Sunday, 16th June 2019

ಚಲಿಸ್ತಿದ್ದ ರೈಲಿನ ಮುಂದೆ ಜಿಗಿದ ಪ್ರೇಮಿಗಳು

ಭುವನೇಶ್ವರ: ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ಅಂಗುಲ್‍ದಲ್ಲಿ ನಡೆದಿದೆ.

ಸಂಬಲ್ಪುರ್-ಅಂಗುಲ್ ಮಾರ್ಗದಲ್ಲಿ ಕುಮುಂಡಾದ ಬಳಿ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ರೈಲ್ವೆ ಟ್ರ್ಯಾಕ್ ಬಳಿ ಜೋಡಿಯ ತುಂಡಾದ ಮೃತದೇಹಗಳನ್ನು ನೋಡಿ ಸ್ಥಳೀಯರು ನಮಗೆ ಮಾಹಿತಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ಯುವಕನನ್ನು ಬಿಭುತಿ ಸಾಹು ಎಂದು ಗುರುತಿಸಲಾಗಿದ್ದು, ಈತ ಬಾನ್ಹಾರ್ಪಾಲ್ ಪ್ರದೇಶದ ನಿವಾಸಿಯಾಗಿದ್ದಾನೆ. ಆದರೆ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಅಕ್ರಮ ಪ್ರೇಮ ಸಂಬಂಧದಿಂದ ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಅಂದರೆ ಅಂಗುಲ್ ಮತ್ತು ಜಿಂದಾಲ್ ನಡುವೆ ಸಂಪರ್ಕ ಕಲ್ಪಿಸುವ ಒಂದು ಸೇತುವೆಯ ಮೇಲೆ ಒಂದು ಬೈಕ್ ಪತ್ತೆಯಾಗಿದೆ. ಹೀಗಾಗಿ ಮೃತರು ಸೇತುವೆಯಿಂದ ಬಂದ ನಂತರ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿದ್ದು, ಈ ಕುರಿತು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *