Sunday, 19th May 2019

2 ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಮನೆಯ ಪಕ್ಕದಲ್ಲೇ ಶವವಾಗಿ ಪತ್ತೆ

ಬೆಂಗಳೂರು: ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ತಾನು ವಾಸವಿದ್ದ ಮನೆಯ ಹೊರಭಾಗದ ಓಣಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉದಯನಗರದಲ್ಲಿ ಬೆಳಕಿಗೆ ಬಂದಿದೆ.

ಕೆ.ಜಿ.ಎಫ್ ಮೂಲದ ಸುರೇಶ್(24) ಮೃತ ಯುವಕ. ಕಳೆದ ಒಂದೂವರೆ ವರ್ಷದಿಂದ ಉದಯನಗರ ಗಣೇಶ ದೇವಾಲಯ ಹಿಂಭಾಗದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು. ಈತ ಕಲೆಕ್ಟ್ ಮಾಡುತ್ತಿದ್ದ ಫೈನಾನ್ಸ್ ಹಣದ ವ್ಯವಹಾರದಲ್ಲಿ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ತನ್ನ ಮೊಬೈಲ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿದ್ದನು.

ಎರಡು ದಿನಗಳಾದರೂ ಸುರೇಶ್ ಸುಳಿವು ಸಿಗದ ಕಾರಣ ಈತನ ಜೊತೆಯಿದ್ದವರು ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ನಿರ್ಧರಿಸಿದ್ದರು. ಆದರೆ ಅಷ್ಟರಲ್ಲಿ ಗುರುವಾರ ಅಕ್ಕಪಕ್ಕದ ಮನೆಯವರಿಗೆ ಕೊಳೆತ ದೇಹದ ವಾಸನೆ ಬಂದ ಹಿನ್ನೆಲೆಯಲ್ಲಿ ಮನೆಗಳ ಓಣಿಯಲ್ಲಿ ನೋಡಿದಾಗ ಮೃತ ದೇಹ ಕಂಡುಬಂದಿದೆ.

ಈ ಬಗ್ಗೆ ಮಾಹಿತಿ ತಿಳಿದ ಮಹದೇವಪುರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಸ್ಥಳೀಯರ ಸಹಾಯದಿಂದ ಮೃತ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *