Sunday, 19th May 2019

ಯಾರಿಗೆ ಯಾರುಂಟು: ಸಿಗೋದು ಪಕ್ಕಾ ಗೆಲುವಿನ ನಂಟು!

ಬೆಂಗಳೂರು: ರಘುನಾಥ್ ನಿರ್ಮಾಣದ ಯಾರಿಗೆ ಯಾರುಂಟು ಚಿತ್ರದ ಮೆಲೋಡಿ ಹಾಡುಗಳ ಮಾಯೆಗೆ ತಲೆದೂಗದವರೇ ಇಲ್ಲ. ಚಿತ್ರರಂಗದ ನಟ ನಟಿಯರನೇಕರು ಈ ಹಾಡುಗಳನ್ನು ಮೆಚ್ಚಿಕೊಂಡು, ಮನಸಾರೆ ಹೊಗಳುತ್ತಿದ್ದಾರೆ. ಅತ್ತ ಪ್ರೇಕ್ಷಕರ ವಲಯದಲ್ಲಿಯೂ ಕೂಡಾ ಇಂಥಾದ್ದೇ ವಾತಾವರಣವಿದೆ. ಎಲ್ಲರ ಬಾಯಲ್ಲಿಯೂ ಗುನುಗುನಿಸುತ್ತಿರೋ ಹಾಡುಗಳೇ ಇಷ್ಟು ಚೆನ್ನಾಗಿರೋದರಿಂದ ಇಡೀ ಸಿನಿಮಾ ಹೇಗಿರಬಹುದೆಂಬ ಕುತೂಹಲವಂತೂ ಸರ್ವವ್ಯಾಪಿಯಾಗಿ ಬಿಟ್ಟಿದೆ.

ಅದೆಲ್ಲದಕ್ಕೂ ಇನ್ನೊಂದು ವಾರದಲ್ಲಿ ಖಂಡಿತಾ ಉತ್ತರ ಸಿಗಲಿದೆ. ಯಾಕೆಂದರೆ ಯಾರಿಗೆ ಯಾರುಂಟು ಚಿತ್ರ ಇದೇ ಫೆಬ್ರವರಿ 22ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಒರಟ ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಅಭಿಮಾನಿ ಬಳಗ ಸಂಪಾದಿಸಿಕೊಂಡಿದ್ದ ಪ್ರಶಾಂತ್ ಪಾಲಿಗೆ ಈ ಸಿನಿಮಾ ಮೂಲಕ ಮತ್ತೆ ಭರ್ಜರಿ ಓಪನಿಂಗ್ ಸಿಗೋ ಲಕ್ಷಣ ಸ್ಪಷ್ಟವಾಗಿದೆ. ನಾಯಕಿಯರಲ್ಲೊಬ್ಬರಾದ ಕೃತಿಕಾ ರವೀಂದ್ರ ಪಾಲಿಗೂ ಈ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲೊಂದು ಬ್ರೇಕ್ ಸಿಗೋ ಸೂಚನೆಗಳಿವೆ. ಲೇಖಾ ಚಂದ್ರ ಮತ್ತು ಅದಿತಿ ಪಾಲಿಗೂ ಅಂಥಾದ್ದೊಂದು ಭರವಸೆ ಇದೆ.

ಬಿಡುಗಡೆಗೂ ಮುನ್ನವೇ ಇಂಥಾದ್ದೊಂದು ಭರವಸೆ ಮೂಡಿಕೊಂಡಿರೋದಕ್ಕೆ ಮೂಲ ಕಾರಣ ವಿಶಿಷ್ಟವಾದ ಟ್ರೈಲರ್, ಟೀಸರ್ ಮತ್ತು ಚೆಂದದ ಹಾಡುಗಳು ಜನರನ್ನು ತಲುಪಿಕೊಂಡಿರೋ ರೀತಿ. ಈ ಚಿತ್ರದ ಹಾಡುಗಳ ಬಗ್ಗೆ ಕನ್ನಡ ಚಿತ್ರರಂಗದ ಹಲವಾರು ನಟನಟಿಯರು ಭರವಸೆಯ ಮಾತಾಡಿದ್ದಾರೆ. ಬಿ.ಜೆ.ಭರತ್ ಈ ಮೂಲಕವೇ ಮತ್ತೆ ಮುಂಚೂಣಿಯಲ್ಲಿ ಮಿನುಗುತ್ತಿದ್ದಾರೆ. ಧ್ರುವ ಸರ್ಜಾ ಅವರಿಂದ ಆರಂಭವಾಗಿ ನಟ ನವೀನ್ ಕೃಷ್ಣ, ಅರು ಗೌಡ, ನಿರ್ದೇಶಕ ನಂದ ಕಿಶೋರ್, ದಯಾಳ್ ಪದ್ಮನಾಭನ್, ನಟಿ ಅನಿತಾ ಭಟ್, ಪ್ರಥಮ್ ಸೇರಿದಂತೆ ಎಲ್ಲ ವಿಭಾಗದವರೂ ಕೂಡಾ ಯಾರಿಗೆ ಯಾರುಂಟು ಚಿತ್ರ ಮ್ಯೂಸಿಕಲ್ ಹಿಟ್ ಆಗುತ್ತದೆ ಅನ್ನೋ ಭವಿಷ್ಯ ನುಡಿದಿದ್ದಾರೆ.

ಇಂಥಾ ಪಾಸಿಟಿವ್ ಅಲೆಯ ನಡುವೆಯೇ ಕಿರಣ್ ಗೋವಿ ನಿರ್ದೇಶನದ ಯಾರಿಗೆ ಯಾರುಂಟು ಚಿತ್ರ ಮುಂದಿನ ವಾರ ಅದ್ಧೂರಿಯಾಗಿ ತೆರೆ ಕಾಣಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *