Wednesday, 26th June 2019

Recent News

ಕಾಶ್ಮೀರದಲ್ಲಿ ಮದುವೆ ಮನೆಯಿಂದ ಕಿಡ್ನ್ಯಾಪ್ ಆಗಿದ್ದ ಯುವ ಸೈನ್ಯಾಧಿಕಾರಿ ಶವವಾಗಿ ಪತ್ತೆ!

ಶ್ರೀನಗರ: ಸಂಬಂಧಿಕರ ಮದುವೆ ಮನೆಯಿಂದ ಕಿಡ್ನ್ಯಾಪ್ ಆಗಿದ್ದ ಯುವ ಸೈನ್ಯಾಧಿಕಾರಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

ಶೋಪಿಯಾನ್ ಜಿಲ್ಲೆಯ ಹರ್ವೆನ್ ಪ್ರದೇಶದಲ್ಲಿ ಇಂದು ಬೆಳಗ್ಗೆ 22 ವರ್ಷದ ಉಮ್ಮರ್ ಫಯಾಜ್ ಶವ ಪತ್ತೆಯಾಗಿದ್ದು, ದೇಹದೊಳಗೆ ಗುಂಡು ಹೊಕ್ಕಿರುವುದು ಕಂಡು ಬಂದಿದೆ.

ನಡೆದಿದ್ದೇನು?: ದಕ್ಷಿಣ ಕಾಶ್ಮೀರದ ಕುಲ್ಗಾನ್ ಗ್ರಾಮದ ನಿವಾಸಿಯಾಗಿರೋ ಉಮ್ಮರ್, ಸಂಬಂಧಿಕರ ಮದುವೆ ಇದೆ ಎಂದು ತನ್ನ ಕೆಲಸಕ್ಕೆ ರಜೆ ಹಾಕಿ ತೆರಳಿದ್ದರು. ಅಂತೆಯೇ ಮಂಗಳವಾರ ಸಂಜೆ ಮದುವೆಗೆ ತೆರಳಿದ್ದ ಅವರನ್ನು ಅಂದು ರಾತ್ರಿ 10 ಗಂಟೆ ಸುಮಾರಿಗೆ ಅಪಹರಿಸಲಾಗಿತ್ತು.

ಸೈನ್ಯಾಧಿಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಚಾರ ತಿಳಿದ ಮೂವರು ಉಗ್ರರು, ಉಮ್ಮರ್ ಇದ್ದ ಸ್ಥಳಕ್ಕೆ ಗನ್‍ಗಳೊಂದಿಗೆ ಬಂದು ಮನೆಯಿಂದ ಹೊರಗೆಳೆದು ಬಳಿಕ ಅಲ್ಲಿಂದ ಅಪಹರಿಸಿದ್ದಾರೆ ಅಂತಾ ಸಂಬಂಧಿಕರು ತಿಳಿಸಿದ್ದಾರೆ.

ಉಮ್ಮರ್ ಅಪಹರಣದಿಂದ ಆತಂಕಕ್ಕೀಡಾಗಿರೋ ಸಂಬಂಧಿಕರು ಜೀವಂತವಾಗಿ ಹಿಂದುರುಗಿ ಬರುತ್ತಾರೆ ಅಂತಾ ನಂಬಿದ್ದರು. ಈ ಬಗ್ಗೆ ಭಯದಿಂದಲೇ ಹೇಳಿಕೆ ನೀಡಿದ್ದರು. ಆದ್ರೆ ಇಂದು ಬೆಳಗ್ಗೆ ಉಮ್ಮರ್ ಶವವಾಗಿ ಪತ್ತೆಯಾಗಿದ್ದಾರೆ ಅಂದಾಗ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಲೆಫ್ಟಿನೆಂಟ್ ದರ್ಜೆಯ ಅಧಿಕಾರಿ ಉಮರ್ ಫಯಾಜ್ 6 ತಿಂಗಳ ಹಿಂದಷ್ಟೇ ಸೇನೆಗೆ ಸೇರ್ಪಡೆಯಾಗಿದ್ದರು. ಅಲ್ಲದೇ ಇವರು ಉತ್ತಮ ವಾಲಿಬಾಲ್ ಹಾಗೂ ಹಾಕಿ ಆಟಗಾರರೂ ಕೂಡ ಆಗಿದ್ದರು. ಪುಲ್ವಾಮಾ, ಶೋಪಿಯಾನ, ಅನಂತ್ನಾಗ್ ಹಾಗೂ ಕುಲ್ಗಾಮ್ ಪ್ರದೇಶದಲ್ಲಿ ಉಗ್ರರ ಉಪಟಳವಿದೆ. ಇದರಿಂದ ತನಗೆ ಅಪಾಯವಿದೆ ಅಂತಾ ಗೊತ್ತಿದ್ದರೂ ಫಾರೂಕ್ ಯಾವುದೇ ಶಸ್ತ್ರಾಸ್ತ್ರಗಳಿಲ್ಲದೇ ಮದುವೆ ಮನೆಗೆ ತೆರಳಿರುವುದರಿಂದ ಈ ಘಟನೆ ಸಂಭವಿಸಿದೆ ಅಂತಾ ಮೂಲಗಳು ತಿಳಿಸಿವೆ.

ಸೇನಾ ಪಡೆಗಳು ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಫಾರೂಕ್ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಯಾವೊಬ್ಬ ಅಧಿಕಾರಿಯೂ ಉಗ್ರರ ಉಪಟಳ ತೀವ್ರವಾಗಿರುವ ಪ್ರದೇಶಗಳ ಸಂಬಂಧಿಕರ ಮನೆಗಳಿಗೆ ಭೇಟಿ ನೀಡಬಾರದು ಎಂದು ರಾಜ್ಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *