Connect with us

Crime

ಕಲಾವಿದನಿಗೆ ಅಧಿಕಾರಿಗಳಿಂದ ಕಿರುಕುಳ- ಮನನೊಂದು ಮಗಳು ಆತ್ಮಹತ್ಯೆಗೆ ಶರಣು

Published

on

ಯಾದಗಿರಿ: ತಂದೆಗೆ ಬಂದ ಜೀವ ಬೆದರಿಕೆ ಹಿನ್ನೆಲೆ ಮನನೊಂದು ಮಗಳು ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ನಗರದ ಸಮೀಪದಲ್ಲಿ ನಡೆದಿದೆ.

ನಗರದ ಹಗಲು ವೇಷ ಕಲಾವಿದ ಶಂಕರಶಾಸ್ತ್ರಿ ಮಗಳು ಭವಾನಿ (20) ಆತ್ಮಹತ್ಯೆಗೆ ಶರಣಾದ ಯುವತಿ. ಇತ್ತೀಚೆಗೆ ಕಲಾವಿದ ಶಂಕರ ಶಾಸ್ತ್ರಿಗೆ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ದತ್ತಪ್ಪ ಸಾಗನೂರ ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಸಹ ಪ್ರಸಾರವಾಗಿತ್ತು.

ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಸಿಟಿ ರವಿ ಅವರು ಅಲ್ಲದೆ ಕಳೆದ ವಾರವಷ್ಟೇ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಶಂಕರ ಶಾಸ್ತ್ರಿ ಮತ್ತು ಭವಾನಿ ಕುಟುಂಬ ಸಮೇತ ಹಗಲು ವೇಶ ತೊಟ್ಟು ಸಚಿವರನ್ನು ಭೇಟಿಯಾಗಿ, ದತ್ತಪ್ಪ ಸಾಗನೂರ ಅವರು ಅವಾಚ್ಯ ಪದಗಳಿಂದ ಬೈಯುತ್ತಾರೆ. ಕಾಲು ಕಡಿಯುತ್ತೇನೆ, ನಿನ್ನ ಕೊಲೆ ಮಾಡಿಸುತ್ತೇನೆ ಅಂತ ಜೀವ ಬೆದರಿಕೆ ಹಾಕಿದ್ದಾರೆ. ಅಂತಹ ಅಧಿಕಾರಿಗಳು ನಮಗೆ ಬೇಕಾಗಿಲ್ಲ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಶಂಕರಶಾಸ್ತ್ರಿ ದೂರು ನೀಡಿದ್ದರು.

ಸಚಿವ ಸಿ.ಟಿ.ರವಿ ಅವರು ತಮ್ಮ ಇಲಾಖೆಯ ಅಧಿಕಾರಿ ದತ್ತಪ್ಪ ಸಾಗನೂರ ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಯಾವುದೇ ಕ್ರಮಕೈಗೊಂಡಿರಲಿಲ್ಲ. ಸಚಿವರು ಅಧಿಕಾರಿ ಮೇಲೆ ಯಾವುದೇ ಕ್ರಮ ಜರುಗಿಸಿದ ಹಿನ್ನೆಲೆ ಮತ್ತು ವೈವಾಹಿಕ ಜೀವನದಲ್ಲಿ ಸಹ ಕೆಲ ಸಮಸ್ಯೆಗಳಿಂದ ಭವಾನಿ ಕಳೆದ ಒಂದು ತಿಂಗಳಿಂದ ಮಾನಸಿಕವಾಗಿ ಖಿನ್ನರಾಗಿದ್ದರು ಎನ್ನಲಾಗಿದೆ.

ಪೋಷಕರು, ಕುಟುಂಬಸ್ಥರು ಭವಾನಿಗೆ ಧೈರ್ಯ ಹೇಳುತ್ತಲ್ಲೇ ಬಂದಿದ್ದರು. ಇಂದು ಕೂಡ ಧೈರ್ಯ ಕಳೆದುಕೊಳ್ಳಂತೆ ತಿಳಿಸಿದ್ದರು. ಆದರೆ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ನಗರದಿಂದ ದೂರವಿರುವ ಭೀಮಾನದಿಗೆ ಬಂದು, ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಭವಾನಿ ತಾಯಿ ಸಹ ತೀವ್ರ ಅಸ್ವವ್ಯಸ್ತವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭವಾನಿ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮೃತ ದೇಹ ಪತ್ತೆಗೆ ತಾಂತ್ರಿಕ ತೊಡಕು ಉಂಟಾಗಿದೆ. ಹೀಗಾಗಿ ಭವಾನಿ ಮೃತದೇಹ ಪತ್ತೆಗಾಗಿ ಅಗ್ನಿಶಾಮಕ ದಳವು ಗುರುವಾರ ಬೆಳಗ್ಗೆಯಿಂದ ಕಾರ್ಯಚರಣೆ ಆರಂಭಿಸಲಿದೆ.