Karnataka
13 ವರ್ಷದ ಪ್ರೇಮ್ ಕಹಾನಿ- ಮದುವೆ ದಿನವೇ ಕೈಕೊಟ್ಟ ಪ್ರೇಮಿ

– ಯುವಕನಿಗಾಗಿ ಯುವತಿಯರ ಗ್ಯಾಂಗ್ನಿಂದ ಹುಡುಕಾಟ
ಉಡುಪಿ: ಯುವತಿಯನ್ನು 13 ವರ್ಷ ಪ್ರೀತಿಸಿ ಮದುವೆಯ ದಿನ ಮಂಟಪಕ್ಕೆ ಬಾರದೆ ಕೈಕೊಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.
ಮಣಿಪಾಲದ ಮಮತಾ ಮತ್ತು ಪರ್ಕಳದ ಗಣೇಶ್ ಜೋಡಿಯದ್ದು ದಶಕಗಳ ಕಾಲದ ಪ್ರೇಮ ಕಥೆಯಿದು. ಹ್ಯಾಂಗ್ಯೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ನಡುವೆ 13 ವರ್ಷದ ಹಿಂದೆ ಪ್ರೇಮಾಂಕುರವಾಗಿತ್ತು. ಈ ಅವಧಿಯಲ್ಲಿ ಇಬ್ಬರ ನಡುವೆ ದೈಹಿಕ ಸಂಪರ್ಕ ಸಹ ಬೆಳೆದಿದೆ. ಮದುವೆಯಾಗುವುದಾಗಿ ಯುವಕ ನಂಬಿಸಿ 13 ವರ್ಷಗಳ ಕಾಲ ದಿನಗಳನ್ನು ದೂಡಿದ್ದಾನೆ. ಎರಡು ಬಾರಿ ಅಬಾರ್ಷನ್ ಕೂಡಾ ಮಾಡಿಸಿದ್ದಾನೆ.
ನವೆಂಬರ್ 4ಕ್ಕೆ ಬೇರೆ ಹುಡುಗಿಯನ್ನು ಮದುವೆಯಾಗಲು ಮಹೂರ್ತ ಕೂಡ ಫಿಕ್ಸ್ ಮಾಡಿದ್ದಾನೆ. ಈ ವಿಚಾರ ಪ್ರೀತಿಸಿದ ಮಮತಾಳಿಗೆ ಗೊತ್ತಾಗಿ, ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರ ಮಧ್ಯಪ್ರವೇಶದ ನಂತರ ನವೆಂಬರ್ 6ಕ್ಕೆ ಪ್ರೀತಿಸಿದ ಮಮತಾಳನ್ನೇ ಮದುವೆಯಾಗುವುದಾಗಿ ಗಣೇಶ್ ಒಪ್ಪಿಕೊಂಡಿದ್ದಾನೆ. ಮದುವೆಯ ಸಂಭ್ರಮದಲ್ಲಿ ಯುವತಿಯ ಮನೆಯವರು ಎಲ್ಲ ಶಾಸ್ತ್ರಗಳನ್ನು ಮುಗಿಸಿದ್ದರು.
ಯುವತಿ ಮದರಂಗಿ ಚಿತ್ತಾರ ಮಾಡಿಕೊಂಡು ಮದುವೆ ಮಂಟಪಕ್ಕೆ ಬಂದಿದ್ದಾಳೆ. ಆದರೆ ಯುವಕ ಕೈಕೊಟ್ಟು ಪರಾರಿಯಾಗಿದ್ದಾನೆ. ಆಕಾಶವೇ ಕುಸಿದು ಬಿದ್ದಂತಾದ ಯುವತಿ, ಆಕ್ರೋಶಗೊಂಡು ಯುವಕನ ಮನೆ, ಸಂಬಂಧಿಕರ ಮನೆಯನ್ನೆಲ್ಲ ಪ್ರಿಯಕರನನ್ನು ಜಾಲಾಡಿದ್ದಾಳೆ. ಯುವಕ ಒಂದು ದಿನ ಕಳೆದರೂ ಬರದಿದ್ದಾಗ ಆತನ ಮನೆಯ ಮುಂದೆ ಪ್ರತಿಭಟನೆ ಕೂತಿದ್ದಾಳೆ. ಜೀವನದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾಳೆ.
