Connect with us

Crime

ಒಂದೇ ಕೋಮಿನ 2 ತಂಡಗಳ ಮಾರಾಮಾರಿ- ಕಬ್ಬಿಣ ರಾಡ್‍ನಿಂದ ಹೊಡೆದು ಯುವಕನ ಬರ್ಬರ ಹತ್ಯೆ!

Published

on

ಕಾರವಾರ: ಮಂಗಳವಾರ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆದಿತ್ತು. ಚುನಾವಣೆ ಹಿನ್ನೆಲೆಯಲ್ಲಿ ರಾತ್ರಿ ಒಂದೇ ಕೋಮಿನ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಕಬ್ಬಿಣದ ರಾಡ್‍ನಿಂದ ಹೊಡೆದು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರಬಾ ನಗರದ ಬಯಲು ಪ್ರದೇಶದಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ವೇಳೆ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಕಸ್ತೂರಬಾ ನಗರದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಅನೀಪ್ ತಹಶೀಲ್ದಾರ್ ಗೆ ಚಾಕು ಇರಿಯಲಾಗಿದೆ. ಆದ್ರೆ ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿ ಗಲಾಟೆಯನ್ನು ತಹಬದಿಗೆ ತಂದಿದ್ದು, ಚಾಕು ಇರಿತಗೊಂಡ ಅನೀಪ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿತ್ತು.

ಘಟನೆ ನಡೆದ ಕೆಲವು ಗಂಟೆಯಲ್ಲಿ ಈ ಗಲಾಟೆಯಲ್ಲಿ ಭಾಗಿಯಾಗಿದ್ದ ಅಸ್ಲಂ ಬಾಬಾಜಾನ್(22) ಎಂಬಾತ ಕೊಲೆಯಾಗಿದ್ದಾನೆ. ಅಸ್ಲಂ ತಲೆಗೆ ಕಬ್ಬಿಣದ ರಾಡ್‍ನಿಂದ ಹೊಡೆದು, ಚಾಕು ಇರಿದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಚುನಾವಣಾ ವಿಷಯವಾಗಿ ಕೊಲೆ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಸಂಬಂಧ ಶಿರಸಿಯ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.