Wednesday, 18th September 2019

Recent News

ಖಾತೆಗೆ 15 ಲಕ್ಷ ರೂ. ಬಂತೇ – ದಿಗ್ವಿಜಯ್ ಪ್ರಶ್ನೆಗೆ ವೇದಿಕೆಯಲ್ಲೇ ಉತ್ತರ ಕೊಟ್ಟ ಯುವಕ

ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪಕ್ಷಗಳ ನಡುವಿನ ಆರೋಪ ಪ್ರತ್ಯಾರೋಪ ಹೆಚ್ಚಾಗುತ್ತಿದ್ದು, ಇಂದು ಕೂಡ ಕಾಂಗ್ರೆಸ್ ಹಿರಿಯ ನಾಯಕ, ಭೋಪಾಲ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭೋಪಾಲ್ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅವರು ಇಂದು ಕಾರ್ಯಕತರ ಸಮಾವೇಶದಲ್ಲಿ ಮಾತನಾಡಿ,”ಪ್ರಧಾನಿ ಮೋದಿ ನಿಮ್ಮ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದು 5 ವರ್ಷ ಕಳೆದಿದ್ದು, 15 ಲಕ್ಷ ರೂ. ಬಂದಿದ್ಯಾ?” ಎಂದು ಪ್ರಶ್ನಿಸಿದ್ದರು.

ಈ ವೇಳೆ,”ಯುವಕನೊಬ್ಬ ನನ್ನ ಖಾತೆಗೆ ಬಂದಿದೆ” ಎಂದು ಕೈ ಮೇಲೆತ್ತಿ ಉತ್ತರ ನೀಡಿದ್ದ. ಇದನ್ನು ಕಂಡ ದಿಗ್ವಿಜಯ್ ಸಿಂಗ್ ಆಶ್ಚರ್ಯಗೊಂಡು,”ಹೌದೇ? ಬಂದಿದ್ದರೆ ಜನರಿಗೆ ತಿಳಿಸು ಬಾ” ಎಂದು ವೇದಿಕೆಗೆ ಯುವಕನನ್ನು ಕರೆದಿದ್ದಾರೆ.

ವೇದಿಕೆಗೆ ತೆರಳಿದ ಯುವಕ,”ನನ್ನ ಖಾತೆಗೆ 15 ಲಕ್ಷ ರೂ. ಬಂದಿದೆ. ಪ್ರಧಾನಿ ಮೋದಿ ಅವರು ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ನಡೆಸುವ ಮೂಲಕ ಉಗ್ರರನ್ನು ನಾಶ ಮಾಡಿ 15 ಲಕ್ಷ ರೂ. ಹಾಕಿದ್ದಾರೆ” ಎಂದು ಭಾಷಣ ಮಾಡಿದ್ದಾನೆ.

ಯುವಕನ ಉತ್ತರದಿಂದ ಸಿಡಿಮಿಡಿಗೊಂಡ ದಿಗ್ವಿಜಯ್ ಸಿಂಗ್ ತಕ್ಷಣ ಆತನನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ. 15 ಲಕ್ಷ ರೂ. ಬಂತೇ ಎಂದಷ್ಟೇ ನಾನು ಕೇಳಿದ್ದೇ ಎಂದು ಕೋಪದಿಂದಲೇ ನಂತರ ಭಾಷಣ ಮುಂದುವರಿಸಿದರು.

Leave a Reply

Your email address will not be published. Required fields are marked *