Friday, 17th August 2018

Recent News

10 ಸಾವಿರಕ್ಕಾಗಿ ಸ್ನೇಹಿತರನ್ನೇ ಕೊಲೆ ಮಾಡಿ ಜೈಲು ಸೇರಿದ್ರು

ಹುಬ್ಬಳ್ಳಿ: ಕೇವಲ 10 ಸಾವಿರ ಹಣಕ್ಕಾಗಿ ಇಬ್ಬರು ಸ್ನೇಹಿತರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ಎಂ.ಎನ್ ನಾಗರಾಜ್, ಜೂನ್ 8 ರ ಮಧ್ಯರಾತ್ರಿ ಅಜಂತ ಹೋಟೆಲ್ ಬಳಿ ನಡೆದಿದ್ದ ಜೋಡಿ ಕೊಲೆಯ ಆರೋಪಿಗಳನ್ನ ಬಂಧಿಸಲಾಗಿದೆ. ಹಣದ ವ್ಯವಹಾರಕ್ಕಾಗಿ ಕೊಲೆ ಮಾಡಲಾಗಿದೆ. ಕೊಲೆಯ ಹಿಂದೆ ಹಳೆಯ ವೈಷಮ್ಯ ಇರುವ ಕುರಿತ ಶಂಕೆಯಿದೆ ಎಂದು ತಿಳಿಸಿದ್ದಾರೆ.

ಏನಿದು ಘಟನೆ: ಕೆಲ ದಿನಗಳ ಹಿಂದೆ ನಗರದ ಅಜಂತ ಹೋಟೆಲ್ ಬಳಿ ಫೈರೋಜ್ ಇರ್ಷಾದ್ ಹಾಗೂ ರಿಯಾಜ್ ರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸದ್ಯ ಕೊಲೆಯಾದ ಮೂರು ದಿನದಲ್ಲೇ ಆರೋಪಿಗಳನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.

ಅಖಿಲ್ ಬೇಪಾರಿ(23) ಇರ್ಷಾದ್ ಮಿಶ್ರಿಕೋಟಿ(26), ನವಲೂರು(25)  ಹಾಗೂ ಕೊಲೆಗೆ ಸಹಾಯ ಮಾಡಿದ ವಿರೇಶ್ ಸೊಟ್ನಾಳ(27) ಬಂಧಿತ ಆರೋಪಿಗಳು. ಕೆಲ ದಿನಗಳ ಹಿಂದೆ ಮೃತ ಫೈರೋಜ್ ಆರೋಪಿ ಇರ್ಷಾದ್ ಗೆ ಹತ್ತು ಸಾವಿರ ಹಣ ನೀಡಿದ್ದ. ಇದನ್ನು ವಾಪಸ್ ಕೇಳಿದ ಸಂದರ್ಭದಲ್ಲಿ ಇರ್ಷಾದ್ ಹಾಗೂ ಆತನ ಮೂವರು ಸ್ನೇಹಿತರು ಸೇರಿ ಫೈರೋಜ್ ಹಾಗೂ ರಿಯಾಜ್‍ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಕುರಿತು ವಿಚಾರಣೆ ವೇಳೆ ಕೊಲೆ ಮಾಡಿದ್ದಾಗಿ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಆರೋಪಿಗಳ ನಡುವೆ ಪ್ರೇಮ ಪ್ರಕರಣ ಕುರಿತು ವೈಷಮ್ಯ ಉಂಟಾಗಿತ್ತು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿರುವುದಾಗಿ ಮಾಹಿತಿ ನೀಡಿದ್ದು, ಆದರೆ ಇಂದಿನ ಕೊಲೆಗೆ ಹಣಕಾಸಿನ ವೈಷ್ಯಮ್ಯವೇ ಕಾರಣವೆಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *