Connect with us

Latest

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಫೋನ್ ಯಾವುದು? ಟಾಪ್ 5 ಕಂಪೆನಿಗಳು ಯಾವುದು?

Published

on

ನವದೆಹಲಿ: ಚೀನಾದ ಕ್ಸಿಯೋಮಿ ಕಂಪೆನಿಯ ರೆಡ್‍ಮೀ ನೋಟ್4 ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಟರ್‍ನ್ಯಾಷನಲ್ ಡೇಟಾ ಕಾರ್ಪೋರೇಷನ್(ಐಡಿಸಿ) ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಫೋನ್ ಮಾರಾಟ ಮಾಡಿರುವ ಟಾಪ್5 ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ 2016ರ ಕೊನೆಯ ತ್ರೈಮಾಸಿಕದಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದ ಸ್ಯಾಮ್‍ಸಂಗ್ ಗೆಲಾಕ್ಸಿ ಜೆ2 ಹಿಂದಿಕ್ಕಿ ರೆಡ್‍ಮೀ ನೋಟ್ 4 ಫೋನ್ ಅತಿ ಹೆಚ್ಚು ಮಾರಾಟವಾಗಿದೆ ಎಂದು ತಿಳಿಸಿದೆ.

ವರದಿಯಲ್ಲಿ ಏನಿದೆ?
ಈ ಅವಧಿಯಲ್ಲಿ ಒಟ್ಟು 2.7 ಕೋಟಿ ಫೋನ್ ಗಳು ಭಾರತದಲ್ಲಿ ಮಾರಾಟವಾಗಿದ್ದು, 2016ರ ಈ ಅವಧಿಗೆ ಹೋಲಿಸಿದರೆ ಶೇ.14.8ರಷ್ಟು ಬೆಳವಣಿಗೆಯಾಗಿದೆ. ಅದರಲ್ಲೂ ಚೀನಾ ಮೂಲದ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದ್ದು, ಮಾರುಕಟ್ಟೆಯಲ್ಲಿ ಅತ್ಯಧಿಕ ಪಾಲನ್ನು ಪಡೆದುಕೊಂಡಿದೆ.

ಮಾರಾಟವಾದ ಫೋನ್ ಗಳಲ್ಲಿ ಶೇ.51ರಷ್ಟು ಫೋನ್ ಗಳು ಚೈನಾ ಕಂಪೆನಿಗಳದ್ದೇ ಆಗಿದ್ದು, 2016ರಕ್ಕೆ ಹೋಲಿಸಿದರೆ ಶೇ.142.6 ಪ್ರಗತಿ ಸಾಧಿಸಿದೆ. 2016ರ ಇದೇ ಅವಧಿಯಲ್ಲಿ ಶೇ.40.5 ಪಾಲನ್ನು ಹೊಂದಿದ್ದ ಭಾರತೀಯ ಕಂಪೆನಿಗಳು ಈ ಬಾರಿ ಶೇ.13.5 ಪಾಲನ್ನು ಪಡೆಯುವ ಮೂಲಕ ವ್ಯಾಪಾರದಲ್ಲಿ ಕುಸಿತ ಕಂಡಿದೆ.

ಮಾರಾಟವಾದ ಫೋನ್ ಗಳ ಪೈಕಿ ಶೇ.94.5 ಫೋನ್ ಗಳು 4ಜಿ ನೆಟ್ ವರ್ಕಿಗೆ ಬೆಂಬಲ ನೀಡುವ ಫೋನ್‍ಗಳು ಎಂದು ವರದಿ ತಿಳಿಸಿದೆ.

ಮಾರಾಟವಾದ 10 ಫೋನ್‍ಗಳ ಪೈಕಿ 5 ಫೋನ್‍ಗಳು 13 ಮೆಗಾ ಪಿಕ್ಸೆಲ್ ಅಥವಾ ಅದಕ್ಕಿಂತ ಹೆಚ್ಚಿನ ಪಿಕ್ಸೆಲ್ ಹೊಂದಿದ ಫೋನ್ ಗಳಾಗಿದ್ದು, ಈ ವಿಭಾಗದಲ್ಲೂ ಶೇ.60 ರಷ್ಟು ಚೀನಾದ ಮೂಲದ ಕಂಪೆನಿಗಳ ಫೋನ್ ಮಾರಾಟವಾಗಿದೆ.

5 ಇಂಚು ಸ್ಕ್ರೀನ್ ಗಾತ್ರವನ್ನು ಹೊಂದಿದ ಫೋನ್‍ಗಳ ಮಾರಾಟ ಕುಸಿತಗೊಂಡಿದ್ದು, 2016ರಲ್ಲಿ ಶೇ.40.3 ರಷ್ಟು ಈ ಫೋನ್‍ಗಳು ಪಾಲನ್ನು ಹೊಂದಿದ್ದರೆ, ಈ ಬಾರಿ ಶೇ.21.2 ಪಾಲನ್ನು ಹೊಂದಿದೆ.

ಡೈರೆಕ್ಟ್ ಇಂಟರ್‍ನೆಟ್ ಚಾನೆಲ್(ಕಂಪೆನಿಯೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು) ಒಟ್ಟು ಶೇ.4 ರಷ್ಟು ಪಾಲನ್ನು ಪಡೆದುಕೊಂಡಿದೆ. ಈ ವಿಭಾಗದಲ್ಲಿ ಕ್ಸಿಯೋಮಿ ಅತಿ ಹೆಚ್ಚು ಫೋನ್‍ಗಳನ್ನು ಮಾರಾಟ ಮಾಡಿದೆ.

6 ಸಾವಿರ ರೂ. ಮತ್ತು 12 ಸಾವಿರ ರೂ. ಬೆಲೆಯಿರುವ ಫೋನ್‍ಗಳು ಭಾರತದಲ್ಲಿ ಅತಿಹೆಚ್ಚು ಮಾರಾಟವಾಗಿದ್ದು, ಕಳೆದ ಅವಧಿಗೆ ಹೋಲಿಸಿದರೆ ಈ ಬಾರಿ ಆನ್‍ಲೈನ್ ಮಾರಾಟ ಶೇ.7.7ರಷ್ಟು ಬೆಳವಣಿಗೆ ಕಂಡಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:2016ರಲ್ಲಿ ಅತಿಹೆಚ್ಚು ಮಾರಾಟವಾದ ವಿಶ್ವದ ಟಾಪ್ 10 ಫೋನ್‍ಗಳ ಪಟ್ಟಿ ಇಲ್ಲಿದೆ

ಟಾಪ್ 5 ಕಂಪೆನಿಗಳು:
ಮೊದಲ ತ್ರೈಮಾಸಿಕದಲ್ಲಿ ಭಾರತದ ಒಂದೇ ಒಂದು ಕಂಪೆನಿ ಟಾಪ್ 5 ಒಳಗಡೆ ಸ್ಥಾನವನ್ನು ಪಡೆದುಕೊಂಡಿಲ್ಲ. ದಕ್ಷಿಣ ಕೊರಿಯಾದ ಸ್ಯಾಮ್‍ಸಂಗ್ ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದುವರಿದರೆ, ಉಳಿದ 4 ಸ್ಥಾನಗಳನ್ನು ಚೈನಾ ಕಂಪೆನಿಗಳು ಪಡೆದುಕೊಂಡಿರುವುದು ವಿಶೇಷ.

#1 ಸ್ಯಾಮ್‍ಸಂಗ್:


ಶೇ.28ರಷ್ಟು ಪಾಲನ್ನು ಪಡೆಯುವ ಮೂಲಕ ಸ್ಯಾಮ್‍ಸಂಗ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದು, ಗೆಲಾಕ್ಸಿ ಜೆ2 ಅತಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಿದೆ. ಅಷ್ಟೇ ಅಲ್ಲದೇ ಎ ಸಿರೀಸ್ ಫೋನ್‍ಗಳು ಹೆಚ್ಚು ಮಾರಾಟವಾಗುತ್ತಿದೆ.

#2 ಕ್ಸಿಯೋಮಿ:


ಈ ಅವಧಿಯಲ್ಲಿ ಶೇ.38ರಷ್ಟು ಬೆಳವಣಿಗೆ ಸಾಧಿಸುವ ಮೂಲಕ ಶೇ.14.2ರಷ್ಟು ಪಾಲನ್ನು ಪಡೆಯುದರೊಂದಿಗೆ ಕ್ಸಿಯೋಮಿಗೆ ಎರಡನೇ ಸ್ಥಾನ ಸಿಕ್ಕಿದೆ. ರೆಡ್ ಮೀ 4 ಮತ್ತು 4ಎ ಅತಿ ಹೆಚ್ಚು ಮಾರಾಟವಾಗುತ್ತಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರೆಡ್‍ಮೀ 4ಎ: ಜಸ್ಟ್ 4 ನಿಮಿಷದಲ್ಲಿ ಎಷ್ಟು ಫೋನ್ ಮಾರಾಟವಾಗಿದೆ ಗೊತ್ತಾ?

#3 ವಿವೋ:


ಈ ಬಾರಿ ಐಪಿಎಲ್ ಕಪ್ ಪ್ರಾಯೋಜಕ ಕಂಪೆನಿ ವಿವೋ ಕಳೆದ ವರ್ಷ ಟಾಪ್ 10 ಪಟ್ಟಿಯಲ್ಲಿ ಇರಲಿಲ್ಲ. ಆದರೆ 2016 ಕೊನೆಯ ತ್ರೈಮಾಸಿಕ ಮತ್ತು ಈ ತ್ರೈಮಾಸಿಕದಲ್ಲಿ ಹೆಚ್ಚು ಫೋನ್ ಮಾರಾಟವಾಗುವ ಮೂಲಕ ಮಾರುಕಟ್ಟೆಯಲ್ಲಿ ಶೇ10.5 ರಷ್ಟು ಪಾಲನ್ನು ಪಡೆದುಕೊಂಡಿದೆ. 10 ಸಾವಿರ ರೂ. ಗಿಂತ ಕಡಿಮೆ ಬೆಲೆಯ ಫೋನ್ ಮಾರಾಟದಿಂದಾಗಿ ವಿವೋಗೆ ಮೂರನೇ ಸ್ಥಾನ ಸಿಕ್ಕಿದೆ.

#4.ಲೆನೋವೊ(ಮೊಟರೋಲಾ ಸೇರಿ)


ಚೀನಾದ ಲೆನೋವೊ ಶೇ.9.5ರಷ್ಟು ಪಾಲನ್ನು ಪಡೆಯುವ ಮೂಲಕ 4ನೇ ಸ್ಥಾನವನ್ನು ಪಡೆದುಕೊಂಡಿದೆ.

#5. ಒಪ್ಪೋ:

ಟೀಂ ಇಂಡಿಯಾದ ನೂತನ ಜೆರ್ಸಿ ಪ್ರಾಯೋಜಕರಾದ ಚೀನಾದ ಮತ್ತೊಂದು ಕಂಪೆನಿ ಒಪ್ಪೋ ಸಹ ಶೇ.9.3ರಷ್ಟು ಪಾಲನ್ನು ಪಡೆದುಕೊಂಡಿದ್ದು ಲೆನೆವೋದ ಸನಿಹವೇ ಬಂದು ನಿಂತಿದೆ.

ಈ ಐದು ಕಂಪೆನಿಗಳು ಮಾರುಕಟ್ಟೆಯಲ್ಲಿ ಶೇ.71.1 ಪಾಲನ್ನು ಪಡೆದುಕೊಂಡಿದ್ದರೆ, ಭಾರತದ ಕಂಪೆನಿಗಳು ಮತ್ತು ವಿಶ್ವದ ಇತರೇ ಕಂಪೆನಿಗಳು ಶೇ.28.3 ಪಾಲನ್ನು ಪಡೆದುಕೊಂಡಿದೆ.

ಇದನ್ನೂ ಓದಿ: 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?