Connect with us

Districts

ನೆರೆ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ-ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ

Published

on

ಯಾದಗಿರಿ: ನೆರೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ಸ್ಥಳೀಯ ರಾಜಕೀಯ ಮುಖಂಡರೊಂದಿಗೆ ಸೇರಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಭಾರೀ ಮಳೆಯಿಂದಾಗಿ ತತ್ತರಿಸಿದ್ದ ಜನ ಈಗ ತಾನೇ ಸುಧಾರಿಸಿಕೊಳ್ಳುತ್ತಿದ್ದಾರೆ. ಆದರೆ ಯಾದಗಿರಿಯಲ್ಲಿ ಪ್ರವಾಹ ಕಡಿಮೆಯಾದರೂ ಕೆಲ ಗ್ರಾಮಗಳ ಸಂತ್ರಸ್ತರ ಪಾಲಿಗೆ ಸ್ಥಳೀಯ ರಾಜಕೀಯವೇ ಮುಳುವಾಗಿದ್ದು, ಗಾಯದ ಮೇಲೆ ಬರೆ ಎಳೆದಂತಹ ಪರಿಸ್ಥಿತಿ ಗ್ರಾಮಸ್ಥರದ್ದಾಗಿದೆ.

ಉತ್ತರ ಕರ್ನಾಟಕ ರಣಭೀಕರ ಪ್ರವಾಹದಿಂದ ಇನ್ನೂ ಹೊರ ಬರಲಾಗುತ್ತಿಲ್ಲ. ನೆರೆ ನಿಂತರು ಅದರಿಂದ ಆಗಿರುವ ಅನಾಹುತದ ನೆರಳು ಜನರನ್ನು ಇನ್ನು ಆವರಿಸಿಕೊಂಡಿದೆ. ಯಾದಗಿರಿ ಜಿಲ್ಲೆಯ ನದಿ ಪಾತ್ರದ ಗ್ರಾಮಗಳದ್ದೂ ಅದೇ ಪರಿಸ್ಥಿತಿ ಇತ್ತು. ಒಂದೇ ತಿಂಗಳ ಅಂತರದಲ್ಲಿ ಸುಮಾರು ಮೂರು ಬಾರಿ ಪ್ರವಾಹ ಉಂಟಾಗಿ, ಜಿಲ್ಲೆಯ ಗೌಡೂರು, ಯಕ್ಷಚಿಂತಿ, ಕೊಳ್ಳೂರು, ನೀಲಕಂಠರಾಯನ ಗಡ್ಡಿ ಗ್ರಾಮಸ್ಥರ ಬದುಕು ಹೇಳತೀರದಾಗಿದೆ.

ಜನ ಇಷ್ಟೆಲ್ಲಾ ಅನುಭವಿಸುತ್ತಿದ್ದರೆ, ರಾಜಕಾರಣಿಗಳು ಜಿಲ್ಲೆಗೆ ಸಾಕಷ್ಟು ಪರಿಹಾರ ನೀಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ವಿಪರ್ಯಾಸವೆಂದರೆ ಜಿಲ್ಲೆಯ ಗೌಡೂರು ಗ್ರಾಮದ ಕೆಲ ಗ್ರಾಮಸ್ಥರಿಗೆ ಪರಿಹಾರ ಇರಲಿ ಮಾನವೀಯತೆಗಾಗಿ ಯಾವ ಅಧಿಕಾರಿಯೂ ಧೈರ್ಯ ತುಂಬಿಲ್ಲ. ಕೇವಲ ಕಾಟಾಚಾರಕ್ಕೆ ನೆರೆ ವೀಕ್ಷಣೆ ಮಾಡಿ ವರದಿ ತಯಾರಿಸಿದ್ದಾರೆ. ಇದರ ನಡುವೆ ಗ್ರಾಮದ ಕೆಲ ಮುಖಂಡರು ಅರ್ಹ ಸಂತ್ರಸ್ತರನ್ನು ಬಿಟ್ಟು ಅನರ್ಹ ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಾಗಿದ್ದು, ಇದಕ್ಕೆ ಸ್ಥಳೀಯ ಮಟ್ಟದ ಅಧಿಕಾರಿಗಳೂ ಕುಮ್ಮಕ್ಕು ನೀಡುತ್ತಿದ್ದಾರೆ. ಒಂದೇ ವಾರ್ಡ್ ನಲ್ಲಿ ಒಂದು ಮನೆಗೆ ಪರಿಹಾರ ಕೊಟ್ಟು ಮತ್ತೊಂದು ಮನೆಗೆ ಕೊಡದಿರುವುದು ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಮುನ್ಸೂಚನೆ ಇಲ್ಲದೆ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ನದಿಯ ಕೂಗಳತೆಯಲ್ಲಿ ಗೌಡೂರು ಗ್ರಾಮ ಇರುವುದರಿಂದ ಇಲ್ಲಿನ ಗ್ರಾಮಸ್ಥರು ಯಾವ ಸಮಯದಲ್ಲಿ ನೀರು ನುಗ್ಗುತ್ತೆ ಅನ್ನೋ ಭಯದಲ್ಲೇ ರಾತ್ರಿ ಕಳೆಯುತ್ತಿದ್ದಾರೆ. ಸದ್ಯ ಪ್ರವಾಹ ತಗ್ಗಿದ್ದು, ಸೊಳ್ಳೆ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳು ಸೃಷ್ಠಿಯಾಗುತ್ತಿವೆ. ಇದು ಸಹ ಗ್ರಾಮಸ್ಥರ ಆತಂಕವನ್ನು ಹೆಚ್ಚಿಸಿದೆ. ಅಲ್ಲದೆ ನದಿಯ ಅಂಚಿನಲ್ಲಿ ಇರುವುದರಿಂದ ಗ್ರಾಮವನ್ನು ಸ್ಥಳಾಂತರ ಮಾಡಬೇಕು ಅನ್ನೋದು ಇಲ್ಲಿನ ಗ್ರಾಮಸ್ಥರ ಬಹುದಿನದ ಬೇಡಿಕೆ. ಈ ಬಗ್ಗೆ ಜಿಲ್ಲಾಡಳಿತ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಒಟ್ಟಿನಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ ಗೌಡೂರು ಗ್ರಾಮದ ಜನರ ಬದುಕು ಕೊಚ್ಚಿಹೋಗುತ್ತಿದೆ. ಮತ್ತೊಂದು ಕಡೆ ನಮ್ಮವರೇ ನಮಗೆ ವೈರಿ ಎನ್ನುವಂತೆ, ಗ್ರಾಮದ ಕೆಲ ಅಮಾನವೀಯ ಮುಖಂಡರ ಸ್ಥಳೀಯ ರಾಜಕೀಯ, ಇಲ್ಲಿನ ಸಂತ್ರಸ್ತರನ್ನು ನರಳುವಂತೆ ಮಾಡಿದೆ.