Saturday, 22nd February 2020

Recent News

ಹೊಸ ವರ್ಷಕ್ಕೆ ಕುರಿಗಾಯಿ ಹನುಮಂತನಿಗೆ ಬಂಪರ್ ಲಾಟರಿ!

ಬೆಂಗಳೂರು: ಸರಿಗಮಪ ಸಂಗೀತ ಕಾರ್ಯಕ್ರಮದ ಮೂಲಕ ಕರುನಾಡಿನಲ್ಲಿ ಗಾಯಕ ಹನುಮಂತ ಚಿರಪರಿಚಿತರಾಗಿದ್ದಾರೆ. ಮೊದಲ ಹಾಡಿನಿಂದ ಈವರೆಗೂ ಹನುಮಂತ ಹಾಡುವ ಪರಿ ನೋಡಿದರೆ ಸಾಕಷ್ಟು ಬದಲಾಗಿರುವುದು ಗಮನಕ್ಕೆ ಬರುತ್ತದೆ. ಈಗ ಹೊಸ ವರ್ಷದ ಪ್ರಯುಕ್ತ ಹನುಮಂತನಿಗೆ ಬಂಪರ್ ಆಫರ್ ಬಂದಿದೆ.

ಹೊಸ ವರ್ಷ ಆರಂಭವಾಗುವ ಹೊಸ್ತಿಲಲ್ಲಿ ಹನುಮಂತನ ಪಾಲಿನ ಅದೃಷ್ಟದ ಬಾಗಿಲು ತೆರೆದಿದೆ. ಸಿನಿಮಾ ಸಂಗೀತಕ್ಕೆ ಹಿನ್ನೆಲೆ ಗಾಯಕನಾಗುವ ಅವಕಾಶ ಸಿಕ್ಕಿದೆ. ಈಗಾಗಲೇ ಅನೇಕರು ಹನುಮಂತ ಸರಿಗಮಪ ಸಂಗೀತ ಕಾರ್ಯಕ್ರಮದಲ್ಲಿ ಪಳಗಿದ ಬಳಿಕ ಸಿನಿಮಾದಲ್ಲಿ ಹಾಡಿಸುವುದಕ್ಕೆ ಪ್ಲಾನ್ ಮಾಡಿದ್ದಾರೆ. ಆದರೆ ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ರು ಮಾತ್ರ ಹನುಮಂತನಿಗೆ ಹೊಸ ವರ್ಷಕ್ಕೆ ಪಾರಿತೋಷಕ ನೀಡಿದ್ದಾರೆ.

ಇದುವರೆಗೆ ಸರಿಗಮಪ ವೇದಿಕೆಯಲ್ಲಿ ಹಾಡುತ್ತಿದ್ದ ಹನುಮಂತನ ಬಗ್ಗೆ ನಿರ್ದೇಶಕ ಕಮ್ ಸಾಹಿತಿ ಯೋಗರಾಜ್ ಭಟ್ರು ಕೇಳಿದ್ದರು. ಆದರೆ ನೇರವಾಗಿ ಹನುಮಂತ ಹಾಡೋದನ್ನ ನೋಡಿರಲಿಲ್ಲ. ಈ ವಾರ ಪ್ರಸಾರವಾದ ಸರಿಗಮಪ ಕಾರ್ಯಕ್ರಮದಲ್ಲಿ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಅತಿಥಿಗಳ ಮುಂದೆ ಅಲ್ಲಾಡ್ಸು ಅಲ್ಲಾಡ್ಸು ಹಾಡು ಹೇಳಿ ಹನುಮಂತ ರಂಜಿಸಿದ್ದರು.

ಹನುಮಂತ ಹಾಡಿನ ಸೊಬಗಿಗೆ ಭಟ್ರು ಫಿದಾ ಆಗಿದ್ದು, ಕೂಡಲೇ ತಮ್ಮ ಜಿಲ್ಲೆಯ ಹಳ್ಳಿಯ ಪ್ರತಿಭೆಯನ್ನ ಸಿನಿಮಾದಲ್ಲಿ ಬೆಳೆಸುವುದಕ್ಕೆ ಮುಂದಾಗಿದ್ದು, ಮುಂದಿನ ಸಿನಿಮಾದಲ್ಲಿ ಹನುಮಂತನಿಗೆ ಅವಕಾಶ ಕೊಡುವುದಾಗಿ ಭಟ್ರು ಹೇಳಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಸಿನಿಮಾಗೆ ಸರಿಗಮಪ ವೇದಿಕೆಯಲ್ಲೇ ಆಹ್ವಾನ ನೀಡಿದ್ದಾರೆ.

ಯೋಗರಾಜ್ ಭಟ್ರೂ ಕೂಡ ಮೂಲತಃ ಹಾವೇರಿ ಜಿಲ್ಲೆಯವರಾಗಿದ್ದಾರೆ. ಯೋಗರಾಜ್ ಭಟ್ರರಿಗೆ ಸಂಗೀತ ಅಂದರೆ ದೇವರ ಸಮಾನ. ಆದ್ದರಿಂದ ಸಂಗೀತ ಪ್ರಿಯರನ್ನ ಗೌರವಿಸುವ ಭಟ್ರು ಹನುಮಂತನ ಕಂಠಕ್ಕೆ ಸೂಕ್ತ ಬಹುಮಾನ ಕೊಡುವುದಕ್ಕೆ ಮನಸ್ಸು ಮಾಡಿದ್ದಾರೆ. ಭಟ್ರು ಹನುಮಂತ ಹಾಡುವುದಕ್ಕೆ ಸುಲಭವಾಗುವ ಪದದಲ್ಲಿ ತಾವೇ ಸಾಹಿತ್ಯ ಬರೆಯೋಕೆ ಸಿದ್ಧರಾಗಿದ್ದಾರೆ. ಸರಿಗಮಪ ಕಾರ್ಯಕ್ರಮದ ಜಡ್ಜ್ ಆಗಿರುವ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿಬರಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *