Wednesday, 23rd October 2019

ಮೋರಿ ನೀರಿನಲ್ಲಿ ಶತ್ರುವನ್ನು ಹುಡುಕಿದ ಪಬ್‍ಜಿ ವೀರ

ವಿಜಯಪುರ: ಇತ್ತೀಚೆಗೆ ಬೆಳಗಾವಿಯಲ್ಲಿ ಪಬ್‍ಜಿ ಆಡಲು ಇಂಟರ್ನೆಟ್ ಪ್ಯಾಕ್ ಹಾಕಿಸಲು ಹಣ ಕೊಡಲಿಲ್ಲವೆಂದು ತಂದೆಯನ್ನೇ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಮಾಸುವ ಮುನ್ನವೇ ಇದೀಗ ಪಬ್‍ಜಿ ಗೇಮ್ ಮತ್ತೊಮ್ಮೆ ಸದ್ದು ಮಾಡಿದೆ.

ಹೌದು. ಈ ಬಾರಿ ಯುವಕನೊಬ್ಬ ಕಂದಕದ ಚರಂಡಿಯಲ್ಲಿ ಬಿದ್ದು ಪಬ್‍ಜಿ ಆಟದಂತೆ ಈಜಾಡುವ ಮೂಲಕ ತನ್ನ ಶತ್ರುಗಳನ್ನು ಹುಡುಕಿದ್ದಾನೆ. ಈ ಘಟನೆ ವಿಜಯಪುರ ನಗರದ ಗಗನ ಮಹಲ್ ನ ಹಿಂದಿರುವ ಚರಂಡಿಯಲ್ಲಿ ನಡೆದಿದೆ. ಯುವಕ ವಿಜಯಪುರ ನಗರದ ಶಿವಾಜಿ ಕಾಲೋನಿಯ ನಿವಾಸಿಯಾಗಿದ್ದು, ಹೆಸರು ತಿಳಿದುಬಂದಿಲ್ಲ. ಚರಂಡಿ ನೀರಿನಲ್ಲಿ ಯುವಕ ಈಜಾಡುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲೇನಿದೆ..?
ಯುವಕ ಚರಂಡಿ ನೀರಿನಲ್ಲಿ ಮುಳುಗಿ, ಮೇಲೇಳುತ್ತಾ ಪಬ್‍ಜಿ ಆಟದಂತೆ ಈಜಾಡಿದ್ದಾನೆ. ಅಲ್ಲದೆ ಮೋರಿಯಲ್ಲಿ ಈಜಾಡುತ್ತಾ ಶತ್ರುಗಳನ್ನು ಹುಡುಕಾಡಿದ್ದಾನೆ. ಈತನನ್ನು ನೋಡಿದ ಸ್ಥಳೀಯರು ಮೇಲಕ್ಕೆ ಬಾರೋ ಪಕ್ಕದಲ್ಲಿ ಹಾವು ಬರುತ್ತಿದೆ ಹುಷಾರ್.. ಹುಷಾರ್.. ಛೀ.. ಥೂ.. ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಕೇಳಬಹುದು. ಆದರೂ ಯುವಕ ಸ್ಥಳೀಯರ ಮಾತುಗಳನ್ನು ಲೆಕ್ಕಿಸದೇ ತನ್ನ ಪಾಡಿಗೆ ಗಬ್ಬುವಾಸನೆ ಬರುತ್ತಿರುವ ನೀರಿನಲ್ಲಿ ಈಜಾಡಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕರು ಕಮೆಂಟ್ ಮಾಡಿದ್ದಾರೆ. ಅದರಲ್ಲಿ ಕೆಲವರು ಯುವಕ ಮದ್ಯವ್ಯಸನಿಯಾಗಿದ್ದು ಹೀಗೆ ಹುಚ್ಚಾಟ ನಡೆಸಿದ್ದಾನೆಂದು ಹೇಳಿದ್ದಾರೆ. ಆದರೆ ಯುವಕ ಮನೆಯವರ ವಿರೋಧದ ನಡುವೆಯೂ ಪಬ್‍ಜಿ ಆಡುತ್ತಿದ್ದನು. ಹೀಗೆ ಆಟವಾಡಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ವರ್ತಿಸಿದ್ದಾನೆ ಎಂಬ ಕೆಲವರು ಹೇಳುತ್ತಿದ್ದಾರೆ.

ತಂದೆಯನ್ನೇ ಕೊಂದ ಮಗ!
ಇತ್ತೀಚೆಗೆ ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಮಗನೇ ತನ್ನ ತಂದೆಯನ್ನು ಬರ್ಬರವಾಗಿ ಕೊಲೆಗೈದ ಭಯಾನಕ ಘಟನೆ ನಡೆದಿತ್ತು. ಕಾಕತಿಯ ನಿವಾಸಿ ಶಂಕ್ರಪ್ಪ ಕಮ್ಮಾರ(59) ಅವರನ್ನು ರಘುವೀರ್ ಕಮ್ಮಾರ(21) ಕೊಲೆ ಮಾಡಿದ್ದಾನೆ. ಡಿಪ್ಲೊಮಾ ಮೆಕ್ಯಾನಿಕಲ್ ಎಂಜಿನಿಯರ್ ಎರಡನೇ ವರ್ಷ ಓದುತ್ತಿದ್ದ ಆರೋಪಿ ರಘುವೀರ್ ಕಳೆದ ನಾಲ್ಕೈದು ವರ್ಷಗಳಿಂದ ಮೊಬೈಲ್ ಗೇಮ್‍ಗಳನ್ನು ಆಡುವ ಗೀಳಿಗೆ ಬಿದ್ದಿದ್ದನು. ಪಾಲಕರು ಎಷ್ಟೇ ಕಿವಿ ಮಾತು ಹೇಳಿದರೂ ಕೇಳದ ಯುವಕ ಗೇಮ್ ಹುಚ್ಚಿಗೆ ಜೀವನವನ್ನೇ ಹಾಳು ಮಾಡಿಕೊಂಡಿದ್ದನು.

ಪಬ್ ಜಿ ಆಡಲು ತಂದೆಗೆ ಇಂಟರ್ನೆಟ್ ಪ್ಯಾಕ್ ಹಾಕಿ ಎಂದು ಕೇಳಿಕೊಂಡಿದ್ದಾನೆ. ಆದರೆ ಮಗನ ಮಾತನ್ನು ತಂದೆ ನಿರಾಕರಿಸಿದ್ದು ಮಾತ್ರವಲ್ಲದೆ ಮಗನಿಗೆ ಬುದ್ಧಿವಾದ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದ ರಘುವೀರ್ ತನ್ನ ತಾಯಿಯನ್ನು ಕೋಣೆಯಲ್ಲಿ ಕೂಡಿಹಾಕಿದ್ದಾನೆ. ಬಳಿಕ ತರಕಾರಿ ಕತ್ತರಿಸುವ ಹಾಗೆ ತಂದೆಯ ರುಂಡವನ್ನು, ಕಾಲನ್ನು ಪಾಪಿ ಮಗ ಕತ್ತರಿಸಿದ್ದಾನೆ. ಮೊದಲು ಕತ್ತರಿಯಿಂದ ತಂದೆಯ ಕುತ್ತಿಗೆಯನ್ನು ಕತ್ತರಿಸಲು ರಘುವೀರ್ ಪ್ರಯತ್ನಿಸಿ, ಇಳಿಗೆ ಮಣೆ ತಂದು ತಂದೆಯ ರುಂಡವನ್ನು ಕಟ್ ಮಾಡಿದ್ದಾನೆ. ನಂತರ ತಂದೆಯ ದೇಹವನ್ನು ಛಿದ್ರಛಿದ್ರ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *