Connect with us

Bengaluru City

ಫೋನ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಮೆಟ್ರೋ ಹಳಿಗೆ ಹಾರಿದ ಯುವಕ!

Published

on

ಬೆಂಗಳೂರು: ನಮ್ಮ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಬಿಎಂಆರ್ ಸಿಎಲ್ ಎಂಡಿ ಅಜಯ್ ಸೇಠ್ ಮಾಹಿತಿ ನೀಡಿದ್ದಾರೆ.

ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಮೆಟ್ರೋ ರೈಲು ಆಗಮಿಸುವ ವೇಳೆ ಸುಮಾರು 20 ಮೀಟರ್ ದೂರವಿದ್ದ ಯುವಕ ಏಕಾಏಕಿ ಹಳಿಗೆ ಹಾರಿದ್ದು, ಈ ವೇಳೆ ರೈಲು ಹಳಿಯ ಮಧ್ಯಭಾಗದಲ್ಲಿ ಬಿದ್ದ ಕಾರಣ ಆತ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿಸಿದರು.

ಯುವಕ ಆತ್ಮಹತ್ಯೆ ಯತ್ನಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೆಟ್ರೋ ರಕ್ಷಣಾ ಸಿಬ್ಬಂದಿ ಎಚ್ಚರಿಕೆಯಿಂದ ಇದ್ದರೂ ಕೂಡ ಘಟನೆ ನಡೆದಿದೆ. ಘಟನೆಯಿಂದ ಸುಮಾರು 45 ನಿಮಿಷಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಆದರೆ ಸದ್ಯ ಸಂಚಾರ ಪುನರ್ ಆರಂಭಗೊಂಡಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಬಿಎಂಆರ್ ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್ ಆಸ್ಪತ್ರೆ ಬಳಿ ಮಾತನಾಡಿ ಯುವಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆದರೆ ತಲೆಗೆ ಗಂಭೀರ ಗಾಯವಾಗಿದೆ ಎಂದು ತಿಳಿಸಿದರು.

ಮೆಟ್ರೋ ರೈಲಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕ ನಗರದ ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ನಿವಾಸಿ ವೇಣುಗೋಪಾಲ್(18) ಎಂದು ತಿಳಿದು ಬಂದಿದೆ. ಆತ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದು, ಬಳಿಕ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದ. ಆದರೆ ಇತ್ತೀಚೆಗೆ ತಡರಾತ್ರಿವರೆಗೂ ಫೋನ್ ನಲ್ಲಿ ಹೆಚ್ಚು ಮಾತನಾಡುತ್ತಿದ್ದ. ಇದನ್ನು ಗಮನಿಸಿದ್ದ ಪೋಷಕರು ಫೋನ್ ಹೆಚ್ಚು ಬಳಸದಂತೆ ತಿಳಿ ಹೇಳಿದ್ದರು. ಆದರೆ ಇದೇ ವಿಚಾರಕ್ಕೆ ನಿನ್ನೆ ರಾತ್ರಿ ಪೋಷಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ ವೇಣು ಇಂದು ಬೆಳಗ್ಗೆ 9 ಗಂಟೆ ವೇಳೆಗೆ ಮನೆಯಿಂದ ಹೊರಬಂದಿದ್ದ. ಆ ಬಳಿಕ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಆಗಮಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸಿಎಂ ಕುಮಾರಸ್ವಾಮಿ ನಿಮ್ಹಾನ್ಸ್ ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಆರೋಗ್ಯವನ್ನು ವಿಚಾರಿಸಿದ್ದಾರೆ. ವಿವಿಪುರಂ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv