Friday, 21st February 2020

ಯಶ್ ಲಾಂಚ್ ಮಾಡಿದ ಕಿಸ್ ಟ್ರೈಲರ್ ಮಸ್ತಾಗಿದೆ!

ಬೆಂಗಳೂರು: ವಿರಾಟ್ ಮತ್ತು ಶ್ರೀಲೀಲಾ ನಾಯಕ ನಾಯಕಿಯರಾಗಿ ನಟಿಸಿರುವ ಕಿಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ರಾಕಿಂಗ್ ಸ್ಟಾರ್ ಯಶ್ ಈ ಟ್ರೈಲರ್ ಅನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹೀಗೆ ಹೊರ ಬಂದಿರೋ ಈ ಟ್ರೈಲರ್‍ಗೆ ಸಿಗುತ್ತಿರೋ ಪ್ರತಿಕ್ರಿಯೆ ಕೂಡಾ ಭರ್ಜರಿಯಾಗಿಯೇ ಇದೆ. ಇದುವೇ ಕಿಸ್‍ಗಾಗಿ ಜನ ಅದೆಷ್ಟು ಕಾತರರಾಗಿ ಕಾಯುತ್ತಿದ್ದಾರೆಂಬುದನ್ನೂ ಧ್ವನಿಸುವಂತಿದೆ. ಇದಕ್ಕೆ ಬರುತ್ತಿರೋ ಬಹುತೇಕ ಪ್ರತಿಕ್ರಿಯೆಗಳಲ್ಲಿ ಅಂಥಾದ್ದೇ ಕಾತರ ಎದ್ದು ಕಾಣಿಸುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಚಿತ್ರದ ಬ್ಯುಸಿಯ ನಡುವೆಯೂ ಪ್ರೀತಿಯಿಂದ ಈ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಅದು ಮೂಡಿ ಬಂದಿರೋ ರೀತಿಯನ್ನು ಮೆಚ್ಚಿಕೊಳ್ಳುತ್ತಲೇ ಭರವಸೆಯ ಮಾತುಗಳನ್ನಾಡಿದ್ದಾರೆ. ವರ್ಷಾಂತರಗಳಿಂದ ಪರಿಶ್ರಮವಹಿಸಿ ಈ ಸಿನಿಮಾವನ್ನು ಅಚ್ಚುಕಟ್ಟಾಗಿ ರೂಪಿಸಿರೋ ನಿರ್ದೇಶಕ ಎ.ಪಿ ಅರ್ಜುನ್ ಮತ್ತು ಇಡೀ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಗೆಲುವು ಸಿಗಲೆಂದು ಹಾರೈಸಿದ್ದಾರೆ.

ಹೀಗೆ ಯಶ್ ಕಡೆಯಿಂದ ಬಿಡುಗಡೆಗೊಂಡಿರೋ ಈ ಟ್ರೈಲರ್ ನಿಜಕ್ಕೂ ರೊಮ್ಯಾಂಟಿಕ್ ಆಗಿದೆ. ಪ್ರೇಮಕಾವ್ಯಗಳನ್ನು ಸೃಷ್ಟಿಸೋದರಲ್ಲಿ ಸಿದ್ಧಹಸ್ತರಾಗಿರೋ ಎ.ಪಿ ಅರ್ಜುನ್ ಇಂದಿನ ಜನರೇಷನ್ನಿಗೆ ಹತ್ತಿರಾದ ಕಥೆಯೊಂದನ್ನು ಎತ್ತಿಕೊಂಡಿರೋದೂ ಸ್ಪಷ್ಟವಾಗಿದೆ. ಹಾಗಂತ ಈ ಸಿನಿಮಾದಲ್ಲಿ ಬರೀ ಪ್ರೇಮಕಥೆಯೇ ಇದೆಯೆಂಬ ಭಾವಕ್ಕೆ ಈ ಟ್ರೈಲರ್ ನಲ್ಲಿಯೇ ಮತ್ತೊಂದು ಆಯಾಮದ ಹೊಳಪನ್ನೂ ನೀಡಲಾಗಿದೆ. ಲವರ್ ಬಾಯ್ ಆಗಿ ನಟಿಸಿರೋ ವಿರಾಟ್ ಇಲ್ಲಿ ಮಾಸ್ ಲುಕ್ಕಿನಲ್ಲಿಯೂ ಕಂಗೊಳಿಸಿದ್ದಾರೆ. ಅದಕ್ಕೆ ಪೂರಕವಾಗಿ ಪ್ರೀತಿಯ ಜೊತೆ ಜೊತೆಗೇ ಬೇರೊಂದು ಥರದ ಕಥೆಯೇ ಇದರಲ್ಲಿದೆಯಂತೆ.

ಅದರ ಸ್ಪಷ್ಟ ಸೂಚನೆ ಈ ಟ್ರೈಲರ್ ನಲ್ಲಿದೆ. ಅದುವೇ ಕಿಸ್ ಎಷ್ಟು ರಿಚ್ ಆಗಿ ಮೂಡಿ ಬಂದಿದೆ ಅನ್ನೋದನ್ನೂ ಪ್ರೇಕ್ಷಕರಿಗೆ ತಲುಪಿಸಿದೆ. ಬಿಡುಗಡೆಯಾಗಿ ಗಂಟೆ ಕಳೆಯೋದರೊಳಗಾಗಿಯೇ ಈ ಟ್ರೈಲರ್ ವೀಕ್ಷಣೆಯ ಸಂಖ್ಯೆ ಲಕ್ಷದ ಗಡಿಯತ್ತ ಸಾಗುತ್ತಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ಮತ್ತು ಬೇಗನೆ ಬಿಡುಗಡೆ ಮಾಡಿ ಎಂಬಂಥಾ ಒತ್ತಾಯಗಳೂ ಕೇಳಿ ಬರಲಾರಂಭಿಸಿವೆ.

Leave a Reply

Your email address will not be published. Required fields are marked *