Connect with us

ಕೊರೊನಾ ವೇಳೆ ಸಹಾಯ – ರಾಷ್ಟ್ರೀಯ ಯೂಥ್ ಕಾಂಗ್ರೆಸ್ ಅಧ್ಯಕ್ಷರ ಕಚೇರಿ ಮೇಲೆ ಪೊಲೀಸರ ದಾಳಿ

ಕೊರೊನಾ ವೇಳೆ ಸಹಾಯ – ರಾಷ್ಟ್ರೀಯ ಯೂಥ್ ಕಾಂಗ್ರೆಸ್ ಅಧ್ಯಕ್ಷರ ಕಚೇರಿ ಮೇಲೆ ಪೊಲೀಸರ ದಾಳಿ

ನವದೆಹಲಿ: ಕೊರೊನಾ ಸಂಕಷ್ಟ ಕಾಲದಲ್ಲಿ ಕಷ್ಟದಲ್ಲಿದ್ದ ವ್ಯಕ್ತಿಗಳಿಗೆ ಸಹಾಯ ಮಾಡುತ್ತಿದ್ದ ರಾಷ್ಟ್ರೀಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಅವರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇಂದು ಬೆಳಗ್ಗೆ ದೆಹಲಿಯ ರೈಸಿನಾ ರಸ್ತೆಯಲ್ಲಿರುವ ಯೂಥ್ ಕಾಂಗ್ರೆಸ್ ಕಚೇರಿ ಮೇಲೆ ಧಿಡೀರ್ ದಾಳಿ ನಡೆಸಿದ ಪೊಲೀಸರು ಕಚೇರಿ ಪರಿಶೀಲನೆ ನಡೆಸಿ ಶ್ರೀನಿವಾಸ್ ಬಿ.ವಿ ಅವರನ್ನು ವಿಚಾರಣೆ ನಡೆಸಿದ್ದಾರೆ.

ಶ್ರೀನಿವಾಸ್ ಕಳೆದೊಂದು ತಿಂಗಳಿನಿಂದ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಿದ್ದು ಇದಕ್ಕಾಗಿ ಅವರು ವಾರ್ ರೂಂ ರಚಿಸಿಕೊಂಡಿದ್ದಾರೆ. ಆನ್ಲೈನ್ ಮೂಲಕ ಬರುವ ಮನವಿಗಳಿಗೆ ಸ್ಪಂದಿಸಿ ಕೊರತೆಯಲ್ಲಿರುವ ಆಮ್ಲಜನಕ, ರೆಮ್ಡೆಸಿವಿರ್ ಪೂರೈಕೆ ಮಾಡುತ್ತಿದ್ದರು. ಅಲ್ಲದೇ ಬೀದಿ ಬದಿಯ ಜನರಿಗೆ ಊಟೋಪಚಾರ ವಿತರಿಸುತ್ತಿದ್ದರು.

ಕೊರತೆಯಲ್ಲಿರುವ ಆಮ್ಲಜನಕ ಮತ್ತು ರೆಮ್ಡೆಸಿವಿರ್ ವಿತರಣೆಯಿಂದ ಅನುಮಾನಗೊಂಡ ಪೊಲೀಸರು ದಿಢೀರನೆ ಯೂಥ್ ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು ಮತ್ತು ಹಂಚಿಕೆಯಾಗುತ್ತಿರುವ ಆಮ್ಲಜನಕ ಮತ್ತು ರೆಮ್ಡೆಸಿವಿರ್ ಮೂಲದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ವಿಚಾರಣೆ ಬಳಿಕ ಮಾತನಾಡಿದ ಶ್ರೀನಿವಾಸ ಬಿ.ವಿ, ನಮ್ಮಲ್ಲಿ ಮುಚ್ಚಿಡುವಂಥದ್ದು ಏನಿಲ್ಲ, ವಿಚಾರಣೆ ಮಾಡಲಿ ವಿಚಾರಣೆಯಿಂದ ನಮ್ಮಿಂದ ಯಾವ ತಪ್ಪು ಆಗಿಲ್ಲ ಎಂಬುದು ಸಾಬೀತಾಗಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.

ಶ್ರೀನಿವಾಸ್, ಕರ್ನಾಟಕದ ಭದ್ರಾವತಿ ಮೂಲದವರು ಸದ್ಯ ಆಲ್ ಇಂಡಿಯಾ ಯೂಥ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಕಳೆದೊಂದು ತಿಂಗಳಿನಿಂದ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಆಕ್ಸಿಜನ್ ರೆಮ್ಡೆಸಿವಿರ್ ಪೂರೈಕೆ ಮಾಡುವ ಮೂಲಕ ವ್ಯಾಪಕ ಸುದ್ದಿಯಲ್ಲಿದ್ದಾರೆ.

ಗಂಭೀರ್ ಪ್ರತಿಕ್ರಿಯೆ: ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ, ದೆಹಲಿಯ ಸಂಸದ ಗೌತಮ್ ಗಂಭೀರ್ ಪ್ರತಿಕ್ರಿಯಿಸಿ, ಕೆಲ ದಿನಗಳ ಹಿಂದೆ ಕೊರೊನಾ ಸಹಾಯ ಮಾಡುತ್ತಿರುವ ಹಿನ್ನೆಲೆಯಲ್ಲಿ ನಮ್ಮನ್ನು ದೆಹಲಿ ಪೊಲೀಸರು ಪ್ರಶ್ನಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ನಾವು ಪೊಲೀಸರಿಗೆ ವಿವರಣೆ ನೀಡಿದ್ದೆವು. ಆದರೆ ಕಾಂಗ್ರೆಸ್ ಪ್ರಚಾರಕ್ಕಾಗಿ ಈ ದಾಳಿಯನ್ನು ಬಳಸುತ್ತಿದೆ ಎಂದು ಹೇಳಿದ್ದಾರೆ.

Advertisement
Advertisement