Connect with us

Districts

ಗ್ರಾಮಸ್ಥರ ಮನವಿಗೆ ಮೂಕನಾದ ಶಾಸಕ -ಯುವಕರೇ ನಿರ್ಮಿಸಿಕೊಂಡ್ರು ಬಸ್‍ನಿಲ್ದಾಣ

Published

on

ರಾಯಚೂರು: ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಬೇಸತ್ತು ರಾಯಚೂರಿನ ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮಸ್ಥರು ತಾವೇ ಸ್ವತಃ ಬಸ್ ನಿಲ್ದಾಣ ನಿರ್ಮಿಸಿಕೊಂಡಿದ್ದಾರೆ.

ಬಿಸಿಲನಾಡು ರಾಯಚೂರಿನಲ್ಲಿ ಈಗ ಬೆಳಗ್ಗೆ ಹೊತ್ತಲ್ಲೇ ಹೊರಗಡೆ ಓಡಾಡುವುದು ಕಷ್ಟ, ಅಂಥದ್ದರಲ್ಲಿ ಮಲ್ಲದಗುಡ್ಡ ಗ್ರಾಮಸ್ಥರು ಬಿಸಿಲಿನಲ್ಲೇ ಪ್ರತಿದಿನ ಬಸ್‍ಗಾಗಿ ಕಾಯಬೇಕಿದೆ. ನಾಲ್ಕು ವರ್ಷಗಳ ಹಿಂದೆ ಸಿಂಧನೂರು-ಕುಷ್ಟಗಿ ರಸ್ತೆ ಕಾಮಗಾರಿಗಾಗಿ ಬಸ್ ನಿಲ್ದಾಣ ತೆರವುಗೊಳಿಸಲಾಗಿತ್ತು. ಆದರೆ ಇದುವರೆಗೂ ಪುನಃ ಬಸ್ ನಿಲ್ದಾಣ ನಿರ್ಮಿಸಿಲ್ಲ.

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಮಲ್ಲದಗುಡ್ಡ ಗ್ರಾಮದಲ್ಲಿ ಪ್ರತಿಯೊಂದಕ್ಕೂ ಸಮಸ್ಯೆಗಳಿದ್ದು, ಸಾಕಷ್ಟು ಬಾರಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಸೇರಿದಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಗ್ರಾಮಸ್ಥರು ಸುಸ್ತಾಗಿದ್ದಾರೆ. ಆದರೆ ಇದುವರೆಗೂ ಯಾರೂ ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮದ ಸರ್ದಾರ್ ವಲ್ಲಭಬಾಯಿ ಪಟೇಲ್ ಯುವಕರ ಸಂಘ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿಕೊಂಡಿದೆ.

ಯುವಕರು ನಿರ್ಮಿಸಿರುವ ಈ ನಿಲ್ದಾಣ ತಾತ್ಕಾಲಿಕವಾಗಿದ್ದು, ಶಾಶ್ವತ ಪರಿಹಾರ ಬೇಕಿದೆ. ಹೀಗಾಗಿ ಗ್ರಾಮಸ್ಥರು ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದಾರೆ.