಿಸಿದ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಮುಂಗಾರು ಕೊಂಚ ಚುರುಕಾಗಿರುವುದರಿಂದ ಕುಂದಾಪುರದ ಪಂಚ ಗಂಗಾವಳಿ ನದಿ ತುಂಬಿ ಹರಿಯುತ್ತಿದೆ. ಕಳೆದೆರಡು ದಿನದಿಂದ ನದಿಯ ರಭಸ ಜಾಸ್ತಿಯಾಗಿದೆ. ನದಿ ನೀರಿನ ಸೆಳೆತಕ್ಕೆ ಹಸುವೊಂದು ಸಿಕ್ಕಿ ಹಾಕಿಕೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿತ್ತು.

ಗಂಗೊಳ್ಳಿಯ ಕೆಲ ಯುವಕರಿಗೆ ಇದು ಗೊತ್ತಾಗಿದೆ. ಕೂಡಲೇ ನಾಲ್ಕಾರು ಯುವಕರು ದೋಣಿ ಹತ್ತಿ ನದಿಗಿಳಿದಿದ್ದಾರೆ. ಈಜುತ್ತಾ ಮುಳುಗುತ್ತಿದ್ದ ಹಸುವಿನ ಚೂಪು ಕೊಂಬಿಗೆ ಹಗ್ಗ ಹಾಕಿದ್ದಾರೆ. ಸಮುದ್ರದ ಕಡೆ ಸಾಗಿ ಹೋಗುತ್ತಿದ್ದ ಹಸುವನ್ನು ದಡಕ್ಕೆ ಮುಟ್ಟಿಸಲು ಸರ್ವ ಪ್ರಯತ್ನ ಮಾಡಿದ್ದಾರೆ. ಉದ್ದ ಹಗ್ಗದ ತುದಿ ದಡದಲ್ಲಿರುವವರಿಗೆ ಸಿಕ್ಕ ಕೂಡಲೇ ಹಸುವನ್ನು ದಡಕ್ಕೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಗೊಳ್ಳಿಯ ಸ್ಥಳೀಯರಾದ ರಾಮ ಖಾರ್ವಿ, ರಾಜ ಮಲ್ಯರಬೆಟ್ಟು, ಅಣ್ಣಪ್ಪ ಹಾಗೂ ಗೆಳೆಯರು ಜೀವ ಪಣಕ್ಕಿಟ್ಟು ಕೊನೆಗೂ ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಳುಗುವವನಿಗೆ ಹುಲುಕಡ್ಡಿ ಸಿಕ್ಕರೂ ಒಮ್ಮೆ ಬಚಾವ್ ಆಗುತ್ತದೆಯಂತೆ. ಅದರಂತೆ ಈಗ ಯುವಕರು ಸಾಹಸದಿಂದ ಹಸು ತನ್ನ ಪ್ರಾಣವನ್ನು ಉಳಿಸಿಕೊಂಡಿದೆ.

ನಾವು ಸಮುದ್ರ ತೀರದವರು, ಸಮುದ್ರ ಮತ್ತು ನದಿಯಲ್ಲಿ ಈಜಿ ದಡ ಸೇರುವ ಚಾಕಚಕ್ಯತೆ ಇದೆ. ದನವೂ ಈಜುತ್ತದೆ. ಆದರೆ ನೀರಿನ ರಭಸ ಜಾಸ್ತಿಯಾಗಿರುವುದರಿಂದ ಸಮುದ್ರದ ಕಡೆ ಹೋಗುತಿತ್ತು. ಹಗ್ಗ ಹಾಕಿ ನೀರಿನ ವಿರುದ್ಧ ದಿಕ್ಕಿಗೆ ಎಳೆದು ಹಾಕಿದ್ದೇವೆ ಎಂದು ಅಣ್ಣಪ್ಪ ಹೇಳಿದ್ದಾರೆ.

Leave a Reply

Your email address will not be published. Required fields are marked *