Connect with us

Karnataka

ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಶವವಾಗಿ ಪತ್ತೆ

Published

on

Share this

– ಇನ್ನೊಂದು ವಾರದಲ್ಲಿ ಯುವತಿಯ ವಿವಾಹವಿರುವಾಗಲೇ ಕೊಲೆ?

ಕೊಪ್ಪಳ: ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿದ ಹಿನ್ನೆಲೆಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ದಲಿತ ಯುವಕನ ಕೊಲೆಗೆ ಕಾರಣವಾಗಿರುವವರನ್ನು ಬಂಧಿಸಿ, ಸಮಗ್ರ ತನಿಖೆ ಮಾಡಬೇಕೆಂದು ಮೃತ ಯುವಕನ ಕುಟುಂಬದವರು ಒತ್ತಾಯಿಸಿದ್ದಾರೆ.

ಇಂದು ಬೆಳಗ್ಗೆ ಜಿಲ್ಲೆಯ ಕಾರಟಗಿ ಬಳಿ 22 ವರ್ಷದ ಯುವಕ ದಾನೇಶ್ ನನ್ನು ಕೊಲೆ ಮಾಡಲಾಗಿದ್ದು, ನಗ್ನ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಯುವಕನ ಬೈಕ್, ಎಟಿಎಂ ಕಾರ್ಡ್, ಬಟ್ಟೆಗಳು ಚೆಲ್ಲಾಪಿಲ್ಲಿಯಾದ ಸ್ಥಿತಿಯಲ್ಲಿ ಸಿಕ್ಕಿವೆ.

ಮೃತ ದಾನೇಶ್ ಟ್ರ್ಯಾಕ್ಟರ್ ಚಾಲಕರಾಗಿದ್ದು, ಕಳೆದ ಎರಡು ವರ್ಷಗಳಿಂದ ಮರಿಬಸಪ್ಪ ಅವರ ಮಗಳು ಗೀತಾ(ಹೆಸರು ಬದಲಾಯಿಸಲಾಗಿದೆ)ಳನ್ನು ಪ್ರೀತಿಸುತ್ತಿದ್ದ. ಇದೇ ವಿಷಯಕ್ಕಾಗಿ ಈ ಹಿಂದೆ ಒಂದು ಬಾರಿ ಮರಿಬಸಪ್ಪನ ಕಡೆಯವರು ದಾನೇಶ್ ಮೇಲೆ ಹಲ್ಲೆ ಮಾಡಿದ್ದರು. ಈ ಘಟನೆ ಬಳಿಕ ದಾನೇಶ್ ಕುಟುಂಬದವರು ಆಕೆಯನ್ನು ಬಿಡುವಂತೆ ಹೇಳಿದ್ದರು. ಈ ಮಧ್ಯೆ ಯುವತಿಗೆ ಇನ್ನೊಂದು ವಾರದಲ್ಲಿ ಮದುವೆಯ ಸಿದ್ಧತೆ ಸಹ ನಡೆದಿದ್ದು, ಇದೇ ಸಂದರ್ಭದಲ್ಲಿ ದಾನೇಶ್‍ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ದಾನೇಶ್ ತಾನು ಕೆಲಸಕ್ಕೆ ಹೋಗುವುದಾಗಿ ತಾಯಿಗೆ ಹೇಳಿ ಹೋಗಿದ್ದ. ಅಲ್ಲದೆ ರಾತ್ರಿ ಊಟಕ್ಕೆ ಮನೆಗೆ ಬರುವುದಿಲ್ಲ ಎಂದು ಸಹ ಹೇಳಿದ್ದ. ಈ ಸಮಯದಲ್ಲಿ ಕೆಲ ಗೆಳೆಯರು ಸೇರಿ ಪಾರ್ಟಿ ಮಾಡಿದ್ದಾರೆ, ಪಾರ್ಟಿಯ ಬಳಿಕ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಪ್ರೀತಿ ವಿಷಯವನ್ನು ಮನೆಯವರು ದೂರ ಮಾಡಲು ನೋಡಿದರೂ ಯುವತಿ ಆಗಾಗ ದಾನೇಶನಿಗೆ ಫೋನ್ ಮಾಡುತ್ತಿದ್ದಳಂತೆ, ನಿನ್ನೆಯೂ ಸಹ ಯುವತಿ ಫೋನ್ ಮಾಡಿದ್ದಾಳೆ. ಇದನ್ನು ಸ್ನೇಹಿತರಿಗೆ ಹೇಳಿ ಹೋಗಿದ್ದ ದಾನೇಶ್, ಅನುಮಾನವಾಗಿ ಸಾವನ್ನಪ್ಪಿದ್ದಾನೆ. ಯುವತಿಯ ಕಡೆಯವರೇ ಕೊಲೆ ಮಾಡಿದ್ದಾರೆ, ಸಮಗ್ರ ತನಿಖೆ ಮಾಡಿ, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಯುವಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಕಾರಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯ ನಂತರವೇ ಕೊಲೆಗೆ ನಿಖರವಾದ ಕಾರಣ ಗೊತ್ತಾಗಲಿದೆ. ಈ ಮಧ್ಯೆ ಕಾರಟಗಿ ಪೊಲೀಸರು ಯುವತಿ, ಯುವತಿಯ ತಂದೆ, ತಾಯಿ ಹಾಗೂ ಅಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement