Connect with us

Crime

ಜಮೀನಿಗಾಗಿ ದೊಡ್ಡಮ್ಮ, ಸಹೋದರಿಯನ್ನು ಕೊಂದ ಯುವಕ

Published

on

ರಾಮನಗರ: ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ದೊಡ್ಡಮ್ಮ ಹಾಗೂ ಆಕೆಯ ಮಗಳನ್ನು ಯುವಕನೊಬ್ಬ ಕೊಲೆ ಮಾಡಿದ ಘಟನೆ ಕನಕಪುರ ತಾಲೂಕಿನ ಸೊಂಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸೊಂಟೇನಹಳ್ಳಿ ಗ್ರಾಮದ ಮಂಗಮ್ಮ ಹಾಗೂ ಆಕೆಯ ಮಗಳು ನಾಗರತ್ನ ಕೊಲೆಯಾದ ದುರ್ದೈವಿಗಳು. ಕೊಲೆಯಾದ ಮಂಗಮ್ಮಳ ಸೋದರಿಯ ಮಗ ನಾಗರಾಜು ಅಲಿಯಾಸ್ ನಾಗ ಅಲಿಯಾಸ್ ಬುಲೆಟ್ ನಾಗ ಕೊಲೆ ಮಾಡಿದ ಆರೋಪಿ.

ಎರಡು ಕುಟುಂಬಗಳ ನಡುವೆ ಹಲವಾರು ವರ್ಷಗಳಿಂದ ಜಮೀನಿನ ವಿಚಾರವಾಗಿ ಗಲಾಟೆ ನಡೆಯುತ್ತಲೇ ಇತ್ತು. ಇದೇ ವಿಚಾರವಾಗಿ ರಾತ್ರಿ ಕೂಡ ಗಲಾಟೆ ನಡೆದಿದ್ದು, ಬೆಳಗ್ಗೆ ಕೂಡ ಜಗಳವಾಡುತ್ತಿದ್ದಾಗ ಆರೋಪಿ ನಾಗರಾಜು ಮಚ್ಚು ತೆಗೆದುಕೊಂಡು ಮಂಗಮ್ಮಳ ಮನೆಗೆ ನುಗ್ಗಿ ಕೊಚ್ಚಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ಬಳಿಕ ನಾಗರಾಜು ಸ್ವತಃ ಪೊಲೀಸ್ ಠಾಣೆಗೆ ಹಾಜರಾಗಿ ಶರಣಾಗಿದ್ದಾನೆ. ಈ ಬಗ್ಗೆ ಹಾರೋಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.