Crime
ಪ್ರೇಮ ಪಾಶದಲ್ಲಿ ಸಿಲುಕಿದ ಯುವಕನಿಗೆ ವಿಷ ಪ್ರಾಶಾನ

ಯಾದಗಿರಿ: ಯುವಕನ ಮೇಲೆ ಹಲ್ಲೆ ಮಾಡಿ ಬಳಿಕ, ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ನಗರದ ಹೊರ ವಲಯದಲ್ಲಿ ನಡೆದಿದೆ.
ಶಹಾಪುರ ನಗರದ ಆಶ್ರಯ ಕಾಲೋನಿಯ ಅಲ್ಪಸಂಖ್ಯಾತರ ವಸತಿ ನಿಲಯದ ಬಳಿ ಈ ಘಟನೆ ನಡೆದಿದೆ. ಶಹಪುರ ತಾಲೂಕಿನ ಸಾದ್ಯಾಪುರ ಗ್ರಾಮದ ಸಂತೋಷ್ (22) ಮೃತ ಯುವಕ. ಮೃತ ಸಂತೋಷ್ ಅದೇ ಗ್ರಾಮದ ತಮ್ಮದೇ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದನು. ಇಬ್ಬರ ಪ್ರೀತಿ ವಿಚಾರ ಯುವತಿಯ ಮನೆಯವರಿಗೆ ತಿಳಿದಿತ್ತು.
ಯುವತಿಯ ಸಂಬಂಧಿ ಬಾಗಪ್ಪ ಮತ್ತು ಆತನ ಸ್ನೇಹಿತರು ಸಂತೋಷ್ ನನ್ನು ಮಾತುಕತೆಗೆಂದು ಶಹಪುರಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಬಾಗಪ್ಪ ಮತ್ತು ಆತನ ಸ್ನೇಹಿತರು ಸಂತೋಷ್ ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬಳಿಕ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿದ್ದಾರೆಂದು ಅನುಮಾನಿಸಲಾಗಿದೆ.
ಸದ್ಯ ಸಂತೋಷ್ ಮೃತ ದೇಹ ಶಹಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆ ಮುಂದೆ ಯುವಕನ ಕುಟುಂಬಸ್ಥರ ಆಕ್ರಂದನ ಹೇಳತೀರದಾಗಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಚೆನ್ನಯ್ಯ ಹಿರೇಮಠ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದೆ.
